ಶೆ.25ರಷ್ಟು 14-18 ವರ್ಷದ ಗ್ರಾಮೀಣ ವಿದ್ಯಾರ್ಥಿಗಳಿಗೆ ಗ್ರೇಡ್‌ 2 ಹಂತದ ಪಠ್ಯ ನಿರರ್ಗಳವಾಗಿ ಓದಲಾಗುತ್ತಿಲ್ಲ : ಸಮೀಕ್ಷಾ ವರದಿ

Update: 2024-01-18 12:26 GMT

Photo: PTI 

ಹೊಸದಿಲ್ಲಿ: ತಮ್ಮ ಪ್ರಾದೇಶಿಕ ಭಾಷೆಗಳಲ್ಲಿ 14-18 ವಯೋವರ್ಗದ ಶೇ25ರಷ್ಟು ಹದಿಹರೆಯದವರಿಗೆ ಗ್ರೇಡ್‌ 2ನೇ ಹಂತದ ಪಠ್ಯವನ್ನು ನಿರರ್ಗಳವಾಗಿ ಓದಲು ಸಾಧ್ಯವಾಗುತ್ತಿಲ್ಲ ಹಾಗೂ ಶೇ 42.7ರಷ್ಟು ಮಂದಿಗ ಇಂಗ್ಲಿಷ್‌ ವಾಕ್ಯಗಳನ್ನು ಓದಲು ತಿಳಿದಿಲ್ಲ ಎಂದು ಬುಧವಾರ ಬಿಡುಗಡೆಗೊಂಡ ವಾರ್ಷಿಕ ಶೈಕ್ಷಣಿಕ ಸ್ಥಿತಿಗತಿ (ಆನ್ಯುವಲ್‌ ಸ್ಟೇಟಸ್‌ ಆಫ್‌ ಎಜುಕೇಶನ್) ವರದಿ ತಿಳಿಸಿದೆ.

“ಬಿಯಾಂಡ್‌ ಬೇಸಿಕ್ಸ್”‌ ಹೆಸರಿನ ವರದಿಯನ್ನು ಶಿಕ್ಷಣ ಕೇಂದ್ರಿತ ಲಾಭೋದ್ದೇಶರಹಿತ ಸಂಸ್ಥೆ ಪ್ರಥಮ್‌ ಫೌಂಡೇಶನ್‌ ಸಿದ್ಧಪಡಿಸಿದೆ.

ವರದಿಯ ಪ್ರಕಾರ 14-18 ವಯೋವರ್ಗದ ಶೇ86.8ರಷ್ಟು ಮಂದಿ ಶಾಲೆ ಅಥವಾ ಕಾಲೇಜಿಗೆ ದಾಖಲಾತಿ ಪಡೆದಿದ್ದಾರೆ. ದಾಖಲಾತಿ ಪ್ರಮಾಣವು ವಯಸ್ಸು ಹೆಚ್ಚಾದಂತೆ ಕಡಿಮೆಯಾಗುತ್ತದೆ ಎಂದು ವರದಿ ತಿಳಿಸಿದೆ.

2017ರಲ್ಲಿ ಗ್ರೇಡ್-2 ಹಂತದ ಪಠ್ಯವನ್ನು 14-18 ವಯೋವರ್ಗದ ಶೇ76.6 ರಷ್ಟು ವಿದ್ಯಾರ್ಥಿಗಳು ಓದಲು ಸಮರ್ಥರಾಗಿದ್ದರೆ ಈ ಸಂಖ್ಯೆ 2023ರಲ್ಲಿ ಸ್ವಲ್ಪ ಕಡಿಮೆ, ಅಂದರೆ ಶೇ73.6 ಆಗಿದೆ.

ಹುಡುಗರಿಗೆ (ಶೇ70.9) ಹೋಲಿಸಿದಾಗ ಹೆಚ್ಚು ಹುಡುಗಿಯರು(ಶೇ 76) ಗ್ರೇಡ್‌ 2 ಹಂತದ ಪಠ್ಯವನ್ನು ತಮ್ಮ ಪ್ರಾದೇಶಿಕ ಭಾಷೆಯಲ್ಲಿ ಓದಲು ಸಮರ್ಥರಾಗಿದ್ದಾರೆ.

