ಶೇ.60ರಷ್ಟು ಸಾವುಗಳಿಗೆ ರಸ್ತೆ ಅಪಘಾತಗಳು ಕಾರಣ: ನಿಮ್ಹಾನ್ಸ್ ಅಧ್ಯಯನ ವರದಿ

Update: 2024-06-21 10:56 GMT

ಸಾಂದರ್ಭಿಕ ಚಿತ್ರ 

ಬೆಂಗಳೂರು: ರಸ್ತೆ ಅಪಘಾತಗಳು ಮತ್ತು ನೀರಿನಲ್ಲಿ ಮುಳುಗಿ ಸಾವು ನೋವುಗಳು ಹೆಚ್ಚುತ್ತಿದ್ದು, ರಾಷ್ಟ್ರೀಯ ಮಾನಸಿಕ ಆರೋಗ್ಯ ಮತ್ತು ನರ ವಿಜ್ಞಾನ ಸಂಸ್ಥೆ (ನಿಮ್ಹಾನ್ಸ್)ಯು ಇತ್ತೀಚಿಗೆ ನಡೆಸಿದ ಅಧ್ಯಯನವು ಶೇ.60ರಷ್ಟು ಸಾವುಗಳು ರಸ್ತೆ ಅಪಘಾತಗಳಿಂದ ಸಂಭವಿಸುತ್ತವೆ ಎಂದು ತೋರಿಸಿದೆ. ನಿಮ್ಹಾನ್ಸ್‌ನಲ್ಲಿ ಪ್ರತಿ ತಿಂಗಳು ರಸ್ತೆ ಅಪಘಾತಗಳಿಂದ ಸಾವುಗಳು ಮತ್ತು ತಲೆಗೆ ಗಾಯಗಳ ಸುಮಾರು 1,000-ದಿನವೊಂದಕ್ಕೆ 25ರಿಂದ 30ರಷ್ಟು ಪ್ರಕರಣಗಳು ದಾಖಲಾಗುತ್ತವೆ.

ತಲೆಗೆ ಗಾಯಗೊಂಡ ಮತ್ತು ಸಾವುಗಳ ಪ್ರಕರಣಗಳಲ್ಲಿ ದ್ವಿಚಕ್ರ ವಾಹನ ಸವಾರರ ಪಾಲು ಶೇ.60ರಿಂದ ಶೇ.70ರಷ್ಟಿದ್ದರೆ,ಮಕ್ಕಳ ಪಾಲು ಶೇ.7ರಿಂದ 9ರಷ್ಟಿದೆ. ಶೇ.10ಕ್ಕೂ ಕಡಿಮೆ ಪ್ರಕರಣಗಳಲ್ಲಿ ಮಕ್ಕಳು ಒಳಗೊಂಡಿದ್ದರೂ ಅದು ದೇಶಕ್ಕೆ ಭಾರೀ ನಷ್ಟ ಎಂದು ನಿಮ್ಹಾನ್ಸ್‌ನ ಸಾರ್ವಜನಿಕ ಆರೋಗ್ಯ ಕೇಂದ್ರದ ಸಾಂಕ್ರಾಮಿಕ ರೋಗಶಾಸ್ತ್ರ ವಿಭಾಗದ ಅಡಿಷನಲ್ ಪ್ರೊಫೆಸರ್ ಡಾ.ಗೌತಮ ಎಂ.ಸುಕುಮಾರ ಹೇಳಿದರು.

ಅಪ್ರಾಪ್ತ ವಯಸ್ಕರ ಸಂಖ್ಯೆ,ವಿಶೇಷವಾಗಿ 14ರಿಂದ 18 ವರ್ಷ ವಯೋಮಾನದೊಳಗಿನ ಮಕ್ಕಳ ಸಂಖ್ಯೆ ಹೆಚ್ಚುತ್ತಿರುವುದನ್ನು ನಾವು ಗಮನಿಸಿದ್ದೇವೆ. ತಲೆಗೆ ಗಾಯ ಮತ್ತು ರಸ್ತೆ ಅಪಘಾತಗಳ ಕನಿಷ್ಠ 70ರಷ್ಟು ಪ್ರಕರಣಗಳು ಈ ಗುಂಪಿಗೆ ಸೇರಿವೆ. ಅವರು ರಸ್ತೆ ಸುರಕ್ಷತೆಯನ್ನು ಅರ್ಥ ಮಾಡಿಕೊಳ್ಳುವಷ್ಟು ಪ್ರಬುದ್ಧರಲ್ಲ,ಸ್ವತಂತ್ರರಾಗಲು ಆಗಷ್ಟೇ ಆರಂಭಿಸಿರುತ್ತಾರೆ ಮತ್ತು ಅವರು ಅಪಾಯಗಳಿಗೆ ಒಡ್ಡಿಕೊಳ್ಳುವುದೂ ಹೆಚ್ಚು. ರಸ್ತೆಗಳಲ್ಲಿ ಅವರ ಸಂಖ್ಯೆಯೂ ಹೆಚ್ಚುತ್ತಿದೆ ಎಂದು ಸುಕುಮಾರ ಹೇಳಿದರು.

