75% ಮುಸ್ಲಿಮ್ ವಿರೋಧಿ ದ್ವೇಷ ಭಾಷಣಗಳು ಬಿಜೆಪಿ ಆಡಳಿತದ ರಾಜ್ಯಗಳಲ್ಲಿ ; ‘ಇಂಡಿಯಾ ಹೇಟ್ ಲ್ಯಾಬ್’ ವರದಿ
ಹೊಸದಿಲ್ಲಿ: ಕಳೆದ ವರ್ಷ ಭಾರತದಲ್ಲಿ ದಾಖಲಾಗಿರುವ 668 ಮುಸ್ಲಿಮ್ ವಿರೋಧಿ ದ್ವೇಷ ಭಾಷಣ ಘಟನೆಗಳ ಪೈಕಿ 498 ಅಥವಾ 75 ಶೇಕಡ ಬಿಜೆಪಿ ಆಡಳಿತದ ರಾಜ್ಯಗಳಲ್ಲಿ ಸಂಭವಿಸಿವೆ ಎಂದು ವಾಶಿಂಗ್ಟನ್ ನ ಸಂಶೋಧನಾ ಗುಂಪು ‘ಇಂಡಿಯಾ ಹೇಟ್ ಲ್ಯಾಬ್’ ಸೋಮವಾರ ಹೇಳಿದೆ.
ದ್ವೇಷ ಭಾಷಣಕ್ಕೆ ವಿಶ್ವಸಂಸ್ಥೆ ನೀಡಿರುವ ವ್ಯಾಖ್ಯೆಯ ಆಧಾರದಲ್ಲಿ ಸಂಶೋಧಕರು ದ್ವೇಷ ಭಾಷಣಗಳನ್ನು ಗುರುತಿಸಿದ್ದಾರೆ. ಧರ್ಮ, ಜನಾಂಗೀಯತೆ, ರಾಷ್ಟ್ರೀಯತೆ ಅಥವಾ ಲಿಂಗದ ಆಧಾರದಲ್ಲಿ ಓರ್ವ ವ್ಯಕ್ತಿಯ ಅಥವಾ ಒಂದು ಗುಂಪಿನ ವಿರುದ್ಧ ಪಕ್ಷಪಾತಪೂರಿತ ಭಾಷೆಯನ್ನು ಬಳಸುವುದು ಎಂಬ ವಿವರಣೆಯನ್ನು ವಿಶ್ವಸಂಸ್ಥೆಯು ದ್ವೇಷ ಭಾಷಣಕ್ಕೆ ನೀಡಿದೆ.
ಒಟ್ಟು ದಾಖಲಾದ ದ್ವೇಷ ಭಾಷಣ ಪ್ರಕರಣಗಳ ಪೈಕಿ 100 ಅಥವಾ 15 ಶೇಕಡದಲ್ಲಿ ಬಿಜೆಪಿ ನಾಯಕರು ಶಾಮೀಲಾಗಿದ್ದಾರೆ ಎಂದು ವರದಿ ಹೇಳುತ್ತದೆ. ತೆಲಂಗಾಣದ ಬಿಜೆಪಿ ಶಾಸಕ ಟಿ. ರಾಜಾ ಸಿಂಗ್ 23 ದ್ವೇಷ ಭಾಷಣಗಳನ್ನು ಮಾಡಿದ್ದಾರೆ. ಇವುಗಳ ಪೈಕಿ 14 ಭಾಷಣಗಳು ‘‘ಅಪಾಯಕಾರಿಯಾಗಿದ್ದು, ಮುಸ್ಲಿಮರ ವಿರುದ್ಧ ಹಿಂಸಾಚಾರಕ್ಕೆ ಕರೆಗಳನ್ನು ನೀಡಿದ್ದಾರೆ’’ ಎಂದು ವರದಿ ಹೇಳುತ್ತದೆ.
