ಡೆಹ್ರಾಡೂನ್: ಬಸ್‌ನಿಲ್ದಾಣದಲ್ಲಿ ಬಾಲಕಿಯ ಸಾಮೂಹಿಕ ಅತ್ಯಾಚಾರ, ಐವರ ಬಂಧನ

Update: 2024-08-18 17:36 GMT

ಸಾಂದರ್ಭಿಕ ಚಿತ್ರ

ಡೆಹ್ರಾಡೂನ್: ಇಲ್ಲಿಯ ಅಂತರರಾಜ್ಯ ಬಸ್‌ನಿಲ್ದಾಣದಲ್ಲಿ ನಿಲ್ಲಿಸಿದ್ದ ಸರಕಾರಿ ಬಸ್‌ನಲ್ಲಿ 16ರ ಹರೆಯದ ಬಾಲಕಿಯ ಮೇಲೆ ಸಾಮೂಹಿಕ ಅತ್ಯಾಚಾರ ನಡೆದಿದ್ದು, ಮೂವರು ಚಾಲಕರು, ಓರ್ವ ನಿರ್ವಾಹಕ ಮತ್ತು ಓರ್ವ ಕ್ಯಾಷಿಯರ್ ಸೇರಿದಂತೆ ಉತ್ತರಾಖಂಡ ಸಾರಿಗೆ ಸಂಸ್ಥೆಯ ಐವರು ಸಿಬ್ಬಂದಿಗಳನ್ನು ಪೋಲಿಸರು ಬಂಧಿಸಿದ್ದಾರೆ.

ಉತ್ತರ ಪ್ರದೇಶದ ಮೊರಾದಾಬಾದ್ ನಿವಾಸಿಯಾಗಿರುವ ಬಾಲಕಿ ಆ.12ರಂದು ದಿಲ್ಲಿಯಿಂದ ಉತ್ತರಾಖಂಡ ರೋಡವೇಸ್ ಮೂಲಕ ಡೆಹ್ರಾಡೂನ್‌ಗೆ ಆಗಮಿಸಿದ್ದು, ಮಧ್ಯರಾತ್ರಿಯ ಸುಮಾರಿಗೆ ಈ ಹೇಯ ಘಟನೆ ನಡೆದಿದೆ.

ಬಾಲಕಿಯೋರ್ವಳು ಬಸ್ ನಿಲ್ದಾಣದಲ್ಲಿಯ ಅಂಗಡಿಯಲ್ಲಿ ಕುಳಿತಿದ್ದು, ಆಕೆಯ ಬಳಿ ಓರ್ವ ಶಂಕಾಸ್ಪದ ವ್ಯಕ್ತಿಯೂ ಇದ್ದಾನೆ ಎಂದು ಆ.13ರಂದು ಮಕ್ಕಳ ಸಹಾಯವಾಣಿ 1098ಕ್ಕೆ ಕರೆ ಬಂದಿತ್ತು. ತಕ್ಷಣ ಅಲ್ಲಿಗೆ ಧಾವಿಸಿದ್ದ ಪೋಲಿಸ್ ತಂಡವು ವ್ಯಕ್ತಿಯನ್ನು ವಿಚಾರಣೆ ನಡೆಸಿ,ಬಾಲಕಿಯನ್ನು ಆಪ್ತ ಸಮಾಲೋಚನೆಗಾಗಿ ಬಾಲ ನಿಕೇತನಕ್ಕೆ ರವಾನಿಸಿತ್ತು. 2-3 ದಿನಗಳ ತೀವ್ರ ಆಪ್ತ ಸಮಾಲೋಚನೆಯ ಬಳಿಕ ಬಾಲಕಿ ಐವರು ತನ್ನ ಮೇಲೆ ಅತ್ಯಾಚಾರ ನಡೆಸಿದ್ದಾರೆ ಎನ್ನುವುದನ್ನು ಬಹಿರಂಗಗೊಳಿಸಿದ್ದಾಳೆ. ಐವರು ಅಪರಿಚಿತ ವ್ಯಕ್ತಿಗಳ ವಿರುದ್ಧ ಬಿಎನ್‌ಎಸ್ ಮತ್ತು ಪೊಕ್ಸೊ ಕಾಯ್ದೆಯಡಿ ಪ್ರಕರಣ ದಾಖಲಿಸಿಕೊಳ್ಳಲಾಗಿತ್ತು ಎಂದು ಸುದ್ದಿಗಾರರಿಗೆ ತಿಳಿಸಿದ ಡೆಹ್ರಾಡೂನ್ ಎಸ್‌ಎಸ್‌ಪಿ ಅಜಯ ಸಿಂಗ್, ಬಾಲಕಿಯೊಂದಿಗೆ ಅಂಗಡಿಯಲ್ಲಿದ್ದ ಶಂಕಾಸ್ಪದ ವ್ಯಕ್ತಿ ಬಸ್ ಚಾಲಕನಾಗಿದ್ದ. ವಿಚಾರಣೆ ಸಂದರ್ಭದಲ್ಲಿ ಆತ ಇಡೀ ಘಟನೆಯ ಬಗ್ಗೆ ಬಾಯಿ ಬಿಟ್ಟಿದ್ದಾನೆ. ಒಟ್ಟು ಐವರನ್ನು ಬಂಧಿಸಲಾಗಿದೆ. ಬಾಲಕಿಯ ಪೋಷಕರಿಗೆ ಮಾಹಿತಿ ನೀಡಲಾಗಿದೆ ಎಂದು ಹೇಳಿದರು.

ಉತ್ತರಾಖಂಡ ರಾಜ್ಯ ಮಹಿಳಾ ಆಯೋಗದ ಅಧ್ಯಕ್ಷೆ ಕುಸುಮ ಕಂದ್ವಾಲ್ ರವಿವಾರ ಬೆಳಿಗ್ಗೆ ಬಾಲ ನಿಕೇತನಕ್ಕೆ ಭೇಟಿ ನೀಡಿ ಬಾಲಕಿಯನ್ನು ವಿಚಾರಿಸಿಕೊಂಡಿದ್ದಾರೆ. ಎಸ್‌ ಎಸ್‌ ಪಿ ಮತ್ತು ಜಿಲ್ಲಾ ಪ್ರೊಬೇಷನ್ ಅಧಿಕಾರಿಯಿಂದ ವಿವರವಾದ ಮಾಹಿತಿಗಳನ್ನು ಪಡೆದುಕೊಂಡ ಅವರು ಆರೋಪಿಗಳ ವಿರುದ್ಧ ತಕ್ಷಣ ಕ್ರಮಕ್ಕೆ ನಿರ್ದೇಶನ ನೀಡಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - Naufal

contributor

Byline - ವಾರ್ತಾಭಾರತಿ

contributor

Similar News