2023ರಲ್ಲಿ ಮಹಿಳೆಯರ ಮೇಲಿನ ದೌರ್ಜನ್ಯದ 28,811 ದೂರು ದಾಖಲು : ರಾಷ್ಟ್ರೀಯ ಮಹಿಳಾ ಆಯೋಗ
ಹೊಸದಿಲ್ಲಿ: ಕಳೆದ ವರ್ಷ ರಾಷ್ಟ್ರೀಯ ಮಹಿಳಾ ಆಯೋಗದಲ್ಲಿ ಮಹಿಳೆಯರ ವಿರುದ್ಧದ ಅಪರಾಧದ 28,811 ದೂರುಗಳು ದಾಖಲಾಗಿದ್ದರೆ, ಇವುಗಳಲ್ಲಿ ಶೇ 55ರಷ್ಟು ಪ್ರಕರಣಗಳು ಉತ್ತರ ಪ್ರದೇಶಕ್ಕೆ ಸಂಬಂಧಿಸಿದ್ದಾಗಿದೆ.
ಗರಿಷ್ಠ ಸಂಖ್ಯೆಯ ದೂರುಗಳು ಘನತೆಯ ಹಕ್ಕು ವಿಭಾಗದಲ್ಲಿ ದಾಖಲಾಗಿದೆ. ಈ ವಿಭಾಗದಡಿಯಲ್ಲಿ ಕೌಟುಂಬಿಕ ಹಿಂಸೆ ಹೊರತಾದ ಕಿರುಕುಳ ಪ್ರಕರಣಗಳು ಸೇರಿವೆ. ಈ ವಿಭಾಗದಲ್ಲಿ ಒಟ್ಟು 8,540 ಪ್ರಕರಣಗಳು ದಾಖಲಾಗಿವೆ ಎಂದು ಆಯೋಗದ ಅಂಕಿಅಂಶಗಳು ತಿಳಿಸಿವೆ. 2022ರಲ್ಲಿ ಒಟ್ಟು 6,274 ಕೌಟುಂಬಿಕ ಹಿಂಸೆ ಪ್ರಕರಣಗಳು ದಾಖಲಾಗಿದ್ದರೆ, 4797 ವರದಕ್ಷಿಣೆ ಕಿರುಕುಳ, 2,349 ಲೈಂಗಿಕ ಕಿರುಕುಳ ಪ್ರಕರಣಗಳು, 1,537 ಅತ್ಯಾಚಾರ ಮತ್ತು ಅತ್ಯಾಚಾರ ಯತ್ನ ಪ್ರಕರಣಗಳು ದಾಖಲಾಗಿವೆ. ಮಹಿಳೆಯರು ದಾಖಲಿಸಿದ ದೂರುಗಳ ಬಗ್ಗೆ ಪೊಲೀಸ್ ಇಲಾಖೆ ಅನಾಸ್ಥೆ ತೋರಿಸಿದ 1,618 ಪ್ರಕರಣಗಳು ದಾಖಲಾಗಿವೆ.
ಈ ಅವಧಿಯಲ್ಲಿ 605 ಸೈಬರ್ ಕ್ರೈಂ ಪ್ರಕರಣಗಳು ಹಾಗೂ 409 ಮರ್ಯಾದಾ ಅಪರಾಧ ಪ್ರಕರಣಗಳು ಆಯೋಗದಲ್ಲಿ ದಾಖಲಾಗಿದೆ.
ಗರಿಷ್ಠ 16,169 ದೂರುಗಳು ಉತ್ತರ ಪ್ರದೇಶದಿಂದ ದಾಖಲಾಗಿದ್ದರೆ, ದಿಲ್ಲಿಯಿಂದ 2,411 ದೂರುಗಳು, ಮಹಾರಾಷ್ಟ್ರದಲ್ಲಿ 1,343 ದೂರುಗಳು ದಾಖಲಾಗಿವೆ. ಬಿಹಾರದಿಂದ 1312, ಮಧ್ಯ ಪ್ರದೇಶದಿಂದ 1,165, ಹರ್ಯಾಣದಿಂದ 1,115 ಪ್ರಕರಣಗಳು, ರಾಜಸ್ಥಾನದಿಂದ 1,011 ಪ್ರಕರಣಗಳು, ತಮಿಳುನಾಡಿನಿಂದ 608 ಪ್ರಕರಣಗಳು, ಪಶ್ಚಿಮ ಬಂಗಾಳದಿಂದ 569 ಪ್ರಕರಣಗಳು ಮತ್ತು ಕರ್ನಾಟಕದಿಂದ 501 ಪ್ರಕರಣಗಳು ಈ ಅವಧಿಯಲ್ಲಿ ಆಯೋಗದಲ್ಲಿ ದಾಖಲಾಗಿವೆ.