ಭಾರೀ ಮಳೆಗೆ ತತ್ತರಿಸಿದ ತೆಲಂಗಾಣ, ಆಂಧ್ರಪ್ರದೇಶ: 35 ಮಂದಿ ಮೃತ್ಯು

Update: 2024-09-03 05:46 GMT

Photo: PTI

ಹೊಸದಿಲ್ಲಿ: ಕಳೆದ ಮೂರು ದಿನಗಳಲ್ಲಿ ತೆಲಂಗಾಣ ಮತ್ತು ಆಂಧ್ರಪ್ರದೇಶದಲ್ಲಿ ಮಳೆ ಮತ್ತು ಪ್ರವಾಹದಿಂದಾಗಿ 35 ಜನರು ಸಾವನ್ನಪ್ಪಿದ್ದು, ರಸ್ತೆಗಳು, ರೈಲು ಹಳಿಗಳು ಸೇರಿ ಸಾವಿರಾರು ಎಕರೆ ಭೂಮಿ ಜಲಾವೃತವಾಗಿವೆ, ಬೆಳೆಗಳು ನಾಶವಾಗಿದ್ದು, ಜನರು ದೈನಂದಿನ ಅಗತ್ಯತೆಗಳಿಗೆ ಪರದಾಡುವಂತೆ ಆಗಿದೆ.

ತೆಲಂಗಾಣದಲ್ಲಿ ಮಳೆ ಸಂಬಂಧಿತ ಘಟನೆಗಳಲ್ಲಿ 16 ಜನರು ಮತ್ತು ನೆರೆಯ ಆಂಧ್ರಪ್ರದೇಶದಲ್ಲಿ 19 ಜನರು ಸಾವನ್ನಪ್ಪಿದ್ದಾರೆ, ಬಂಗಾಳಕೊಲ್ಲಿಯಲ್ಲಿನ ವಾಯುಭಾರ ಕುಸಿತದಿಂದ ಉಂಟಾದ ಸತತ ಮಳೆಯಿಂದಾಗಿ ದಕ್ಷಿಣದ ಎರಡು ರಾಜ್ಯಗಳಲ್ಲಿ ಜನ ಜೀವನವು ಅಸ್ತವ್ಯಸ್ತವಾಗಿದೆ.

ಮಂಗಳವಾರವೂ ಎರಡೂ ರಾಜ್ಯಗಳ ಕೆಲವು ಭಾಗಗಳಲ್ಲಿ ಹೆಚ್ಚಿನ ಮಳೆಯಾಗುವ ಸಾಧ್ಯತೆಯಿದೆ ಎಂದು ಭಾರತೀಯ ಹವಾಮಾನ ಇಲಾಖೆ (ಐಎಂಡಿ) ಮುನ್ಸೂಚನೆಯನ್ನು ನೀಡಿದೆ. ತೆಲಂಗಾಣದಲ್ಲಿ ನಿರಂತರ ಮಳೆಯಿಂದಾಗಿ ತಗ್ಗು ಪ್ರದೇಶಗಳು ಜಲಾವೃತಗೊಂಡಿವೆ. ಕೃಷಿ ಬೆಳೆಗಳಿಗೆ ವ್ಯಾಪಕವಾದ ಹಾನಿಯಾಗಿದ್ದು, ರೈಲು ಮತ್ತು ರಸ್ತೆ ಸಂಚಾರಕ್ಕೆ ಅಡ್ಡಿಯಾಗಿದೆ.

ತೆಲಂಗಾಣದ ಸಿಎಂ ರೇವಂತ್ ರೆಡ್ಡಿ ಅವರ ಸರಕಾರವು ಮಳೆ ಸಂಬಂಧಿತ ಘಟನೆಗಳಲ್ಲಿ ಪ್ರಾಥಮಿಕ ಅಂದಾಜಿನ ಪ್ರಕಾರ ರೂ. 5,000 ಕೋಟಿ ಹಾನಿ ಉಂಟಾಗಿದೆ ಎಂದು ಅಂದಾಜಿಸಿದ್ದು, ಕೇಂದ್ರದಿಂದ 2,000 ಕೋಟಿ ತಕ್ಷಣದ ನೆರವು ಕೋರಿದೆ.

ಈ ಬಾರಿ ರಾಜ್ಯದಲ್ಲಿ ಸಾಮಾನ್ಯಕ್ಕಿಂತ ಹೆಚ್ಚು ಮಳೆಯಾಗಿದೆ ಎಂದು ಹವಾಮಾನ ಇಲಾಖೆ ತಿಳಿಸಿದ್ದು, ಮಂಗಳವಾರ ಆದಿಲಾಬಾದ್, ನಿಜಾಮಾಬಾದ್ ಮತ್ತು ನಿರ್ಮಲ್ ಜಿಲ್ಲೆಗಳಲ್ಲಿ ಭಾರಿ ಮಳೆಯಾಗುವ ಮುನ್ಸೂಚನೆ ಇದೆ. ಇದಲ್ಲದೆ ಆಸಿಫಾಬಾದ್, ಜಗ್ತಿಯಾಲ್, ಸಂಗಾರೆಡ್ಡಿ, ಮೇದಕ್ ಮತ್ತು ಕಾಮರೆಡ್ಡಿ ಜಿಲ್ಲೆಗಳಲ್ಲಿ ಭಾರೀ ಮಳೆಯಾಗುವ ಸಾಧ್ಯತೆಯಿದೆ ಎಂದು ಹವಾಮಾನ ಇಲಾಖೆ ತಿಳಿಸಿದೆ.

ಮುನ್ಸೂಚನೆಯನ್ನು ಗಮನದಲ್ಲಿಟ್ಟುಕೊಂಡು, ಈ ಜಿಲ್ಲೆಗಳ ಜಿಲ್ಲಾಧಿಕಾರಿಗಳು ಮತ್ತು ಇತರ ಅಧಿಕಾರಿಗಳಿಗೆ ಎಚ್ಚರಿಕೆ ವಹಿಸಲು ಮತ್ತು ತಗ್ಗು ಪ್ರದೇಶಗಳಲ್ಲಿರುವ ಜನರನ್ನು ಅಗತ್ಯಬಿದ್ದರೆ ಪರಿಹಾರ ಶಿಬಿರಗಳಿಗೆ ಸ್ಥಳಾಂತರಿಸಲು ಮುಖ್ಯಮಂತ್ರಿ ರೇವಂತ್ ರೆಡ್ಡಿ ಸೂಚಿಸಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - Irshad Venur

contributor

Byline - ವಾರ್ತಾಭಾರತಿ

contributor

Similar News