ಅಪಹರಣ, ಅತ್ಯಾಚಾರಕ್ಕೆ ಒಳಗಾಗಿದ್ದ 9ನೇ ತರಗತಿ ವಿದ್ಯಾರ್ಥಿನಿ ಸಾವು
ಕೊಲ್ಕತ್ತಾ: ವಾರದ ಹಿಂದೆ ಶಾಲೆಯಿಂದ ಮನೆಗೆ ವಾಪಸ್ಸಾಗುತ್ತಿದ್ದಾಗ ಅಪಹರಣ- ಅತ್ಯಾಚಾರಕ್ಕೆ ಒಳಗಾಗಿದ್ದ ಕೂಚ್ ಬೆಹಾರ್ ನ ಒಂಭತ್ತನೇ ತರಗತಿ ವಿದ್ಯಾರ್ಥಿನಿ ಬುಧವಾರ ಉತ್ತರ ಬಂಗಾಳ ಜಿಲ್ಲೆಯ ಸರ್ಕಾರಿ ಆಸ್ಪತ್ರೆಯಲ್ಲಿ ಕೊನೆಯುಸಿರೆಳೆದಿದ್ದಾಳೆ. ಈ ಪ್ರಕರಣ ಸಂಬಂಧ ಪೊಲೀಸರು ಐದು ಮಂದಿ ಶಂಕಿತರನ್ನು ಬಂಧಿಸಿದ್ದಾರೆ ಎಂದು ವರದಿಯಾಗಿದೆ.
ಹದಿಹರೆಯದ ಯುವತಿಯ ಸಾವು ಆಡಳಿತಾರೂಢ ಟಿಎಂಸಿ ಹಾಗೂ ವಿರೋಧ ಪಕ್ಷವಾದ ಬಿಜೆಪಿ ನಡುವಿನ ಹಗ್ಗ ಜಗ್ಗಾಟಕ್ಕೆ ಕಾರಣವಾಗಿದೆ. ಉಭಯ ಪಕ್ಷಗಳು ಸಂತ್ರಸ್ತೆಯ ಕುಟುಂಬದ ಪರವಾಗಿ ನಿಲ್ಲಲು ಮುಂದಾಗಿವೆ ಎಂದು ತಿಳಿದು ಬಂದಿದೆ.
ಪ್ರಜ್ಞಾಹೀನ ಸ್ಥಿತಿಯಲ್ಲಿ ಖಾಸಗಿ ಆಸ್ಪತ್ರೆಯಿಂದ ವಿದ್ಯಾರ್ಥಿನಿಯನ್ನು ಸರ್ಕಾರಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಲೈಂಗಿಕ ಕಿರುಕುಳದ ವೇಳೆ ಬಾಲಕಿಯ ಮೆದುಳಿಗೆ ಸಾಕಷ್ಟು ಆಮ್ಲಜನಕ ಪೂರೈಕೆಯಾಗದೇ ಆಕೆ ಪ್ರಜ್ಞಾಹೀನ ಸ್ಥಿತಿ ತಲುಪಿದ್ದಾಗಿ ವೈದ್ಯಕೀಯ ಪರೀಕ್ಷೆಯಿಂದ ದೃಢಪಟ್ಟಿತ್ತು.
ಜುಲೈ 18ರಂದು ಶಾಲೆಗೆ ತೆರಳಿದ್ದ ಬಾಲಕಿ ಮನೆಗೆ ವಾಪಸ್ಸಾಗಿಲ್ಲ ಎಂದು ಸಂತ್ರಸ್ತೆಯ ಕುಟುಂಬದವರು ನೀಡಿದ ದೂರಿನಲ್ಲಿ ತಿಳಿಸಲಾಗಿದೆ.
"ಎಲ್ಲ ಕಡೆಗಳಲ್ಲಿ ಹುಡುಕಿದ ಮನೆಮಂದಿ, ಸಂಬಂಧಿಕರನ್ನು ಕೂಡಾ ಸಂಪರ್ಕಿಸಿ ಆಕೆಯ ಪತ್ತೆಗೆ ಮಾಡಿದ ಪ್ರಯತ್ನ ವಿಫಲವಾಗಿತ್ತು. ಕೂಚ್ ಬೆಹಾರ್ 2ನೇ ಬ್ಲಾಕ್ ನ ಖಾಸಗಿ ನರ್ಸಿಂಗ್ ಹೋಮ್ ಗೆ ಬಾಲಕಿಯನ್ನು ಪ್ರಜ್ಞಾಶೂನ್ಯ ಸ್ಥಿತಿಯಲ್ಲಿ ದಾಖಲಿಸಿದ್ದು ಜುಲೈ 21ರಂದು ಕುಟುಂಬದವರಿಗೆ ಗೊತ್ತಾಗಿದೆ. ಅಲ್ಲಿಂದ ಸಂತ್ರಸ್ತೆಯನ್ನು ಎಂಜೆಎನ್ ಮೆಡಿಕಲ್ ಕಾಲೇಜು ಮತ್ತು ಆಸ್ಪತ್ರೆಗೆ ದಾಖಲಿಸಲಾಗಿದೆ" ಎಂದು ಕುಟುಂಬದ ಹೇಳಿಕೆಯನ್ನು ಉಲ್ಲೇಖಿಸಿ ಪೊಲೀಸರು ವಿವರ ನೀಡಿದ್ದಾರೆ.
ಬಾಲಕಿಯನ್ನು ಪ್ರಜ್ಞಾಹೀನ ಸ್ಥಿತಿಯಲ್ಲಿ ಖಾಸಗಿ ಆಸ್ಪತ್ರೆಗೆ ದಾಖಲಿಸಲು ತೃಣಮೂಲ ಕಾಂಗ್ರೆಸ್ ಪಕ್ಷದ ಮುಖಂಡರು ಮಧ್ಯಪ್ರವೇಶಿಸಿದ್ದರು. ಆದರೆ ಅಲ್ಲಿ ಆಕೆಯ ದೇಹಸ್ಥಿತಿ ಮತ್ತಷ್ಟು ಕ್ಷೀಣಿಸಿತ್ತು, ಬಾಲಕಿಯ ಸಾವಿನ ಸುದ್ದಿ ಹರಡುತ್ತಿದ್ದಂತೆ ಬಿಜೆಪಿ ಮುಖಂಡರು ಸಂತ್ರಸ್ತೆಯ ನಿವಾಸಕ್ಕೆ ಭೇಟಿ ನೀಡಿ ಅವರ ಪರವಾಗಿ ನಿಲ್ಲುವ ಭರವಸೆ ನೀಡಿದರು.