10 ವರ್ಷಗಳಲ್ಲಿ ಒಡಿಶಾದ 403 ಕಾರ್ಮಿಕರು ಬೇರೆ ಬೇರೆ ರಾಜ್ಯಗಳಲ್ಲಿ ಮೃತ್ಯು
ಭುವನೇಶ್ವರ : ಕಳೆದ 10 ವರ್ಷಗಳಲ್ಲಿ ಒಡಿಶಾದ 400ಕ್ಕೂ ಅಧಿಕ ವಲಸೆ ಕಾರ್ಮಿಕರು ರಾಜ್ಯದಿಂದ ಹೊರಗೆ ಮೃತಪಟ್ಟಿದ್ದಾರೆ ಎಂದು ರಾಜ್ಯ ವಿಧಾನಸಭೆಗೆ ಮಂಗಳವಾರ ತಿಳಿಸಲಾಯಿತು.
2015 ಮತ್ತು 2024 ನವೆಂಬರ್ 27ರ ನಡುವಿನ ಅವಧಿಯಲ್ಲಿ ಒಡಿಶಾದ 403 ವಲಸೆ ಕಾರ್ಮಿಕರು ಬೇರೆ ರಾಜ್ಯಗಳಲ್ಲಿ ಮೃತಪಟ್ಟಿದ್ದಾರೆ ಎಂದು ಬಿಜೆಪಿ ಶಾಸಕ ಟಂಕಾಧರ್ ತ್ರಿಪಾಠಿ ಅವರ ಪ್ರಶ್ನೆಗೆ ಉತ್ತರಿಸಿದ ಕಾರ್ಮಿಕ ಸಚಿವ ಗಣೇಶ್ ರಾಮ್ ಸಿಂಗ್‌ಖುಂಟಿಯ ತಿಳಿಸಿದರು.
ಈ ಅವಧಿಯಲ್ಲಿ ರಾಜ್ಯದಿಂದ ಹೊರಗೆ ಮೃತಪಟ್ಟ ಕಾರ್ಮಿಕರ ಪೈಕಿ ಅತಿ ಹೆಚ್ಚು, ಅಂದರೆ 59 ಮಂದಿ ಗಂಜಮ್ ಜಿಲ್ಲೆಗೆ ಸೇರಿದವರು. ನಂತರದ ಸ್ಥಾನಗಳಲ್ಲಿ ಕಾಲಹಂದಿ (39), ಬೊಲಾಂಗಿರ್ (35), ಕಂದಮಾಲ್ (32) ಮತ್ತು ರಾಯಗಡ (28) ಜಿಲ್ಲೆಗಳಿಗೆ ಸೇರಿದವರು.
2014ರಲ್ಲಿ, ಅಂತರ್‌ರಾಜ್ಯ ವಲಸೆ ಕಾರ್ಮಿಕರ (ಉದ್ಯೋಗ ನಿಯಂತ್ರಣ ಮತ್ತು ಸೇವಾ ಸ್ಥಿತಿಗತಿಗಳು) ಕಾಯ್ದೆಯಡಿ, 26,397 ಕಾರ್ಮಿಕರ ವಲಸೆಗಾಗಿ ಕಾರ್ಮಿಕ ಗುತ್ತಿಗೆದಾರರಿಗೆ 388 ಪರವಾನಿಗೆಗಳನ್ನು ಸರಕಾರ ನೀಡಿತ್ತು ಎಂದು ಸಚಿವರು ತಿಳಿಸಿದರು. 2024ರಲ್ಲಿ, 60,683 ಕಾರ್ಮಿಕರ ವಲಸೆಗಾಗಿ ಇಂಥ 883 ಪರವಾನಿಗೆಗಳನ್ನು ನೀಡಲಾಗಿದೆ ಎಂದರು.