ಗ್ರಾಮೀಣ ಭಾಗದ 14-18 ವಯೋವರ್ಗದ ವಿದ್ಯಾರ್ಥಿಗಳು ಕಲಾ ವಿಭಾಗವನ್ನು ಹೆಚ್ಚಾಗಿ ಆಯ್ದುಕೊಳ್ಳುತ್ತಾರೆ. ಹನ್ನೊಂದನೇ ಅಥವಾ ಅದಕ್ಕಿಂತ ಮೇಲಿನ ತರಗತಿಗಳಲ್ಲಿ ಶೇ55.7 ರಷ್ಟು ಗ್ರಾಮೀಣ ವಿದ್ಯಾರ್ಥಿಗಳು ಕಲಾ ವಿಭಾಗವನ್ನು ಆಯ್ದುಕೊಂಡಿದ್ದರೆ ಶೇ 31.7ರಷ್ಟು ಮಂದಿ ವಿಜ್ಞಾನ, ತಂತ್ರಜ್ಞಾನ, ಇಂಜಿನಿಯರಿಂಗ್‌ ಮತ್ತು ಗಣಿತ (ಎಸ್‌ಟಿಇಎಂ) ಆಯ್ದುಕೊಂಡಿದಾರೆ ಹಾಗೂ ಶೇ9.4ರಷ್ಟು ಮಂದಿ ವಾಣಿಜ್ಯ ವಿಭಾಗವನ್ನು ಆಯ್ದುಕೊಂಡಿದ್ದಾರೆ ಎಂದು ವರದಿ ಹೇಳಿದೆ. ಎಸ್‌ಟಿಇಎಂ ಆಯ್ದುಕೊಳ್ಳಲು ಶೇ 36.3 ಹುಡುಗರು ಒಲವು ತೋರಿಸಿದ್ದರೆ ಹುಡುಗಿಯರು ಶೇ28.1 ಒಲವು ತೋರಿಸಿದ್ದಾರೆ.

ಈ ಬಿಯಾಂಡ್‌ ಬೇಸಿಕ್ಸ್‌ ಸಮೀಕ್ಷೆಯನ್ನು ದೇಶದ 26 ರಾಜ್ಯಗಳ 28 ಜಿಲ್ಲೆಗಳಲ್ಲಿ ನಡೆಸಲಾಗಿದ್ದು 14-18 ವಯೋವರ್ಗದ 34,745 ವಿದ್ಯಾರ್ಥಿಗಳು ಈ ಸಮೀಕ್ಷೆಯ ಭಾಗವಾಗಿದ್ದಾರೆ. ಈ ಸಮೀಕ್ಷೆಯ ಪ್ರಕಾರ ಶೇ 86.8 ರಷ್ಟು ಈ ವಯೋವರ್ಗದ ವಿದ್ಯಾರ್ಥಿಗಳು ಶೈಕ್ಷಣಿಕ ಸಂಸ್ಥೆಗಳಲ್ಲಿ ದಾಖಲಾಗಿದ್ದಾರೆ, ಇದು 2017ರ ಅಂಕಿಅಂಶಗಳಿಗೆ ಸಮನಾಗಿದೆ. 2023 ವರದಿಯ ಪ್ರಕಾರ ಯಾವುದೇ ಶಾಲೆಯಲ್ಲಿ ಔಪಚಾರಿಕ ಶಿಕ್ಷಣ ಪಡೆಯದ 14 ವರ್ಷ ಪ್ರಾಯದ ಮಕ್ಕಳ ಪ್ರಮಾಣ ಶೇ 3.9 ಆಗಿದ್ದರೆ 18 ವರ್ಷ ಪ್ರಾಯದವರ ಪ್ರಮಾಣ ಶೇ32.6 ಆಗಿದೆ. 2017ರಲ್ಲಿ ಈ ಅಂಕಿಅಂಶಗಳು ಕ್ರಮವಾಗಿ ಶೇ 5 ಹಾಗೂ ಶೇ30 ಆಗಿದ್ದವು.

ಶೇ 25ರಷ್ಟು ಹುಡುಗರು ಶಿಕ್ಷಣ ಮುಂದುವರಿಸಲು ಆಸಕ್ತಿ ಇಲ್ಲ ಎಂದು ಹೇಳಿದ್ದರೆ ಶೇ 20ರಷ್ಟು ಹಡುಗಿಯರು ಕುಟುಂಬದ ಸಮಸ್ಯೆಗಳ ನೆಪ ಒಡ್ಡಿದ್ದರೆ ಇನ್ನು ಕೆಲವರು ಆರ್ಥಿಕ ಸಮಸ್ಯೆಗಳು ಮತ್ತು ಪರೀಕ್ಷೆಯಲ್ಲಿ ವೈಫಲ್ಯ ಕಾರಣಗಳನ್ನು ನೀಡಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - Ismail

contributor

Byline - ವಾರ್ತಾಭಾರತಿ

contributor

Similar News