ರಸ್ತೆ ಸುರಕ್ಷತೆ ಸಮಸ್ಯೆಯನ್ನು ಪರಿಹರಿಸಲು,ರಸ್ತೆಗಳಲ್ಲಿ ಮಕ್ಕಳ ಸುರಕ್ಷತೆಯ ಕುರಿತು ಕ್ರಮಗಳನ್ನು ಕೈಗೊಳ್ಳಲು ನಿಮ್ಹಾನ್ಸ್ ಬೆಂಗಳೂರು ಸಂಚಾರ ಪೋಲಿಸರಿಗೆ ಸಹಕರಿಸುತ್ತಿದೆ. ಗಾಯಗೊಳ್ಳುವ ಮತ್ತು ಸಾಯುವ ಮಕ್ಕಳ ಸಂಖ್ಯೆ ಹೆಚ್ಚುತ್ತಿರುವುದರಿಂದ ತಂಡವು ಮಕ್ಕಳಿಗಾಗಿ ಪ್ರತ್ಯೇಕ ನೀತಿಯನ್ನು ರೂಪಿಸಲು ಕಾರ್ಯತತ್ಪರವಾಗಿದೆ.

ಸಂಚಾರ ಮತ್ತು ರಸ್ತೆ ಸುರಕ್ಷತೆ ಕಾನೂನುಗಳಲ್ಲಿ ಸುಧಾರಣೆಯ ಅಗತ್ಯವನ್ನು ಒಪ್ಪಿಕೊಂಡ ಹಿರಿಯ ಪೋಲಿಸ್ ಅಧಿಕಾರಿಯೋರ್ವರು, ಅಪ್ರಾಪ್ತ ವಯಸ್ಕ ಮಕ್ಕಳು ವಾಹನ ಚಲಾಯಿಸುತ್ತಿದ್ದರೆ ಅವರ ವಿರುದ್ಧ ಮಾತ್ರವಲ್ಲ,ಅವರ ಪೋಷಕರು ಮತ್ತು ವಾಹನ ಮಾಲಿಕರ ವಿರುದ್ಧವೂ ಪ್ರಕರಣವನ್ನು ದಾಖಲಿಸಿಕೊಳ್ಳಲಾಗುತ್ತದೆ. ಇತರ ಪ್ರಕರಣಗಳಿಗೆ ಹೋಲಿಸಿದರೆ ಅಪಘಾತಗಳಿಂದ ಮತ್ತು ನೀರಿನಲ್ಲಿ ಮುಳುಗಿ ಮಕ್ಕಳು ಸಾಯುವ ಘಟನೆಗಳು ಹೆಚ್ಚುತ್ತಿವೆ ಎಂದರು.

ನಿಮ್ಹಾನ್ಸ್ ತಂಡವು ಬ್ಲೂಮ್‌ಬರ್ಗ್,ಜಾನ್ ಹಾಪ್ಕಿನ್ಸ್ ವಿವಿ,ಸಾರಿಗೆ ಇಲಾಖೆ ಮತ್ತು ಸಂಚಾರ ಪೋಲಿಸರ ಸಹಭಾಗಿತ್ವದೊಂದಿಗೆ ರಸ್ತೆಗಳು ಮತ್ತು ಅಪಘಾತಗಳಿಗೆ ಕಾರಣಗಳ ಬಗ್ಗೆ ಅಧ್ಯಯನವನ್ನು ನಡೆಸುತ್ತಿದೆ.

Tags:    

Writer - ವಾರ್ತಾಭಾರತಿ

contributor

Editor - Irshad Venur

contributor

Byline - ವಾರ್ತಾಭಾರತಿ

contributor

Similar News