ಶ್ರೀಲಂಕಾ ಸೇನೆಯಿಂದ 23 ಭಾರತೀಯ ಮೀನುಗಾರರ ಬಂಧನ
ರಾಮನಾಥಪುರಂ : ಶ್ರೀಲಂಕಾ ನೌಕಾ ಪಡೆ ಭಾರತದ 23 ಮಂದಿ ಮೀನುಗಾರರನ್ನು ರಾಮೇಶ್ವರಂನಿಂದ ಬಂಧಿಸಿದೆ ಎಂದು ಅಧಿಕಾರಿಗಳು ರವಿವಾರ ತಿಳಿಸಿದ್ದಾರೆ.
ಈ ಮೀನುಗಾರರು ಪಾಲ್ಕ್ಬೇ ಸಮುದ್ರ ಪ್ರದೇಶದಲ್ಲಿರುವ ಡೆಲ್ಫ್ಟ್ ದ್ವೀಪದ ಸಮೀಪ ಮೀನುಗಾರಿಕೆ ನಡೆಸುತ್ತಿದ್ದರು. ಶ್ರೀಲಂಕಾ ನೌಕಾ ಪಡೆ ಅಲ್ಲಿಗೆ ಆಗಮಿಸಿತು ಹಾಗೂ ಅಲ್ಲಿಂದ 23 ಮೀನುಗಾರರನ್ನು ಬಂಧಿಸಿತು. ಅನಂತರ ಅವರನ್ನು ತನಿಖೆಗಾಗಿ ಜಾಫ್ನಾದಲ್ಲಿರುವ ಮೈಲಾಟಿ ನೌಕಾ ಶಿಬಿರಕ್ಕೆ ಕರೆದೊಯ್ದಿತು ಎಂದು ರಾಮೇಶ್ವರಂ ಮೀನುಗಾರಿಕೆ ಅಸೋಸಿಯೇಶನ್ ತಿಳಿಸಿದೆ.
ಕಳೆದ ತಿಂಗಳು ಶ್ರೀಲಂಕಾ ನೌಕಾ ಪಡೆ 18 ಭಾರತೀಯ ಮೀನುಗಾರರನ್ನು ಬಂಧಿಸಿತ್ತು ಹಾಗೂ ಶ್ರೀಲಂಕೆಯ ಜಲ ಭಾಗದಲ್ಲಿ ಭಾರತದ ಮೀನುಗಾರರ ಎರಡು ದೋಣಿಗಳನ್ನು ವಶಪಡಿಸಿಕೊಂಡಿತ್ತು.
ಬಂಧಿತ ಭಾರತೀಯ ಮೀನುಗಾರರು ಹಾಗೂ ಅವರ ದೋಣಿಗಳನ್ನು ಮನ್ನಾರ್ನ ತಲ್ಪಾಡು ಪಿಯರ್ಗೆ ಕೊಂಡೊಯ್ದಿತ್ತು ಹಾಗೂ ಕಾನೂನು ಕ್ರಮ ತೆಗೆದುಕೊಳ್ಳಲು ತಲೈಮನ್ನಾರ್ ಫಿಶರೀಶ್ ಇನ್ಸ್ಪೆಕ್ಟರ್ಗೆ ವರ್ಗಾಯಿಸಿತ್ತು.
ಶ್ರೀಲಂಕಾ ನೌಕಾ ಪಡೆ ಭಾರತೀಯ ಮೀನುಗಾರರನ್ನು ಬಂಧಿಸುತ್ತಿರುವುದು ಇತ್ತೀಚೆಗಿನ ದಿನಗಳಲ್ಲಿ ಕೇಂದ್ರ ಸರಕಾರಕ್ಕೆ ಮಾತ್ರವಲ್ಲ ತಮಿಳುನಾಡು ಸರಕಾರಕ್ಕೆ ಕೂಡ ಆತಂಕ ಉಂಟು ಮಾಡುತ್ತಿದೆ.
ಕಳೆದ ವರ್ಷ ಜುಲೈಯಲ್ಲಿ ಭಾರತಕ್ಕೆ ಭೇಟಿ ನೀಡಿದ ಸಂದರ್ಭ ಶ್ರೀಲಂಕಾದ ಅಧ್ಯಕ್ಷ ರಣಿಲ್ ವಿಕ್ರಮಸಿಂಘೆ ಹಾಗೂ ಪ್ರಧಾನಿ ನರೇಂದ್ರ ಮೋದಿ ಸಭೆಯ ಸಂದರ್ಭ ಕೂಡ ಈ ವಿಷಯ ಚರ್ಚೆಯಾಗಿತ್ತು.