ದೇಶಾದ್ಯಂತ ಗುರುತಿಸಲಾಗಿರುವ 23,000 ಬೀದಿ ಮಕ್ಕಳಿಗೆ ಪುನರ್ವಸತಿ ಕಲ್ಪಿಸಲಾಗುತ್ತಿದೆ: ಅಧಿಕಾರಿಗಳ ಹೇಳಿಕೆ

Update: 2023-06-30 16:21 GMT

ಸಾಂದರ್ಭಿಕ ಚಿತ್ರ    Photo; Wikipedia

ಹೊಸದಿಲ್ಲಿ: ವೆಬ್ ಪೋರ್ಟಲ್ ಒಂದರ ನೆರವಿನಿಂದ ದೇಶಾದ್ಯಂತ ಗುರುತಿಸಲಾಗಿರುವ 23,000 ಬೀದಿಮಕ್ಕಳಿಗೆ ಪುನರ್ವಸತಿಯನ್ನು ಕಲ್ಪಿಸಲಾಗುತ್ತಿದೆ ಎಂದು ಅಧಿಕಾರಿಗಳು ಶುಕ್ರವಾರ ತಿಳಿಸಿದ್ದಾರೆ.

‘ಬಾಲ ಸ್ವರಾಜ್’ ಪೋರ್ಟಲ್ ಮೂಲಕ ಗುರುತಿಸುವ ಪ್ರಕ್ರಿಯೆಯನ್ನು ನಡೆಸಲಾಗಿತ್ತು. ಪುನರ್ವಸತಿ ಕಲ್ಪಿಸಲು ಈ ವೆಬ್‍ಸೈಟ್‍ನಲ್ಲಿ ಇಂತಹ ಮಕ್ಕಳ ಕುರಿತು ಮಾಹಿತಿಗಳನ್ನು ಅಪ್ಲೋಡ್ ಮಾಡಲಾಗುತ್ತದೆ ಮತ್ತು ನಿಗಾಯಿರಿಸಲಾಗುತ್ತದೆ ಎಂದು ಅಧಿಕಾರಿಗಳು ತಿಳಿಸಿದರು.

ಅಧಿಕಾರಿಗಳು ತಿಳಿಸಿರುವಂತೆ ಈ ಮಕ್ಕಳನ್ನು ತಮ್ಮ ಮನೆಗಳಿಂದ ಓಡಿ ಹೋಗಿ ಅಥವಾ ತಮ್ಮ ಕುಟುಂಬಗಳಿಂದ ಪರಿತ್ಯಕ್ತರಾಗಿ ಬೀದಿಗಳಲ್ಲಿ ಒಂಟಿಯಾಗಿ ವಾಸವಾಗಿರುವವರು; ತಮ್ಮ ಕುಟುಂಬಗಳೊಂದಿಗೆ ಬೀದಿಗಳಲ್ಲಿ ವಾಸವಾಗಿರುವವರು; ಕೊಳಗೇರಿ ನಿವಾಸಿಗಳಾಗಿದ್ದು ಹಗಲಿನಲ್ಲಿ ಬೀದಿಗಳಲ್ಲಿ ಸುತ್ತಾಡಿ ರಾತ್ರಿ ತಮ್ಮ ಮನೆಗಳಿಗೆ ಮರಳುವವರು ಎಂದು ಮೂರು ಗುಂಪುಗಳಲ್ಲಿ ವರ್ಗೀಕರಿಸಲಾಗಿದೆ. 23,000 ಬೀದಿಮಕ್ಕಳ ಪೈಕಿ ಶೇ.4ರಷ್ಟು ಮೊದಲ ಗುಂಪಿಗೆ,ಶೇ.53ರಷ್ಟು ಎರಡನೇ ಗುಂಪಿಗೆ ಮತ್ತು ಶೇ,43ರಷ್ಟು ಮೂರನೇ ಗುಂಪಿಗೆ ಸೇರಿದ್ದಾರೆ.

ಎಲ್ಲ ಮೂರೂ ವರ್ಗಗಳಿಗೆ ಪುನರ್ವಸತಿ ಪ್ರಕ್ರಿಯೆಯು ಭಿನ್ನವಾಗಿದೆ. ಒಂಟಿಯಾಗಿರುವ ಮಕ್ಕಳನ್ನು ಆಶ್ರಯ ಧಾಮಗಳಿಗೆ ಕಳುಹಿಸಲಾಗುತ್ತಿದ್ದರೆ, ಕೊಳಗೇರಿಗಳಲ್ಲಿ ತಮ್ಮ ಕುಟುಂಬಗಳೊಂದಿಗೆ ವಾಸವಿರುವ ಮಕ್ಕಳಿಗೆ ಕಲ್ಯಾಣ ಯೋಜನೆಗಳ ಅಡಿ ಪುನರ್ವಸತಿ ಕಲ್ಪಿಸಲಾಗುತ್ತಿದೆ ಎಂದು ಅಧಿಕಾರಿಗಳು ತಿಳಿಸಿದರು.

ತಮ್ಮ ಕುಟುಂಬಗಳೊಂದಿಗೆ ಬೀದಿಗಳಲ್ಲಿ ವಾಸವಾಗಿರುವ ಮಕ್ಕಳ ಪೈಕಿ ಹೆಚ್ಚಿನವರು ಉತ್ತಮ ಅವಕಾಶಗಳನ್ನು ಹುಡುಕಿಕೊಂಡು ದೊಡ್ಡ ನಗರಗಳಿಗೆ ವಲಸೆ ಬಂದವರಾಗಿದ್ದು,ಅವರನ್ನು ಅವರ ಗ್ರಾಮಗಳಿಗೆ ವಾಪಸ್ ಕಳುಹಿಸಿ ಕಲ್ಯಾಣ ಯೋಜನೆಗಳಡಿ ಪುನರ್ವಸತಿ ಕಲ್ಪಿಸಲಾಗುತ್ತಿದೆ ಎಂದರು.

ರಕ್ಷಣೆ ಮತ್ತು ಪುನರ್ವಸತಿ ಪ್ರಕ್ರಿಯೆಯನ್ನು ವಿವರಿಸಿದ ಅಧಿಕಾರಿಗಳು,ಮಗುವನ್ನು ರಕ್ಷಿಸಿದಾಗ ಅದನ್ನು ಮಕ್ಕಳ ಕಲ್ಯಾಣ ಸಮಿತಿಯ ಮುಂದೆ ಹಾಜರು ಪಡಿಸಲಾಗುತ್ತದೆ ಹಾಗೂ ಸಾಮಾಜಿಕ ತನಿಖಾ ವರದಿ ಮತ್ತು ವ್ಯಕ್ತಿಗತ ಆರೈಕೆ ಯೋಜನೆಯನ್ನು ಸಿದ್ಧಪಡಿಸಲಾಗುತ್ತದೆ. ನಂತರ ಸಮಿತಿಯು ಮಗುವಿನ ಪುನರ್ವಸತಿಗೆ ಶಿಫಾರಸುಗಳನ್ನು ಮಾಡುತ್ತದೆ ಎಂದರು.

Tags:    

Writer - ವಾರ್ತಾಭಾರತಿ

contributor

Editor - Ismail

contributor

Byline - ವಾರ್ತಾಭಾರತಿ

contributor

Similar News