ಐಐಟಿ ವಿದ್ಯಾರ್ಥಿನಿಗೆ ಕಿರುಕುಳ ನೀಡಿದ ಮೂವರು ಆರೋಪಿಗಳನ್ನು ಪಕ್ಷದಿಂದ ಉಚ್ಚಾಟಿಸಿದ ಬಿಜೆಪಿ
ವಾರಾಣಸಿ: ಬನಾರಸ್ ಐಐಟಿ ವಿದ್ಯಾರ್ಥಿನಿಗೆ ಕಿರುಕುಳ ನೀಡಿದ ಆರೋಪದಲ್ಲಿ ಮೂವರು ಕಾರ್ಯಕರ್ತರನ್ನು ವಾರಾಣಸಿ ಪೊಲೀಸರು ಬಂಧಿಸಿದ ನಂತರ, ಅವರನ್ನು ಪಕ್ಷದಿಂದ ಉಚ್ಚಾಟಿಸಲಾಗಿದೆ ಎಂದು ಪಕ್ಷದ ಜಿಲ್ಲಾಧ್ಯಕ್ಷ ಹಂಸರಾಜ್ ವಿಶ್ವಕರ್ಮ ರವಿವಾರ ತಿಳಿಸಿದ್ದಾರೆ ಎಂದು indiatoday.in ವರದಿ ಮಾಡಿದೆ.
ಆದರೆ, ಬಂಧನಕ್ಕೊಳಗಾಗಿರುವ ವ್ಯಕ್ತಿಗಳ ಹುದ್ದೆ ಮತ್ತು ಪಾತ್ರಗಳನ್ನು ಅವರು ಬಹಿರಂಗಪಡಿಸಿಲ್ಲ.
ಆರೋಪಿಗಳಿಗೆ ಬಿಜೆಪಿಯ ಸಂಪರ್ಕವಿದೆ ಎಂದು ವಿರೋಧ ಪಕ್ಷಗಳು ಆರೋಪಿಸಿದ ಬೆನ್ನಿಗೇ ಬಿಜೆಪಿ ಈ ಕ್ರಮ ಕೈಗೊಂಡಿದೆ.
“ಪೊಲೀಸರ ತನಿಖೆಯಲ್ಲಿ ಖಂಡಿತ ಅವರ ಹೆಸರು ಕೇಳಿ ಬಂದಿದೆ. ಹೀಗಾಗಿ ಅವರನ್ನು ತನಿಖೆಯ ನಂತರ ಪಕ್ಷದಿಂದ ಉಚ್ಚಾಟಿಸಲಾಗಿದೆ” ಎಂದು ಪಕ್ಷದ ನಿರ್ಣಯದ ಕುರಿತು ವಿಶ್ವಕರ್ಮ ತಿಳಿಸಿದ್ದಾರೆ.
ಇದಕ್ಕೂ ಮುನ್ನ, ನವೆಂಬರ್ 2ರಂದು ಐಐಟಿ ಬನಾರಸ್ ಹಿಂದೂ ವಿಶ್ವವಿದ್ಯಾಲಯದ ವಿದ್ಯಾರ್ಥಿನಿಯೊಬ್ಬರು ಮುಂಜಾನೆ ಬೈಕಿನಲ್ಲಿ ಬಂದಿದ್ದ ಕೆಲ ವ್ಯಕ್ತಿಗಳು ನನಗೆ ಕಿರುಕುಳ ನೀಡಿದರು ಎಂದು ಆರೋಪಿಸಿದ್ದರು.
ಈ ಘಟನೆಯ ಬೆನ್ನಿಗೇ ಐಐಟಿ ಬನಾರಸ್ ಹಿಂದೂ ವಿಶ್ವವಿದ್ಯಾಲಯದ ವಿದ್ಯಾರ್ಥಿ ಘಟಕವು ದೀರ್ಘಕಾಲದ ಪ್ರತಿಭಟನೆ ನಡೆಸಿತ್ತು. ಘಟನೆಯ ಸಂತ್ರಸ್ತೆಗೆ ನ್ಯಾಯ ದೊರಕಿಸಿಕೊಡಬೇಕು ಹಾಗೂ ವಿಶ್ವವಿದ್ಯಾಲಯದ ಕ್ಯಾಂಪಸ್ ಭದ್ರತೆಯನ್ನು ಮತ್ತಷ್ಟು ಬಿಗಿಗೊಳಿಸಬೇಕು ಎಂದು ಆಗ್ರಹಿಸಿತ್ತು.