ಮೌಂಟ್ ಎವರೆಸ್ಟ್ ಬೇಸ್ ಕ್ಯಾಂಪ್ ತಲುಪಿದ ತ್ರಿವಳಿ ಅಂಗವೈಕಲ್ಯಕ್ಕೆ ತುತ್ತಾಗಿದ್ದ ಕೌಶಿಕ್!
ಪಣಜಿ: ಗೋವಾ ನಿವಾಸಿಯಾದ 30 ವರ್ಷದ ತಿಂಕೇಶ್ ಕೌಶಿಕ್ ಸಮುದ್ರ ಮಟ್ಟದಿಂದ 17,598 ಅಡಿ ಎತ್ತರದಲ್ಲಿರುವ ಮೌಂಟ್ ಎವರೆಸ್ಟ್ ಬೇಸ್ ಕ್ಯಾಂಪ್ ತಲುಪಿದ ವಿಶ್ವದ ಪ್ರಪ್ರಥಮ ತ್ರಿವಳಿ ಅಂಗವೈಕಲ್ಯಕ್ಕೆ ತುತ್ತಾಗಿರುವ ವ್ಯಕ್ತಿಯಾಗಿದ್ದಾರೆ ಎಂದು ಖಾಸಗಿ ಅಂಗವೈಕಲ್ಯ ಹಕ್ಕುಗಳ ಸಂಸ್ಥೆಯೊಂದು ಹೇಳಿದೆ ಎಂದು ಪಿಟಿಐ ಸುದ್ದಿ ಸಂಸ್ಥೆ ವರದಿ ಮಾಡಿದೆ.
ಮೇ 11ರಂದು ಮೌಂಟ್ ಎವರೆಸ್ಟ್ ಬೇಸ್ ಕ್ಯಾಂಪ್ ತಲುಪುವ ಸವಾಲಿನ ಪಯಣವನ್ನು ಮುಕ್ತಾಯಗೊಳಿಸಿದ ಕೌಶಿಕ್, ನನ್ನ ದೈಹಿಕ ಅಂಗವೈಕಲ್ಯದ ಹೊರತಾಗಿಯೂ, ನನ್ನ ಮಾನಸಿಕ ಸಾಮರ್ಥ್ಯದಿಂದಾಗಿ ಈ ಸಾಧನೆ ಮಾಡುವಲ್ಲಿ ಯಶಸ್ವಿಯಾಗಿದ್ದೇನೆ ಎಂದು ಹೇಳಿದ್ದಾರೆ.
ಒಂಬತ್ತು ವರ್ಷ ವಯಸ್ಸಿನವರಾಗಿದ್ದಾಗ ಕೌಶಿಕ್ ಹರ್ಯಾಣದಲ್ಲಿ ಸಂಭವಿಸಿದ್ದ ವಿದ್ಯುದಾಘಾತದಲ್ಲಿ ತಮ್ಮ ಮೊಣಕಾಲಿನ ಕೆಳಗಿನ ಎರಡು ಕಾಲುಗಳು ಹಾಗೂ ಒಂದು ಕೈಯನ್ನು ಕಳೆದುಕೊಂಡಿದ್ದರು. ಕೃತಕ ಕಾಲುಗಳನ್ನು ಬಳಸುತ್ತಿರುವ ಕೌಶಿಕ್, ಕೆಲವು ವರ್ಷಗಳ ಹಿಂದೆ ಗೋವಾಗೆ ಸ್ಥಳಾಂತರಗೊಂಡು, ದೈಹಿಕ ತರಬೇತುದಾರರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ ಎಂದು ವರದಿಯಾಗಿದೆ.
ಈ ಕುರಿತು ಬುಧವಾರ ನಡೆದ ಸುದ್ದಿಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಡಿಸ್ ಎಬಿಲಿಟಿ ರೈಟ್ಸ್ ಅಸೋಸಿಯೇಷನ್ ಆಫ್ ಗೋವಾ ಸಂಘಟನೆಯ ಮುಖ್ಯಸ್ಥ ಅವೆಲಿನೊ ಡಿಸೋಝಾ, ಕೌಶಿಕ್ ತಮ್ಮ ಸಾಧನೆಯಿಂದ ಗೋವಾಗೆ ಹೆಮ್ಮೆ ತಂದಿದ್ದಾರೆ ಎಂದು ಶ್ಲಾಘಿಸಿದ್ದಾರೆ.