ಶೇ. 85ರಷ್ಟು ಭಾರತೀಯರಿಂದ ಮಿಲಿಟರಿ ಆಡಳಿತ ಅಥವಾ ಸರ್ವಾಧಿಕಾರಕ್ಕೆ ಒಲವು: Pew ಸಮೀಕ್ಷೆ
ಹೊಸದಿಲ್ಲಿ: ದೇಶಕ್ಕೆ ಮಿಲಿಟರಿ ಆಡಳಿತ ಅಥವಾ ಸರ್ವಾಧಿಕಾರಿ ನಾಯಕರೊಬ್ಬರಿಂದ ಆಡಳಿತವು ಒಳ್ಳೆಯದು ಎಂದು ಪಿವ್ ರಿಸರ್ಚ್ ಸೆಂಟರ್ ನಡೆಸಿದ ಸಮೀಕ್ಷೆಯಲ್ಲಿ ಭಾಗವಹಿಸಿದವರ ಪೈಕಿ ಶೇ 85ರಷ್ಟು ಭಾರತೀಯರು ಅಭಿಪ್ರಾಯ ಪಟ್ಟಿದ್ದಾರೆ. ಅಮೆರಿಕಾ ಮೂಲದ ಪಿವ್ (Pew) ಸಂಸ್ಥೆ 2023ರಲ್ಲಿ ಸಮೀಕ್ಷೆ ನಡೆಸಿತ್ತು.
ಈ ಸಮೀಕ್ಷೆಯು 24 ದೇಶಗಳಲ್ಲಿ ನಡೆದಿತ್ತು. ಆದರೆ ಸರ್ವಾಧಿಕಾರಿ ಆಡಳಿತಕ್ಕೆ ಅತ್ಯಂತ ಹೆಚ್ಚು ಒಲವು ವ್ಯಕ್ತಪಡಿಸಿದ ಗರಿಷ್ಠ ಸಂಖ್ಯೆಯ ಜನರು ಭಾರತೀಯರಾಗಿದ್ದರು.
“ರೆಪ್ರಸೆಂಟೇಟಿವ್ ಡೆಮಾಕ್ರೆಸಿ ರಿಮೇನ್ಸ್ ಎ ಪಾಪ್ಯುಲರ್ ಐಡಿಯಲ್, ಬಟ್ ಪೀಪಲ್ ಅರೌಂಡ್ ದಿ ವರ್ಲ್ಡ್ ಆರ್ ಕ್ರಿಟಿಕಲ್ ಆಫ್ ಹೌ ಇಟ್ ಈಸ್ ವರ್ಕಿಂಗ್,” ಎಂಬ ಹೆಸರಿನ ಈ ಸಮೀಕ್ಷೆಯಲ್ಲಿ ಭಾರತದಿಂದ 2611 ವಯಸ್ಕರು ಭಾಗವಹಿಸಿದ್ದರು. ಅಂಡಮಾನ್ ನಿಕೋಬಾರ್ ದ್ವೀಪ ಸಮೂಹಗಳು, ಲಕ್ಷದ್ವೀಪ ಮತ್ತು ಈಶಾನ್ಯ ರಾಜ್ಯಗಳ ಜನರನ್ನು ಈ ಸಮೀಕ್ಷೆಯಲ್ಲಿ ಸೇರಿಸಲಾಗಿರಲಿಲ್ಲ.
ಸರ್ವಾಧಿಕಾರಿಯ ಆಡಳಿತಕ್ಕೆ ಈ ಸಮೀಕ್ಷೆಯಲ್ಲಿ ಭಾಗವಹಿಸಿದ ಭಾರತೀಯರ ಪೈಕಿ ಶೇ. 67ರಷ್ಟು ಮಂದಿ ಒಲವು ವ್ಯಕ್ತಪಡಿಸಿದ್ದರೆ ಮಿಲಿಟರಿ ಆಡಳಿತಕ್ಕೆ ಒಲವು ವ್ಯಕ್ತಪಡಿಸಿದವರ ಪೈಕಿ ಶೇ 29ರಷ್ಟು ಮಂದಿ ಅದು ಬಹುತೇಕ ಒಳ್ಳೆಯದು ಎಂದರೆ ಶೇ 43ರಷ್ಟು ಮಂದಿ ಅದು ತುಂಬಾ ಒಳ್ಳೆಯದು ಎಂದು ಹೇಳಿದ್ದಾರೆ.
ಭಾರತದ ಜನಪ್ರತಿನಿಧಿಗಳು ಜನರ ಅಭಿಪ್ರಾಯಗಳಿಗೆ ಮನ್ನಣೆ ನೀಡುವುದಿಲ್ಲ ಎಂದು ಶೇ.54ರಷ್ಟು ಮಂದಿ ಅಭಿಪ್ರಾಯಪಟ್ಟಿದ್ದಾರೆ.
ಶೇ. 72ರಷ್ಟು ಮಂದಿ ಸದ್ಯ ದೇಶದಲ್ಲಿ ಕಾರ್ಯನಿರ್ವಹಿಸುತ್ತಿರುವ ಪ್ರಜಾಪ್ರಭುತ್ವದಿಂದ ಖುಷಿಯಾಗಿದೆ ಎಂದಿದ್ದಾರೆ.
ಶೇ.79ರಷ್ಟು ಮಂದಿಗೆ ಪ್ರಧಾನಿ ನರೇಂದ್ರ ಮೋದಿ ಬಗ್ಗೆ ಒಳ್ಳೆಯ ಅಭಿಪ್ರಾಯವಿದ್ದರೆ ಶೇ. 62ರಷ್ಟು ಮಂದಿ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಬಗ್ಗೆ ಒಳ್ಳೆಯ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.