ದುಬೈನಲ್ಲಿ 18 ವರ್ಷ ಸೆರೆವಾಸ ಅನುಭವಿಸಿದ ನಂತರ ಮರಳಿ ತಾಯ್ನಾಡು ಸೇರಿದ ಐವರು ಭಾರತೀಯರು

Update: 2024-02-21 11:02 GMT

Photo: indiatoday.in

ಹೈದರಾಬಾದ್: ದುಬೈ ಜೈಲಿನಲ್ಲಿ 18 ವರ್ಷ ಸೆರೆವಾಸ ಅನುಭವಿಸಿದ ನಂತರ ತೆಲಂಗಾಣದ ಐವರು ವ್ಯಕ್ತಿಗಳು ಬುಧವಾರ ಹೈದರಾಬಾದ್ ವಿಮಾನ ನಿಲ್ದಾಣಕ್ಕೆ ಬಂದಿಳಿದಿದ್ದು, ಈ ಸಂದರ್ಭದಲ್ಲಿ ತವರಿಗೆ ಮರಳಿದ ಅವರು ತಮ್ಮ ಕುಟುಂಬದ ಸದಸ್ಯರನ್ನು ಕೂಡಿಕೊಂಡ ಭಾವುಕ ಘಟನೆ ವರದಿಯಾಗಿದೆ.

ತವರಿಗೆ ಮರಳಿದ ಈ ವ್ಯಕ್ತಿಗಳು ತಮ್ಮ ಕುಟುಂಬದ ಸದಸ್ಯರನ್ನು ತಬ್ಬಿಕೊಂಡು, ಭಾವುಕರಾಗಿದ್ದಾರೆ.

ಬಿಎಸ್‌ಆರ್ ಪಕ್ಷದ ಕಾರ್ಯಾಧ್ಯಕ್ಷ ಹಾಗೂ ಸಿರ್ಸಿಲ್ಲಾ ನಾಯಕ ಕೆ‌.ಟಿ.‌ರಾಮರಾವ್ ಅವರ ಪ್ರಯತ್ನದಿಂದಾಗಿ ಈ ವ್ಯಕ್ತಿಗಳು ಸೆರೆವಾಸದಿಂದ ಬಿಡುಗಡೆಗೊಂಡು, ತಮ್ಮ ಕುಟುಂಬಗಳನ್ನು ಸೇರಿಕೊಂಡಿದ್ದಾರೆ ಎಂದು ವರದಿಯಾಗಿದೆ.

ರಾಜಣ್ಣ ಸಿರ್ಸಿಲ್ಲಾ ಜಿಲ್ಲೆಗೆ ಸೇರಿರುವ ಶಿವರಾತ್ರಿ ಮಲ್ಲೇಶ್, ಶಿವರಾತ್ರಿ ರವಿ, ಗೊಲ್ಲೆಮ್ ನಂಪಲ್ಲಿ, ದುಂಡುಗುಲ ಲಕ್ಷ್ಮಣ್ ಹಾಗೂ ಶಿವರಾತ್ರಿ ಹನುಮಂತು ಎಂಬ ಐವರು ವ್ಯಕ್ತಿಗಳನ್ನು ನೇಪಾಳಿ ಪ್ರಜೆಯೊಬ್ಬರ ಹತ್ಯೆಯ ಪ್ರಕರಣದಲ್ಲಿ ಬಂಧಿಸಲಾಗಿತ್ತು.

