2017ರಿಂದ 2022ರವರೆಗೆ ಕಸ್ಟಡಿ ಅತ್ಯಾಚಾರದ 275 ಪ್ರಕರಣಗಳು ದಾಖಲು: NCRB ವರದಿ

Update: 2024-02-25 15:42 GMT

ಸಾಂದರ್ಭಿಕ ಚಿತ್ರ

ಹೊಸದಿಲ್ಲಿ,ಫೆ.25: 2017ರಿಂದ 2022ರವರೆಗೆ ದೇಶದಲ್ಲಿ 275 ಕಸ್ಟಡಿ ಅತ್ಯಾಚಾರ ಪ್ರಕರಣಗಳು ದಾಖಲಾಗಿವೆ ಎಂದು ರಾಷ್ಟ್ರೀಯ ಅಪರಾಧ ದಾಖಲೆಗಳ ಘಟಕ (NCRB)ದ ಅಂಕಿಅಂಶಗಳು ಬಹಿರಂಗಗೊಳಿಸಿವೆ. ಕಾನೂನು ಜಾರಿ ವ್ಯವಸ್ಥೆಗಳಲ್ಲಿ ಸಂವೇದನಾಶೀಲತೆ ಮತ್ತು ಉತ್ತರದಾಯಿತ್ವದ ಕೊರತೆ ಇಂತಹ ಘಟನೆಗಳಿಗೆ ಕಾರಣ ಎಂದು ಮಹಿಳಾ ಹಕ್ಕುಗಳ ಕಾರ್ಯಕರ್ತರು ಆರೋಪಿಸಿದ್ದಾರೆ.

NCRB ದತ್ತಾಂಶಗಳ ಪ್ರಕಾರ ಅಪರಾಧಿಗಳಲ್ಲಿ ಪೋಲಿಸ್ ಸಿಬ್ಬಂದಿ, ಸರಕಾರಿ ಅಧಿಕಾರಿಗಳು, ಸಶಸ್ತ್ರ ಪಡೆಗಳು, ಜೈಲುಗಳು, ಕಸ್ಟಡಿ ಸ್ಥಳಗಳು ಮತ್ತು ಆಸ್ಪತ್ರೆಗಳ ಸಿಬ್ಬಂದಿಗಳು ಸೇರಿದ್ದಾರೆ.

ಇತ್ತೀಚಿನ ವರ್ಷಗಳಲ್ಲಿ ಇಂತಹ ಪ್ರಕರಣಗಳು ಕ್ರಮೇಣ ಇಳಿಮುಖವಾಗಿವೆ ಎಂದು ದತ್ತಾಂಶಗಳು ಎತ್ತಿ ತೋರಿಸಿವೆ. 2017ರಲ್ಲಿ 89 ಪ್ರಕರಣಗಳು, 2018ರಲ್ಲಿ 60 ಪ್ರಕರಣಗಳು, 2019ರಲ್ಲಿ 47,2020ರಲ್ಲಿ 29 ಮತ್ತು 2021ರಲ್ಲಿ 26 ಪ್ರಕರಣಗಳು ದಾಖಲಾಗಿದ್ದರೆ 2022ರಲ್ಲಿ 24 ಪ್ರಕರಣಗಳು ದಾಖಲಾಗಿವೆ.

ಕಸ್ಟಡಿ ಅತ್ಯಾಚಾರ ಪ್ರಕರಣಗಳನ್ನು ಭಾರತೀಯ ದಂಡ ಸಂಹಿತೆ (ಐಪಿಸಿ)ಯ ಕಲಂ 376(2)ರಡಿ ದಾಖಲಿಸಿಕೊಳ್ಳಲಾಗುತ್ತದೆ. ಪೋಲಿಸ್ ಅಧಿಕಾರಿ, ಜೈಲರ್ ಅಥವಾ ಮಹಿಳೆಯ ಕಾನೂನುಬದ್ಧ ಪಾಲನೆಯನ್ನು ಹೊಂದಿರುವ ಇತರ ಯಾವುದೇ ವ್ಯಕ್ತಿಯು ನಡೆಸುವ ಅತ್ಯಾಚಾರ ಅಪರಾಧಕ್ಕೆ ಈ ಕಲಂ ಸಂಬಂಧಿಸಿದೆ.

2017ರಿಂದ ದಾಖಲಾಗಿರುವ 275 ಕಸ್ಟಡಿ ಅತ್ಯಾಚಾರ ಪ್ರಕರಣಗಳಲ್ಲಿ ಉತ್ತರ ಪ್ರದೇಶ (92) ಅಗ್ರಸ್ಥಾನದಲ್ಲಿದ್ದು, ಮಧ್ಯಪ್ರದೇಶ (43) ನಂತರದ ಸ್ಥಾನದಲ್ಲಿದೆ.

