ಬಿಜೆಪಿಯ ಲೋಕಸಭಾ ಅಭ್ಯರ್ಥಿಗಳ ಪೈಕಿ ಶೇ 25ರಷ್ಟು ಮಂದಿ ಇತರ ಪಕ್ಷಗಳಿಂದ ವಲಸೆ ಬಂದವರು

Update: 2024-05-15 07:35 GMT

ಸಾಂದರ್ಭಿಕ ಚಿತ್ರ

ಹೊಸದಿಲ್ಲಿ: ಈ ಬಾರಿಯ ಲೋಕಸಭಾ ಚುನಾವಣೆಗಳಲ್ಲಿ ಬಿಜೆಪಿಯಿಂದ ಸ್ಪರ್ಧಿಸುತ್ತಿರುವ ಸುಮಾರು ಶೇ 25ರಷ್ಟು ಅಭ್ಯರ್ಥಿಗಳು ಬೇರೆ ಪಕ್ಷಗಳಿಂದ ಬಿಜೆಪಿಗೆ ವಲಸೆ ಬಂದವರಾಗಿದ್ದಾರೆ. ಬಿಜೆಪಿ ಕಣಕ್ಕಿಳಿಸಿರುವ 435 ಅಭ್ಯರ್ಥಿಗಳ ಪೈಕಿ 106 ಮಂದಿ ಕಳೆದ 10 ವರ್ಷ ಅವಧಿಯಲ್ಲಿ ಕೇಸರಿ ಪಕ್ಷಕ್ಕೆ ವಲಸೆ ಬಂದವರಾಗಿದ್ದಾರೆ. ಅವರಲ್ಲಿ 90 ಮಂದಿ ಕಳೆದ ಐದು ವರ್ಷ ಅವಧಿಯಲ್ಲಿ ಬಿಜೆಪಿ ಸೇರ್ಪಡೆಗೊಂಡ ಇತರ ಪಕ್ಷದವರಾಗಿದ್ದಾರೆ.

ಆಂಧ್ರ ಪ್ರದೇಶದಲ್ಲಿ ಗರಿಷ್ಠ ಆರು ಮಂದಿ ಬಿಜೆಪಿ ಅಭ್ಯರ್ಥಿಗಳು ವಲಸಿಗರಾಗಿದ್ದಾರೆ. ಇಬ್ಬರು ಕಾಂಗ್ರೆಸ್‌, ವೈಎಸ್‌ಆರ್‌ಪಿ ಹಾಗೂ ಬಿಜೆಪಿಯ ಪ್ರಸ್ತುತ ಮಿತ್ರ ಪಕ್ಷ ಟಿಡಿಪಿಯಿಂದ ವಲಸೆ ಬಂದವರು.

ನೆರೆಯ ತೆಲಂಗಾಣದಲ್ಲಿ ಬಿಜೆಪಿಯ 17 ಅಭ್ಯರ್ಥಿಗಳು ಕಾಂಗ್ರೆಸ್‌ ಹಾಗೂ ಬಿಆರ್‌ಎಸ್‌ನಿಂದ ವಲಸೆ ಬಂದವರು. ಅವರಲ್ಲಿ 11 ಮಂದಿ ಚುನಾವಣೆಗಿಂತ ಮುನ್ನ ಬಿಜೆಪಿ ಸೇರಿದವರಾಗಿದ್ದಾರೆ.

ಹರ್ಯಾಣದಲ್ಲಿ 10 ಬಿಜೆಪಿ ಅಭ್ಯರ್ಥಿಗಳ ಪೈಕಿ ಆರು ಮಂದಿ ವಲಸಿಗರಾಗಿದ್ದಾರೆ. ಅವರಲ್ಲಿ ಇಬ್ಬರಾದ ನವೀನ್‌ ಜಿಂದಾಲ್‌ ಮತ್ತು ಅಶೋಕ್‌ ತನ್ವರ್‌, ಲೋಕಸಭಾ ಚುನಾವಣೆಗಿಂತ ಮುನ್ನ ಬಿಜೆಪಿ ಸೇರಿದ್ದರು.

ಪಂಜಾಬ್‌ನಲ್ಲಿ ಬಿಜೆಪಿಯ 13 ಅಭ್ಯರ್ಥಿಗಳ ಪೈಕಿ 7 ಮಂದಿ ವಲಸಿಗರಾಗಿದ್ದರೆ, ಜಾರ್ಖಂಡ್‌ನಲ್ಲೂ 13 ಅಭ್ಯರ್ಥಿಗಳ ಪೈಕಿ 7 ಮಂದಿ ವಲಸಿಗರಾಗಿದ್ದಾರೆ.

ಉತ್ತರ ಪ್ರದೇಶದಲ್ಲಿ 74 ಬಿಜೆಪಿ ಅಭ್ಯರ್ಥಿಗಳ ಪೈಕಿ 23 ಮಂದಿ (ಶೇ 31) 2014ರಿಂದೀಚೆಗೆ ಪಕ್ಷಕ್ಕೆ ಬಂದ ಇತರ ಪಕ್ಷದವರಾಗಿದ್ದಾರೆ.

ಒಡಿಶಾದಲ್ಲಿ ಒಟ್ಟು ಬಿಜೆಪಿ ಅಭ್ಯರ್ಥಿಗಳ ಪೈಕಿ ಶೇ 29, ತಮಿಳುನಾಡಿನಲ್ಲಿ ಶೇ 26ರಷ್ಟು ಮಂದಿ ವಲಸಿಗರಾಗಿದ್ದಾರೆ.

ಪಶ್ಚಿಮ ಬಂಗಾಳದ 42 ಬಿಜೆಪಿ ಅಭ್ಯರ್ಥಿಗಳ ಪೈಕಿ 19 ಮಂದಿ ವಲಸಿಗರಾಗಿದ್ದರೆ, ಗುಜರಾತ್‌ನಲ್ಲಿ 26 ಅಭ್ಯರ್ಥಿಗಳ ಪೈಕಿ ಇಬ್ಬರು ಇತರ ಪಕ್ಷಗಳಿಂದ ವಲಸೆ ಬಂದವರಾಗಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - Ismail

contributor

Byline - ವಾರ್ತಾಭಾರತಿ

contributor

Similar News