ಕೇರಳದಲ್ಲಿ 3 ಎಟಿಎಂಗಳ ದರೋಡೆ ; 60 ಲಕ್ಷ ರೂ.ಲೂಟಿ
ಚೆನ್ನೈ : ಕೇರಳದಲ್ಲಿ ಮೂರು ಎಟಿಎಂಗಳಿಂದ ದರೋಡೆ ಮಾಡಲಾದ ಭಾರೀ ಮೊತ್ತದ ನಗದನ್ನು ಸಾಗಿಸುತ್ತಿದ್ದ ಕಂಟೈನರ್ ವಾಹನವನ್ನು ತಮಿಳುನಾಡಿನ ನಾಮಕ್ಕಲ್ ಪೊಲೀಸರು ಶುಕ್ರವಾರ ಬೆಳಗ್ಗೆ 12 ಕಿ.ಮೀ.ವರೆಗೆ ಬೆನ್ನಟ್ಟಿ ವಶಕ್ಕೆ ತೆಗೆದುಕೊಂಡಿದ್ದಾರೆ.
ಕಾರ್ಯಾಚರಣೆಯ ಸಂದರ್ಭ ಪೊಲೀಸರು ಶಂಕಿತ ದರೋಡೆಕೋರರಲ್ಲೊಬ್ಬನ್ನು ಗುಂಡಿಕ್ಕಿ ಹತ್ಯೆಗೈದಿದ್ದಾರೆ ಹಾಗೂ ಇನ್ನೋರ್ವನ ಕಾಲಿಗೆ ಗುಂಡೇಟು ತಗಲಿದೆ.
ಕಂಟೈನರ್ ಟ್ರಕ್‌ನಲ್ಲಿದ್ದ ಏಳು ಮಂದಿ ದರೋಡೆಕೋರ ತಂಡವು ಸೆರೆಹಿಡಿಯಲು ಬಂದ ಪೊಲೀಸರ ತಂಡದ ಮೇಲೆ ದಾಳಿ ನಡೆಸಿ ಪರಾರಿಯಾಗಲು ಯತ್ನಿಸಿತ್ತು. ಈ ಸಂದರ್ಭ ಓರ್ವ ಇನ್ಸ್‌ಪೆಕ್ಟರ್ ಸೇರಿದಂತೆ ಇಬ್ಬರು ಪೊಲೀಸ್ ಸಿಬ್ಬಂದಿ ಗಾಯಗೊಂಡಿದ್ದಾರೆ.
ಎಟಿಎಂಗಳಿಂದ ದೋಚಿದ ಹಣವನ್ನು ಸಾಗಿಸುತ್ತಿದ್ದ ಕಂಟೈನರ್ ವಾಹನವನ್ನು ಬೆನ್ನಟ್ಟಿದ ಪೊಲೀಸರು ಅದನ್ನು ತಡೆದು ನಿಲ್ಲಿಸಿದ್ದರು. ಅವರು ವಾಹನದ ಹಿಂದಿನ ಬಾಗಿಲನ್ನು ತೆರೆಯಿಸಿದಾಗ, ಒಳಗಿದ್ದವರು ಪೊಲೀಸರ ಮೇಲೆ ಹಲ್ಲೆ ನಡೆಸಿದರು. ಆಗ ಪೊಲೀಸರು ಆತ್ಮರಕ್ಷಣೆಗಾಗಿ ಗುಂಡು ಹಾರಿಸಿದ್ದಾರೆ. ಆಗ ಓರ್ವ ಶಂಕಿತ ದರೋಡೆಕೋರ ಸಾವನ್ನಪ್ಪಿದ್ದಾನೆ ಹಾಗೂ ಇನ್ನೋರ್ವನ ಕಾಲಿಗೆ ಗುಂಡಿನ ಗಾಯವಾಗಿದೆ.