ಬಿಜೆಪಿ ಆಡಳಿತದ ರಾಜ್ಯಗಳಲ್ಲಿ, ಸುಮಾರು 11 ಶೇಕಡ ದ್ವೇಷ ಭಾಷಣ ಘಟನೆಗಳಲ್ಲಿ ಬಿಜೆಪಿ ನಾಯಕರು ಶಾಮೀಲಾಗಿದ್ದರೆ, ಬಿಜೆಪಿಯೇತರ ಆಡಳಿತದ ರಾಜ್ಯಗಳಲ್ಲಿ ಈ ಸಂಖ್ಯೆ 28 ಶೇಕಡಕ್ಕೆ ಏರುತ್ತದೆ. ರಾಜಕಾರಣಿಗಳಲ್ಲದೆ, ಹಿಂದೂ ಧಾರ್ಮಿಕ ನಾಯಕರು 93 ಅಥವಾ 14 ಶೇಕಡ ದ್ವೇಷ ಭಾಷಣಗಳನ್ನು ಮಾಡಿದ್ದಾರೆ ಎಂದು ವರದಿ ಹೇಳುತ್ತದೆ.
ಹಿಂದೂ ತೀವ್ರವಾದಿ ನಿಲುವುಗಳ ಪ್ರಚಾರಕಿ ಕಾಜಲ ಹಿಂದೂಸ್ತಾನಿ, ಅಂತರ್ರಾಷ್ಟ್ರೀಯ ಹಿಂದೂ ಪರಿಷದ್ ಮುಖ್ಯಸ್ಥ ಪ್ರವೀಣ್ ತೊಗಾಡಿಯ ಮತ್ತು ಹಿಂದು ರಾಷ್ಟ್ರ ಸೇನಾ ಮುಖ್ಯಸ್ಥ ಧನಂಜಯ ದೇಸಾಯಿ- ಮೂವರು ಪ್ರಮುಖ ದ್ವೇಷ ಭಾಷಣಕಾರರು ಎಂಬುದಾಗಿಯೂ ವರದಿ ಗುರುತಿಸಿದೆ.
ಅತ್ಯಂತ ಹೆಚ್ಚು ದ್ವೇಷ ಭಾಷಣದ ಘಟನೆಗಳು ಮಹಾರಾಷ್ಟ್ರ (118), ಉತ್ತರಪ್ರದೇಶ (104) ಮತ್ತು ಮಧ್ಯಪ್ರದೇಶ (65)ದಲ್ಲಿ ನಡೆದಿವೆ. ಉತ್ತರಪ್ರದೇಶ ಮತ್ತು ಮಧ್ಯಪ್ರದೇಶಗಳಲ್ಲಿ ಬಿಜೆಪಿ ಆಡಳಿತವಿದ್ದರೆ, ಮಹಾರಾಷ್ಟ್ರದಲ್ಲಿ ಬಿಜೆಪಿ, ಶಿವಸೇನ ಮತ್ತು ನ್ಯಾಶನಲಿಸ್ಟ್ ಕಾಂಗ್ರೆಸ್ ಪಕ್ಷಗಳ ಸಮ್ಮಿಶ್ರ ಸರಕಾರವಿದೆ. ಒಟ್ಟು ದ್ವೇಷ ಭಾಷಣ ಪ್ರಕರಣಗಳ 43 ಶೇಕಡ ಈ ಮೂರು ರಾಜ್ಯಗಳಲ್ಲಿ ದಾಖಲಾಗಿವೆ.
ಕಳೆದ ವರ್ಷದ ಮೇ ತಿಂಗಳಲ್ಲಿ ಕಾಂಗ್ರೆಸ್ ಸರಕಾರವು ಅಧಿಕಾರಕ್ಕೆ ಬಂದ ಬಳಿಕ, ಕರ್ನಾಟಕದಲ್ಲಿ ದ್ವೇಷ ಭಾಷಣಗಳ ಸಂಖ್ಯೆಯಲ್ಲಿ ಗಣನೀಯ ಇಳಿಕೆಯಾಗಿದೆ ಎನ್ನುವುದನ್ನೂ ವರದಿ ಪತ್ತೆಹಚ್ಚಿದೆ.