ಆರು ಬಾರಿಯ ಕಾಂಗ್ರೆಸ್ ಶಾಸಕ ಈಗ ಮಧ್ಯಪ್ರದೇಶ ಬಿಜೆಪಿ ಸಚಿವ!

Update: 2024-07-09 03:10 GMT

 Photo Credit: ANI

ಭೋಪಾಲ್: ಕಾಂಗ್ರೆಸ್ ಪಕ್ಷದಿಂದ ಆರು ಬಾರಿ ರಾಜ್ಯ ವಿಧಾನಸಭೆಗೆ ಶಾಸಕರಾಗಿ ಆಯ್ಕೆಯಾದ ರಾಮನಿವಾಸ್ ರಾವತ್ ಬಿಜೆಪಿ ನೇತೃತ್ವದ ಮಧ್ಯಪ್ರದೇಶ ಸರ್ಕಾರದಲ್ಲಿ ಸಚಿವರಾಗಿ ಕೇವಲ 15 ನಿಮಿಷ ಅಂತರದಲ್ಲಿ ಎರಡು ಬಾರಿ ಪ್ರಮಾಣವಚನ ಸ್ವೀಕರಿಸಿದ ಅಪರೂಪದ ಘಟನೆಗೆ ಮಧ್ಯಪ್ರದೇಶ ರಾಜಧಾನಿ ಸೋಮವಾರ ಸಾಕ್ಷಿಯಾಯಿತು.

ವಿಜಯಪುರ ಕ್ಷೇತ್ರದಿಂದ ಆರು ಬಾರಿ ಆಯ್ಕೆಯಾಗಿರುವ ರಾವತ್, ಏಪ್ರಿಲ್ 30ರಂದು ಸಾರ್ವಜನಿಕ ಸಮಾರಂಭದಲ್ಲಿ ಬಿಜೆಪಿ ಸೇರಿದ್ದರು. ಆದರೆ ತಮ್ಮನ್ನು ಸಚಿವರನ್ನಾಗಿ ಮಾಡುವ ಭರವಸೆಯನ್ನು ಬಿಜೆಪಿ ಈಡೇರಿಸುವವರೆಗೂ ಅಧಿಕೃತವಾಗಿ ಕಾಂಗ್ರೆಸ್ ಪಕ್ಷವನ್ನು ತೊರೆಯಲು ನಿರಾಕರಿಸಿದ್ದರು.

ಮೊದಲು ರಾಜಭವನದಲ್ಲಿ ನಡೆದ ಸಮಾರಂಭದಲ್ಲಿ ರಾವತ್ ರಾಜ್ಯ ಸಚಿವರಾಗಿ ಪ್ರಮಾಣವಚನ ಸ್ವೀಕರಿಸಿದರು. ರಾಜ್ಯದ ಸಚಿವರು ಎನ್ನುವ ಬದಲು ರಾಜ್ಯ ಸಚಿವರು ಎಂದು ಬೋಧಿಸಲಾಗಿತ್ತೇ ಅಥವಾ ಇದು ಉದ್ದೇಶಪೂರ್ವಕವೇ ಎನ್ನುವುದು ಸ್ಪಷ್ಟವಾಗಿರಲಿಲ್ಲ. ಆದರೆ ಇದು ಗಮನಕ್ಕೆ ಬಂದ ಕೆಲವೇ ಕ್ಷಣಗಳಲ್ಲಿ ಮತ್ತೆ ಸಂಪುಟ ದರ್ಜೆ ಸಚಿವರಾಗಿ ಪ್ರಮಾಣವಚನ ಸ್ವೀಕರಿಸಿದರು.

ಪ್ರಮಾಣವಚನ ಸ್ವೀಕರಿಸಿದ ಬಳಿಕ ರಾಮ್ನಿವಾಸ್ ರಾವತ್ ಅವರು ಮಧ್ಯಪ್ರದೇಶದ ಸ್ಪೀಕರ್ ನರೇಂದ್ರ ಸಿಂಗ್ ಥೋಮರ್ ಅವರಿಗೆ ಕಾಂಗ್ರೆಸ್ ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡುತ್ತಿರುವುದಾಗಿ ತಿಳಿಸಿದರು.

"ಕಾಂಗ್ರೆಸ್ ಶಾಸಕ ರಾಮ್ನಿವಾಸ್ ರಾವತ್ ಅವರ ಶಾಸಕತ್ವವನ್ನು ಉಚ್ಚಾಟಿಸುವಂತೆ ಅಧಿಕೃತ ದಾಖಲೆಗಳ ಸಹಿತ ಸ್ಪೀಕರ್ಗೆ ಮನವಿ ಸಲ್ಲಿಸಲಾಗಿತ್ತು. ದುರಾದೃಷ್ಟವಶಾತ್, ಪ್ರಜಾಪ್ರಭುತ್ವದ ಕಗ್ಗೊಲೆ ಮಾಡುವ ಕುಖ್ಯಾತಿ ಹೊಂದಿರುವ ಬಿಜೆಪಿ, ಕಾಂಗ್ರೆಸ್ ಶಾಸಕರೊಬ್ಬರನ್ನು ಸಚಿವರನ್ನಾಗಿ ಮಾಡಿಕೊಂಡಿದೆ. ಇದು ಪ್ರಜಾಪ್ರಭುತ್ವ ಹಾಗೂ ಸಂವಿಧಾನಕ್ಕೆ ಮಾಡಿದ ಅಪಚಾರ" ಎಂದು ಪಿಸಿಸಿ ಅಧ್ಯಕ್ಷ ಜಿತು ಪಟ್ವಾರಿ ಹೇಳಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - Safwan

contributor

Byline - ವಾರ್ತಾಭಾರತಿ

contributor

Similar News