ಎಲ್ಲಾ ಏಳು ಮಂದಿ ದರೋಡೆಕೋರರು ಹರ್ಯಾಣದವರೆಂದು ತಿಳಿದುಬಂದಿದೆ. ಅವರು ಕೇರಳದ ತ್ರಿಶೂರಿನಲ್ಲಿ ಶುಕ್ರವಾರ ಭಾರತೀಯ ಸ್ಟೇಟ್ ಬ್ಯಾಂಕ್‌ನ ಮೂರು ಎಟಿಎಂಗಳಿಂದ , ಒಟ್ಟು ಸುಮಾರು 60 ಲಕ್ಷ ರೂ. ದೋಚಿದ್ದರೆಂದು ತಮಿಳುನಾಡಿನ ಪೊಲೀಸ್ ಮಹಾನಿರೀಕ್ಷಕ (ಪಶ್ಚಿಮ ವಲಯ) ಟಿ. ಸೆಂಥಿಲ್ ಕುಮಾರ್ ಹೇಳಿದ್ದಾರೆ.
ದರೋಡೆಗೈದ ಹಣವನ್ನು ಸಾಗಿಸುತ್ತಿದ್ದ ಕಂಟೈನರ್ ಟ್ರಕ್ ಅನ್ನು ತಮಿಳುನಾಡು ಪೊಲೀಸರು ಹೆದ್ದಾರಿಯಲ್ಲಿ ತಡೆದಾಗ ಅದು ನಿಲ್ಲದೆ ವೇಗವಾಗಿ ಸಾಗಿತ್ತು. ಈ ಸಂದರ್ಭ ಅದು ಎರಡು ದ್ವಿಚಕ್ರ ವಾಹನಗಳಿಗೂ ಡಿಕ್ಕಿ ಹೊಡೆದಿತ್ತು ಎಂದವರು ಹೇಳಿದ್ದಾರೆ.
ಪ್ರಕರಣಕ್ಕೆ ಸಂಬಂಧಿಸಿ 6 ಮಂದಿ ಆರೋಪಿಗಳನ್ನು ಬಂಧಿಸಲಾಗಿದೆ. ಕಂಟೈನರ್ ಟ್ರಕ್‌ನಲ್ಲಿದ್ದ ನಂಬರ್ ಪ್ಲೇಟ್ ಇಲ್ಲದ ಕಾರೊಂದನ್ನು ಕೂಡಾ ವಶಪಡಿಸಿಕೊಳ್ಳಲಾಗಿದೆ. ಗ್ಯಾಸ್ ಕಟ್ಟರ್‌ಗಳು ಮತ್ತಿತರ ಉಪಕರಣಗಳು ಕೂಡಾ ಕಂಟೈನರ್‌ನಲ್ಲಿ ಪತ್ತೆಯಾಗಿವೆ. ಬಂಧಿತ ಆರೋಪಿಗಳಿಂದ ಬಂದೂಕುಗಳು ಸೇರಿದಂತೆ ಶಸ್ತ್ರಾಸ್ತ್ರಗಳನ್ನು ವಶಪಡಿಸಿಕೊಳ್ಳಲಾಗಿದೆ. ಸಿಸಿಟಿವಿಯಲ್ಲಿ ಕಂಟೈನರ್ ವಾಹನದ ದೃಶ್ಯಗಳು ಸೆರೆಯಾಗುವುದನ್ನು ತಪ್ಪಿಸಲು ಆರೋಪಿಗಳು ತಾವು ದರೋಡೆ ನಡೆಸಲು ಉದ್ದೇಶಿಸಿದ ಎಟಿಎಂಗಳಿಗೆ ಹೊಂಚುಹಾಕಲು ಈ ಕಾರನ್ನು ಬಳಸುತ್ತಿದ್ದರು. ಆನಂತರ ಅದನ್ನು ಕಂಟೈನರ್ ವಾಹನದೊಳಗೆ ಅಡಗಿಸಿಡುತ್ತಿದ್ದರೆಂದು ತಮಿಳುನಾಡು ಪೊಲೀಸ್ ಮಹಾನಿರ್ದೇಶಕ ಶಂಕರ್ ಜಿವಾಲ್ ತಿಳಿಸಿದ್ದಾರೆ.