ಸ್ಮೃತಿ ಇರಾನಿ, ಅನುರಾಗ್ ಠಾಕೂರ್ ಸೇರಿದಂತೆ 37 ಮಂದಿಗೆ ತಪ್ಪಿದ ಸಚಿವ ಸ್ಥಾನ
ಹೊಸದಿಲ್ಲಿ: ಪ್ರಧಾನಿ ನರೇಂದ್ರ ಮೋದಿಯವರ ಮೂರನೆ ಅವಧಿಯ ಸಚಿವ ಸಂಪುಟದಿಂದ ಒಟ್ಟು 37 ಸಚಿವರನ್ನು ಕೈಬಿಡಲಾಗಿದ್ದು, ಈ ಪೈಕಿ ಸಂಪುಟ ದರ್ಜೆಯ ಸಚಿವರಾಗಿದ್ದ ಸ್ಮೃತಿ ಇರಾನಿ, ಅನುರಾಗ್ ಠಾಕೂರ್ ಹಾಗೂ ನಾರಾಯಣ್ ರಾಣೆ ಸೇರಿದಂತೆ ಒಟ್ಟು ಏಳು ಮಂದಿ ಸಚಿವರು ಸೇರಿದ್ದಾರೆ.
ಇವರೊಂದಿಗೆ ಪರ್ಶೋತ್ತಮ್ ರುಪಾಲ, ಅರ್ಜುನ್ ಮುಂಡಾ, ಆರ್.ಕೆ.ಸಿಂಗ್ ಹಾಗೂ ಮಹೇಂದ್ರ ನಾಥ ಪಾಂಡೆ ಕೂಡಾ ಸಂಪುಟ ಸಚಿವ ಸ್ಥಾನವನ್ನು ಹೊಂದಿದ್ದರು. ಆದರೆ, ಜೂನ್ 9ರಂದು ಪ್ರಮಾಣ ವಚನ ಸ್ವೀಕರಿಸಿದ ಸಚಿವ ಸಂಪುಟದಲ್ಲಿ ಇವರಿರಲಿಲ್ಲ. ಎಲ್ಲ 30 ಮಂದಿ ಸ್ವತಂತ್ರ ನಿರ್ವಹಣೆಯ ಸಚಿವರನ್ನು ಸಂಪುಟದಲ್ಲಿ ಉಳಿಸಿಕೊಳ್ಳಲಾಗಿದ್ದರೂ, 42 ಮಂದಿ ರಾಜ್ಯ ಸಚಿವರ ಪೈಕಿ 30 ಮಂದಿ ಸಚಿವರನ್ನು ಕೈಬಿಡಲಾಗಿದೆ.
ಸಚಿವ ಸಂಪುಟದಿಂದ ಕೈಬಿಡಲಾಗಿರುವ ಸಚಿವರ ಪೈಕಿ ವಿ.ಕೆ.ಸಿಂಗ್, ಫಗ್ಗನ್ ಸಿಂಗ್ ಕುಲಸ್ತೆ, ಅಶ್ವಿನಿ ಚೌಬೆ, ದಾನ್ವೆ ರಾವ್ ಸಾಹೇಬ್ ದಾದಾ ರಾವ್, ಸಾಧ್ವಿ ನಿರಂಜನ ಜ್ಯೋತಿ, ಸಂಜೀವ್ ಬಾಲ್ಯನ್, ರಾಜೀವ್ ಚಂದ್ರಶೇಖರ್, ಸುಭಾಸ್ ಸರ್ಕಾರ್, ನಿಸಿತ್ ಪ್ರಾಮಾಣಿಕ್, ರಾಜಕುಮಾರ್ ರಂಜನ್ ಸಿಂಗ್ ಹಾಗೂ ಪ್ರತಿಮಾ ಭೌಮಿಕ್ ಸೇರಿದಂತೆ ಒಟ್ಟು 30 ಮಂದಿ ಸೇರಿದ್ದಾರೆ.
ಸಚಿವ ಸಂಪುಟದಿಂದ ಕೈಬಿಡಲಾಗಿರುವ ಸಚಿವರ ಪೈಕಿ 18 ಮಂದಿ ಚುನಾವಣೆಯಲ್ಲಿ ಪರಾಭವಗೊಂಡಿದ್ದಾರೆ. ಈ ಬಾರಿಯ ಚುನಾವಣೆಯಲ್ಲಿ ಪರಾಭವಗೊಂಡಿದ್ದರೂ, ಸಚಿವ ಸಂಪುಟದಲ್ಲಿ ಸ್ಥಾನ ಉಳಿಸಿಕೊಂಡಿರುವ ಏಕೈಕ ರಾಜ್ಯ ಸಚಿವ ಎಲ್.ಮುರುಗನ್ ಆಗಿದ್ದಾರೆ. ಅವರು ಈಗಾಗಲೇ ರಾಜ್ಯಸಭಾ ಸದಸ್ಯರಾಗಿದ್ದಾರೆ.