ದ್ವೇಷದ ಭಾಷಣಕ್ಕಾಗಿ ಪ್ರಧಾನಿ ಮೋದಿ ವಿರುದ್ಧ ಕ್ರಮ ಕೋರಿ 2,200ಕ್ಕೂ ಅಧಿಕ ನಾಗರಿಕರಿಂದ ಚುನಾವಣಾ ಆಯೋಗಕ್ಕೆ ಮನವಿ
ಹೊಸದಿಲ್ಲಿ: ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬಂದರ ಜನರ ಸಂಪತ್ತನ್ನು “ನುಸುಳುಕೋರರಿಗೆ” ಹಂಚಲಿದೆ ಎಂದು ತಮ್ಮ ಪ್ರಚಾರ ಭಾಷಣದಲ್ಲಿ ಹೇಳಿದ ಪ್ರಧಾನಿ ನರೇಂದ್ರ ಮೋದಿ ಅವರ ವಿರುದ್ಧ ಕ್ರಮಕೈಗೊಳ್ಳಬೇಕೆಂದು ಆಗ್ರಹಿಸಿ 2,200ಕ್ಕೂ ಅಧಿಕ ನಾಗರಿಕರು ಚುನಾವಣಾ ಆಯೋಗಕ್ಕೆ ಪತ್ರ ಬರೆದಿದ್ದಾರೆ.
“ಪ್ರಧಾನಿಯವರು ಬಿಜೆಪಿಯ ತಾರಾ ಪ್ರಚಾರಕರಾಗಿ ಎಪ್ರಿಲ್ 21ರಂದು ರಾಜಸ್ಥಾನದಲ್ಲಿ ಸಂವಿಧಾನವನ್ನು ಗೌರವಿಸುವ ದೇಶದ ಲಕ್ಷಾಂತರ ಜನರ ಭಾವನೆಗಳಿಗೆ ನೋವುಂಟು ಮಾಡಿದ್ದಾರೆ. ಈ ಭಾಷಣ ಅಪಾಯಕಾರಿ ಮತ್ತು ದೇಶದ ಮುಸ್ಲಿಮರ ಮೇಲೆ ನೇರ ದಾಳಿಯಾಗಿದೆ,” ಎಂದು ಆಯೋಗಕ್ಕೆ ಮಾಡಿರುವ ಅಪೀಲಿನಲ್ಲಿ ತಿಳಿಸಲಾಗಿದೆ.
“ಮುಸ್ಲಿಮರ ವಿರುದ್ಧ ನಿಂದನಾತ್ಮಕ ಭಾಷೆಯನ್ನು ಮತಗಳನ್ನು ಯಾಚಿಸುವ ಉದ್ದೇಶದಿಂದ ಪ್ರಧಾನಿ ಬಳಸಿರುವುದು, ಜಗತ್ತಿನ “ಮದರ್ ಆಫ್ ಡೆಮಾಕ್ರೆಸಿ” ಎಂಬ ಹೆಗ್ಗಳಿಕೆ ಪಡೆದಿರುವ ಭಾರತದ ಘನತೆಯನ್ನು ಕುಂದುಂಟು ಮಾಡುತ್ತದೆ, ಇಂತಹ ದ್ವೇಷದ ಭಾಷಣದ ವಿರುದ್ಧ ಚುನಾವಣಾ ಆಯೋಗ ಕ್ರಮಕೈಗೊಳ್ಳಲು ವಿಫಲವಾದರೆ ನಿಮಗಿಂತ ಮುಂಚೆ ಈ ಹುದ್ದೆಯಲ್ಲಿದ್ದ ಹಲವು ನಿಷ್ಠಾವಂತ ಅಧಿಕಾರಿಗಳು ಎತ್ತಿ ಹಿಡಿದಿದ್ದ ಸಂಸ್ಥೆಯ ವಿಶ್ವಾಸಾರ್ಹತೆ ಮತ್ತು ಸ್ವಾಯತ್ತತೆಗೆ ಧಕ್ಕೆ ತಂದಂತಾಗುತ್ತದೆ,” ಎಂದು ಅಪೀಲಿನಲ್ಲಿ ಹೇಳಲಾಗಿದೆ.