ಕಸ್ಟಡಿ ವ್ಯವಸ್ಥೆಗಳು ಅಧಿಕಾರಿಗಳು ಮಹಿಳೆಯರನ್ನು ಲೈಂಗಿಕವಾಗಿ ಬಳಸಿಕೊಳ್ಳಲು ತಮ್ಮ ಅಧಿಕಾರಗಳನ್ನು ದುರ್ಬಳಕೆ ಮಾಡಿಕೊಳ್ಳಲು ವಿಶಿಷ್ಟ ಅವಕಾಶಗಳನ್ನು ಒದಗಿಸುತ್ತವೆ ಎಂದು ಹೇಳಿದ ಪಾಪ್ಯುಲೇಷನ್ ಫೌಂಡೇಷನ್ ಆಫ್ ಇಂಡಿಯಾದ ಕಾರ್ಯನಿರ್ವಾಹಕ ನಿರ್ದೇಶಕಿ ಪೂನಂ ಮುತ್ರೇಜಾ ಅವರು,ಮಹಿಳೆಯರನ್ನು ಅವರ ರಕ್ಷಣೆಗಾಗಿ ಕಸ್ಟಡಿಗೆ ತೆಗೆದುಕೊಂಡಾಗ ಅಥವಾ ಮಾನವ ಕಳ್ಳ ಸಾಗಾಣಿಕೆ ಮತ್ತು ಕೌಟುಂಬಿಕ ಹಿಂಸಾಚಾರದಂತಹ ಸ್ಥಿತಿಗಳಲ್ಲಿ ಮಹಿಳೆಯರು ತಮ್ಮ ರಕ್ಷಣೆಗಾಗಿ ಕಾನೂನಿನ ಮೊರೆ ಹೋದಾಗ ಅವರ ಅಸಹಾಯಕತೆಯನ್ನು ಬಳಸಿಕೊಂಡು ಅವರ ಮೇಲೆ ಲೈಂಗಿಕ ದೌರ್ಜನ್ಯವನ್ನು ನಡೆಸುವ ಘಟನೆಗಳು ಸರಕಾರದ ರಕ್ಷಣೆಯ ನೆಪದಲ್ಲಿ ಅಧಿಕಾರ ದುರ್ಬಳಕೆಯನ್ನು ಪ್ರತಿಬಿಂಬಿಸುತ್ತವೆ ಎಂದರು.

ಪಿತೃಪ್ರಭುತ್ವದ ಸಾಮಾಜಿಕ ನಿಯಮಗಳು,ಕಾನೂನು ಜಾರಿಗಾಗಿ ಅಸಮರ್ಪಕ ಲಿಂಗ ಸೂಕ್ಷ್ಮತೆ ತರಬೇತಿ ಮತ್ತು ಸಂತ್ರಸ್ತೆಯರನ್ನು ಮುತ್ತಿಕೊಳ್ಳುವ ಕಳಂಕಗಳು ಕಸ್ಟಡಿ ಅತ್ಯಾಚಾರಕ್ಕೆ ಕಾರಣವಾಗುವ ಪ್ರಮುಖ ಅಂಶಗಳಾಗಿವೆ ಎಂದು ಹೇಳಿದ ಅವರು,ಕಸ್ಟಡಿ ಅತ್ಯಾಚಾರದ ಪರಿಣಾಮಗಳು ಮತ್ತು ಅದರ ಮೂಲ ಕಾರಣಗಳನ್ನು ಪರಿಹರಿಸಲು ಸಂತ್ರಸ್ತ ಮಹಿಳೆ ಕೇಂದ್ರಿತ ವಿಧಾನ,ಪ್ರಬಲ ಕಾನೂನು ಚೌಕಟ್ಟುಗಳು ಮತ್ತು ಸಾಂಸ್ಥಿಕ ಸುಧಾರಣೆಗಳ ತುರ್ತು ಅಗತ್ಯವನ್ನು ಒತ್ತಿ ಹೇಳಿದರು.

ಕಸ್ಟಡಿ ಅತ್ಯಾಚಾರದ ವರದಿಯಾಗಿರುವ ಪ್ರಕರಣಗಳು ಹೆಚ್ಚಾಗಿ ನಮ್ಮ ಕಾನೂನು ಜಾರಿ ವ್ಯವಸ್ಥೆಗಳಲ್ಲಿಯ ಅಧಿಕಾರದ ಅಸಮತೋಲನಗಳು ಮತ್ತು ಉತ್ತರದಾಯಿತ್ವದ ಕೊರತೆಯನ್ನು ತೋರಿಸುತ್ತಿವೆ ಎಂದು ಮುತ್ರೇಜಾ ಹೇಳಿದರು.

Tags:    

Writer - ವಾರ್ತಾಭಾರತಿ

contributor

Editor - musaveer

contributor

Byline - ವಾರ್ತಾಭಾರತಿ

contributor

Similar News