ಈ ಕುರಿತು ನ್ಯಾಯಾಲಯಕ್ಕೆ ಮೇಲ್ಮನವಿ ಸಲ್ಲಿಸಿದಾಗ, ಅವರಿಗೆ 25 ವರ್ಷಗಳ ಅವಧಿಯ ಕಾರಾಗೃಹ ಶಿಕ್ಷೆ ವಿಧಿಸಲಾಗಿತ್ತು. ಒಂದು ವೇಳೆ ಮೃತ ವ್ಯಕ್ತಿಯ ಕುಟುಂಬದ ಸದಸ್ಯರು ಅಪರಾಧಿಗಳನ್ನು ಕ್ಷಮಿಸುವಂತೆ ಮನವಿ ಸಲ್ಲಿಸಿದರೆ, ಅವರನ್ನು ಬಿಡುಗಡೆ ಮಾಡಲು ಅವಕಾಶವಿರುವ ಕಾನೂನು ದುಬೈನಲ್ಲಿ ಜಾರಿಯಲ್ಲಿದೆ. ಈ ಸಂಬಂಧ 2011ರಲ್ಲಿ ಕಾರ್ಯೋನ್ಮುಖರಾದ ಕೆ.ಟಿ.ರಾಮರಾವ್, ಮೃತ ವ್ಯಕ್ತಿಯ ಕುಟುಂಬದ ಸದಸ್ಯರನ್ನು ಭೇಟಿಯಾಗಿ, ಅವರಿಗೆ ರೂ. 15 ಲಕ್ಷ ಮೊತ್ತದ ಚೆಕ್ ಅನ್ನು ಹಸ್ತಾಂತರಿಸಿದ್ದರು.

ಕಳೆದ ವರ್ಷ ಐದು ಮಂದಿ ಅಪರಾಧಿಗಳ ಕ್ಷಮಾಪಣಾ ಅರ್ಜಿಯನ್ನು ಮಾನ್ಯ ಮಾಡುವಂತೆ ಸಂಯುಕ್ತ ಅರಬ್ ಸಂಸ್ಥಾನದ ಸರಕಾರಕ್ಕೆ ಮನವಿ ಮಾಡಿದ್ದ ಕೆ.ಟಿ.ರಾಮರಾವ್, ಪ್ರಕರಣದ ಕುರಿತು ಚರ್ಚಿಸಲು ದುಬೈನಲ್ಲಿ ಉನ್ನತ ಅಧಿಕಾರಿಗಳನ್ನೂ ಭೇಟಿ ಮಾಡಿದ್ದರು.

ಕೊನೆಗೆ, ದುಬೈ ನ್ಯಾಯಾಲಯವು ಕ್ಷಮಾದಾನ ಮಂಜೂರು ಮಾಡಿದ ನಂತರ ಎಲ್ಲ ಐದು ಮಂದಿ ಅಪರಾಧಿಗಳೂ ಜೈಲಿನಿಂದ ಬಿಡುಗಡೆಗೊಂಡಿದ್ದಾರೆ. ಅವರಿಗೆಲ್ಲ ತವರಿಗೆ ಮರಳಲು ಖುದ್ದು ಕೆ.ಟಿ‌.ರಾಮರಾವ್ ಅವರೇ ವಿಮಾನದ ಟಿಕೆಟ್‌ಗಳನ್ನು ವ್ಯವಸ್ಥೆಗೊಳಿಸಿದ್ದಾರೆ.

ಈ ವ್ಯಕ್ತಿಗಳು ತಮ್ಮ ಕುಟುಂಬದ ಸದಸ್ಯರನ್ನು ಕೂಡಿಕೊಂಡಿರುವ ವಿಡಿಯೊವನ್ನು ಎಕ್ಸ್ ಸಾಮಾಜಿಕ ಮಾಧ್ಯಮದಲ್ಲಿ ಹಂಚಿಕೊಂಡಿರುವ ಕೆ.ಟಿ.ರಾಮರಾವ್, "ಈ ವ್ಯಕ್ತಿಗಳು ಮನೆಗೆ ಮರಳಿರುವುದರಿಂದ ಸಂತಸವಾಗಿದೆ" ಎಂದು ಬರೆದುಕೊಂಡಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - Irshad Venur

contributor

Byline - ವಾರ್ತಾಭಾರತಿ

contributor

Similar News