ಅನುಮತಿ ನಿರಾಕರಿಸಿದರೂ ರಾಮನವಮಿ ಮೆರವಣಿಗೆ ನಡೆಸಿದ್ದ ಬಿಜೆಪಿ ಶಾಸಕ ರಾಜಾ ಸಿಂಗ್ ವಿರುದ್ಧ ಪ್ರಕರಣ ದಾಖಲು
ಹೈದರಾಬಾದ್: ಪೊಲೀಸರು ಅನುಮತಿ ನಿರಾಕರಿಸಿದರೂ, ರಾಮ ನವಮಿ ಮೆರವಣಿಗೆ ನಡೆಸಿದ ಪ್ರಚೋದನಾಕಾರಿ ಭಾಷಣಗಳಿಗೆ ಕುಖ್ಯಾತರಾಗಿರುವ ತೆಲಂಗಾಣ ಬಿಜೆಪಿ ಶಾಸಕ ರಾಜಾ ಸಿಂಗ್ ವಿರುದ್ಧ ಹೈದರಾಬಾದ್ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ. ಗೋಶಾಮಹಲ್ ಶಾಸಕರಾದ ರಾಜಾ ಸಿಂಗ್ ದ್ವೇಷ ಭಾಷಣಕ್ಕೆ ಕುಖ್ಯಾತಿ ಪಡೆದಿದ್ದಾರೆ. ನಿರ್ದಿಷ್ಟವಾಗಿ ರಾಮನವಮಿಯಂದು ನಡೆಯುವ ಶೋಭಾ ಯಾತ್ರೆಯ ಸಂದರ್ಭದಲ್ಲಿ. ಎಪ್ರಿಲ್ 17ರಂದು ನಡೆದಿರುವ ಮೆರವಣಿಗೆಯ ಸಂದರ್ಭದಲ್ಲೂ ಹಿಂದೂ ದೇವಾಲಯಗಳಿದ್ದ ಸ್ಥಳಗಳಲ್ಲಿ ನಿರ್ಮಿಸಲಾಗಿರುವ ಬಾಬ್ರಿ ಮಸೀದಿಯಂಥ ಮಸೀದಿಗಳನ್ನು ಧ್ವಂಸಗೊಳಿಸಲು ಬೇಕಾದ ತರಬೇತಿಯನ್ನು ಕರಸೇವಕರಿಗೆ ನಾನು ನೀಡುತ್ತೇನೆ ಎಂದು ರಾಜಾ ಸಿಂಗ್ ಘೋಷಿಸಿದ್ದರು.
ಈ ಕುರಿತು ಪ್ರತಿಕ್ರಿಯಿಸಿರುವ ರಾಜಾ ಸಿಂಗ್, ಅನುಮತಿ ಇಲ್ಲದೆ ಮೆರವಣಿಗೆ ನಡೆಸಿದ್ದಕ್ಕೆ ನನ್ನ ವಿರುದ್ಧ ಪ್ರಕರಣ ದಾಖಲಿಸಿಕೊಳ್ಳಲಾಗಿದೆ ಎಂದು ದೂರಿದ್ದಾರೆ. ಆದರೆ, ಎಪ್ರಿಲ್ 16ರಂದು ಹೈದರಾಬಾದ್ ಪೊಲೀಸರು ತಮ್ಮ ಮೆರವಣಿಗೆಗೆ ಅನುಮತಿ ನಿರಾಕರಿಸಿರುವ ಪತ್ರವನ್ನು ರಾಜಾ ಸಿಂಗ್ ಹಂಚಿಕೊಂಡಿದ್ದರು ಹಾಗೂ ಪೊಲೀಸರ ಅನುಮತಿ ನಿರಾಕರಣೆಯ ಹೊರತಾಗಿಯೂ ಶೋಭಾ ಯಾತ್ರೆ ನಡೆಯಲಿದೆ ಮತ್ತು ಅದನ್ನು ