ಮುಂಬೈ- ವಡೋದರ ಹೆದ್ದಾರಿಗೆ 39 ಸಾವಿರ ಮರಗಳ ಮಾರಣಹೋಮ

Update: 2024-03-26 09:07 GMT

ಸಾಂದರ್ಭಿಕ ಚಿತ್ರ 

ಮುಂಬೈ: ಗುಜರಾತ್‍ನ ವಡೋದರ ಮತ್ತು ರಾಯಗಢ ಜಿಲ್ಲೆಯ ಜವಾಹರಲಾಲ್ ನೆಹರೂ ಬಂದರನ್ನು ಸಂಪರ್ಕಿಸುವ ಭಾರತದ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ಮಹತ್ವಾಕಾಂಕ್ಷಿ ಗ್ರೀನ್‍ಫೀಲ್ಡ್ ಯೋಜನೆಗಾಗಿ ಪಾಲ್ಘರ್, ಥಾಣೆ ಮತ್ತು ರಾಯಗಢ ಜಿಲ್ಲೆಗಳಲ್ಲಿ 39 ಸಾವಿರಕ್ಕೂ ಹೆಚ್ಚು ಮರಗಳು ಬಲಿಯಾಗಲಿವೆ. ಈಗಾಗಲೇ 32 ಸಾವಿರ ಮರಗಳನ್ನು ಕಡಿಯಲಾಗಿದೆ ಎಂದು ವರದಿಯಾಗಿದೆ.

ಒಟ್ಟು 166.67 ಕಿಲೋಮೀಟರ್ ಉದ್ದದ ರಾಷ್ಟ್ರೀಯ ಹೆದ್ದಾರಿ ಮಹಾರಾಷ್ಟ್ರದ ಮೂಲಕ ಹಾದುಹೋಗಲಿದ್ದು, 2242 ಹೆಕ್ಟೇರ್ ಭೂಮಿ ಇದಕ್ಕಾಗಿ ಬಳಕೆಯಾಗಲಿದೆ. ಇದರಲ್ಲಿ 304 ಎಕರೆ ಅರಣ್ಯ ಭೂಮಿ ಕೂಡಾ ಸೇರಿದೆ. 2000 ಹೆಕ್ಟೇರ್ ಭೂಮಿಯನ್ನು ಈಗಾಗಲೇ ಸ್ವಾಧೀನಪಡಿಸಿಕೊಳ್ಳಲಾಗಿದೆ ಎಂದು ಮಾಹಿತಿ ಹಕ್ಕು ಕಾಯ್ದೆಯಡಿ ಕೇಳಿದ ಪ್ರಶ್ನೆಗೆ ನೀಡಿದ ಉತ್ತರದಲ್ಲಿ ಸ್ಪಷ್ಟಪಡಿಸಲಾಗಿದೆ.

39,132 ಮರಗಳನ್ನು ಕಡಿಯಲು ಈಗಾಗಲೇ ಅರಣ್ಯ ಇಲಾಖೆಯ ಅನುಮತಿ ಕೇಳಲಾಗಿದೆ. 13763 ಮರಗಳು ಅರಣ್ಯ ಪ್ರದೇಶದಲ್ಲಿ ಹಾಗೂ 18961 ಮರಗಳು ಅರಣ್ಯೇತರ ಪ್ರದೇಶದಲ್ಲಿ ಇವೆ. ಈಗಾಗಲೇ 32,454 ಮರಗಳನ್ನು ಕಡಿಯಲಾಗಿದೆ. ನಿರ್ಮಾಣ ಯೋಜನೆಯಲ್ಲಿ 3086 ಮನೆಗಳು ಮತ್ತು ಕಟ್ಟಡಗಳು, 48 ಧಾರ್ಮಿಕ ಸ್ಥಳಗಳು ಮತ್ತು 185 ದೊಡ್ಡ ಪ್ರಮಾಣದ ಉಗ್ರಾಣಗಳು ಧ್ವಂಸವಾಗಲಿವೆ. ಮುಂಬೈ- ವಡೋದರ ಯೋಜನೆಯು ಮುಂಬೈ- ದೆಹಲಿ ಎಕ್ಸ್ ಪ್ರೆಸ್‍ವೇ ಯೋಜನೆಯ ಭಾಗವಾಗಿದೆ.

ಪಾಲ್ಘರ್ ಜಿಲ್ಲೆಯು ಹಸಿರು ಹೊದಿಕೆಗೆ ಹೆಸರುವಸಿಯಾಗಿದ್ದು, ದೊಡ್ಡ ಪ್ರಮಾಣದ ಸಸ್ಯಸಂಪತ್ತನ್ನು ಹೊಂದಿದೆ. ಜತೆಗೆ ಬುಡಕಟ್ಟು ಜನಾಂಗದವರು ಕೂಡಾ ಅಧಿಕ ಸಂಖ್ಯೆಯಲ್ಲಿದ್ದಾರೆ. ಮುಂಬೈ ಮತ್ತು ಥಾಣೆ ಜಿಲ್ಲೆಗಳಿಗೆ ಸನಿಹದಲ್ಲಿರುವ ಈ ಜಿಲ್ಲೆ ಈಗಾಗಲೇ ಮೂಲಸೌಕರ್ಯ ಯೋಜನೆಗಳಾದ ಮುಂಬೈ- ಅಹ್ಮದಾಬಾದ್ ಬುಲೆಟ್ ರೈಲು ಯೋಜನೆ, ವಧಾವನ್ ಬಂದರು ಮತ್ತಿತರ ಯೋಜನೆಗಳಿಂದ ಸಂಕಷ್ಟಕ್ಕೀಡಾಗಿದೆ.

Tags:    

Writer - ವಾರ್ತಾಭಾರತಿ

contributor

Editor - Ismail

contributor

Byline - ವಾರ್ತಾಭಾರತಿ

contributor

Similar News