ಜಾಗತಿಕ ಸಲಹಾ ಸಂಸ್ಥೆಗಳಿಗೆ 5 ವರ್ಷಗಳಲ್ಲಿ ಮೋದಿ ಸರಕಾರದಿಂದ 500 ಕೋಟಿ ರೂ. ಪಾವತಿ
ಹೊಸದಿಲ್ಲಿ: 2017 ಎಪ್ರಿಲ್ ಮತ್ತು 2022 ಜೂನ್ ನಡುವಿನ ಅವಧಿಯಲ್ಲಿ, ಆಧಾರ್ ಸೇರಿದಂತೆ ಹಲವು ಯೋಜನೆಗಳಿಗಾಗಿ ಐದು ಸಲಹಾ ಸಂಸ್ಥೆಗಳಿಗೆ ಕೇಂದ್ರ ಸರಕಾರದ 59 ಸಚಿವಾಲಯಗಳು ಸುಮಾರು 500 ಕೋಟಿ ರೂಪಾಯಿ ಪಾವತಿಸಿವೆ ಎಂದು ‘ಇಂಡಿಯನ್ ಎಕ್ಸ್‌ಪ್ರೆಸ್’ ವರದಿ ಮಾಡಿದೆ.
ಐದು ದೊಡ್ಡ ಜಾಗತಿಕ ಸಲಹಾ ಸಂಸ್ಥೆಗಳು ಸುಮಾರು 500 ಕೋಟಿ ರೂ. ಮೌಲ್ಯದ ಕನಿಷ್ಠ 308 ಯೋಜನೆಗಳನ್ನು ಕೇಂದ್ರ ಸರಕಾರದಿಂದ ಪಡೆದು ಕೊಂಡಿವೆ ಎನ್ನುವುದು ಮಾಹಿತಿ ಹಕ್ಕು ಕಾಯ್ದೆಯಡಿ ಪಡೆಯಲಾದ ದಾಖಲೆಗಳಿಂದ ಬಹಿರಂಗವಾಗಿದೆ ಎಂದು ಪತ್ರಿಕೆ ವರದಿ ಮಾಡಿದೆ.
ಈ ಬೃಹತ್ ಸಂಸ್ಥೆಗಳೆಂದರೆ- ಪ್ರೈಸ್‌ವಾಟರ್ ಹೌಸ್ ಕೂಪರ್ಸ್, ಡೆಲಾಯಿಟ್ ಟಚ್ ಟೊಹ್ಮಟ್ಸು ಲಿಮಿಟೆಡ್, ಅರ್ನ್‌ಸ್ಟ್ ಆ್ಯಂಡ್ ಯಂಗ್ ಗ್ಲೋಬಲ್ ಲಿಮಿಟೆಡ್, ಕೆಪಿಎಮ್‌ಜಿ ಇಂಟರ್‌ನ್ಯಾಶನಲ್ ಲಿಮಿಟೆಡ್ ಮತ್ತು ಮೆಕಿನ್ಸೆ ಆ್ಯಂಡ್ ಕಂಪೆನಿ.
ಸಚಿವಾಲಯಗಳ ಪೈಕಿ ಕೆಲವು ಹೆಸರುಗಳು ಹೀಗಿವೆ: ಪೆಟ್ರೋಲಿಯಮ್ ಮತ್ತು ಪ್ರಾಕೃತಿಕ ಅನಿಲ; ಗ್ರಾಮೀಣ ಅಭಿವೃದ್ಧಿ; ಆಡಳಿತ ಸುಧಾರಣೆ ಮತ್ತು ಸಾರ್ವಜನಿಕ ಕುಂದುಕೊರತೆಗಳು; ಕೈಗಾರಿಕೆ ಮತ್ತು ಆಂತರಿಕ ವ್ಯಾಪಾರ ವೃದ್ಧಿ; ಕಲ್ಲಿದ್ದಲು; ಇಲೆಕ್ಟ್ರಾನಿಕ್ಸ್ ಮತ್ತು ಮಾಹಿತಿ ತಂತ್ರಜ್ಞಾನ; ಆರೋಗ್ಯ ಮತ್ತು ಕುಟುಂಬ ಕಲ್ಯಾಣ, ಕೌಶಲ ಅಭಿವೃದ್ಧಿ ಮತ್ತು ಉದ್ಯಮಶೀಲತೆ; ರಕ್ಷಣೆ; ನಾಗರಿಕ ವಾಯುಯಾನ; ಸಾರ್ವಜನಿಕ ಉದ್ದಿಮೆಗಳು; ಅಸಾಂಪ್ರದಾಯಿಕ ಇಂಧನ ಸಂಪನ್ಮೂಲಗಳು; ವಿದ್ಯುತ್; ರಸ್ತೆ ಸಾರಿಗೆ ಮತ್ತು ಹೆದ್ದಾರಿಗಳು; ಪರಿಸರ, ಅರಣ್ಯ ಮತ್ತು ಹವಾಮಾನ ಬದಲಾವಣೆ; ಮತ್ತು ಪ್ರವಾಸೋದ್ಯಮ.
ಗರಿಷ್ಠ ಯೋಜನೆಗಳನ್ನು ಪೆಟ್ರೋಲಿಯಮ್ ಸಚಿವಾಲಯ ಹೊರಗುತ್ತಿಗೆಗೆ ನೀಡಿದೆ. ಈ ಯೋಜನೆಗಳಿಗಾಗಿ ಅದು 170 ಕೋಟಿ ರೂಪಾಯಿಯನ್ನು ಪಾವತಿಸಿದೆ. ನಂತರದ ಸ್ಥಾನದಲ್ಲಿ ವಿದ್ಯುತ್ ಸಚಿವಾಲಯವಿದೆ. ಅದರ ವ್ಯಾಪ್ತಿಯಲ್ಲಿ ಬರುವ ಒಂಭತ್ತು ಸಂಸ್ಥೆಗಳು ಹೊರಗುತ್ತಿಗೆಗಳಿಗಾಗಿ 166.41 ಕೋಟಿ ರೂಪಾಯಿ ಮೊತ್ತವನ್ನು ಸಲಹಾ ಸಂಸ್ಥೆಗಳಿಗೆ ಪಾವತಿಸಿದೆ ಎಂದು ‘ಇಂಡಿಯನ್ ಎಕ್ಸ್‌ಪ್ರೆಸ್’ ಹೇಳಿದೆ.
ಹೆಚ್ಚಿನ ಹೊರಗುತ್ತಿಗೆಗಳನ್ನು ಪಿಡಬ್ಲ್ಯುಸಿಗೆ ನೀಡಲಾಗಿದೆ. ಅದು 2017 ಎಪ್ರಿಲ್ ಮತ್ತು 2022 ಜೂನ್ ನಡುವಿನ ಅವಧಿಯಲ್ಲಿ 92 ಗುತ್ತಿಗೆಗಳನ್ನು ಪಡೆದುಕೊಂಡಿದೆ. ಇದಕ್ಕಾಗಿ ಅದಕ್ಕೆ 156 ಕೋಟಿ ರೂ. ಮೊತ್ತವನ್ನು ಪಾವತಿಸಲಾಗಿದೆ.