ಪ್ಯಾರಿಸ್ ಒಲಿಂಪಿಕ್ ಗೇಮ್ಸ್ ವಿಲೇಜ್‌ಗೆ ಆಗಮಿಸಿದ 49 ಭಾರತೀಯ ಅತ್ಲೀಟ್‌ಗಳು
ಪ್ಯಾರಿಸ್: ಆರ್ಚರಿ ತಂಡದ ಎಲ್ಲ ಸದಸ್ಯರು, ಟೇಬಲ್ ಟೆನಿಸ್ ಹಾಗೂ ಹಾಕಿ ತಂಡಗಳ ಸಹಿತ ಒಟ್ಟು 49 ಭಾರತೀಯ ಕ್ರೀಡಾಪಟುಗಳು ಜುಲೈ 26ರಿಂದ ಆರಂಭವಾಗಲಿರುವ ಪ್ಯಾರಿಸ್ ಒಲಿಂಪಿಕ್ಸ್ನಲ್ಲಿ ಭಾಗವಹಿಸಲು ಕ್ರೀಡಾಗ್ರಾಮಕ್ಕೆ ಆಗಮಿಸಿದ್ದಾರೆ.
8 ಸದಸ್ಯರ ಟೇಬಲ್ ಟೆನಿಸ್ ತಂಡ ಹಾಗೂ 19 ಸದಸ್ಯರ ಭಾರತೀಯ ಪುರುಷರ ಹಾಕಿ ತಂಡ ಫ್ರೆಂಚ್ ರಾಜಧಾನಿಗೆ ತಲುಪಿದೆ. ಒಲಿಂಪಿಕ್ಸ್ಗೆ ಅರ್ಹತೆ ಪಡೆದಿರುವ 21 ಶೂಟರ್‌ಗಳ ಪೈಕಿ 10 ಶೂಟರ್‌ಗಳು ಚಟೌರೊಕ್ಸ್ಗೆ ಆಗಮಿಸಿದ್ದಾರೆ. ಆರ್ಚರಿ ತಂಡದ ಎಲ್ಲ ಆರು ಸದಸ್ಯರುಗಳು, ಇಬ್ಬರು ಟೆನಿಸ್ ಆಟಗಾರರು, ಶಟ್ಲರ್, ರೋವರ್ ಹಾಗೂ ಇಬ್ಬರು ಸ್ಮಿಮ್ಮರ್‌ಗಳು ಸಿಟಿ ಆಫ್ ಲೈಟ್ಸ್ಗೆ ತಲುಪಿದರು.
70 ಪುರುಷರು ಹಾಗೂ 47 ಮಹಿಳೆಯರ ಸಹಿತ ಒಟ್ಟು 117 ಅತ್ಲೀಟ್‌ಗಳು ಪ್ಯಾರಿಸ್ ಒಲಿಂಪಿಕ್ಸ್ನಲ್ಲಿ ಭಾರತವನ್ನು ಪ್ರತಿನಿಧಿಸಲಿದ್ದಾರೆ. ಇವೆಲ್ಲರೂ 95 ಪದಕಗಳಿಗಾಗಿ 69 ಸ್ಪರ್ಧೆಗಳಲ್ಲಿ ಸ್ಪರ್ಧಿಸಲಿದ್ದಾರೆ.
ಟೋಕಿಯೊ ಒಲಿಂಪಿಕ್ಸ್ನಲ್ಲಿ 7 ಪದಕಗಳನ್ನು ಗೆದ್ದಿದ್ದ ಭಾರತವು ಅತ್ಯುತ್ತಮ ಪ್ರದರ್ಶನ ನೀಡಿತ್ತು. ನೀರಜ್ ಚೋಪ್ರಾ ಜಾವೆಲಿನ್ ಎಸೆತದಲ್ಲಿ ಐತಿಹಾಸಿಕ ಚಿನ್ನ ಜಯಿಸಿದ್ದರು. ಚೋಪ್ರಾ ಅವರು ಚಿನ್ನದ ಪದಕವನ್ನು ಉಳಿಸಿಕೊಳ್ಳಲು ಪ್ಯಾರಿಸ್‌ಗೆ ಆಗಮಿಸಿದ್ದಾರೆ.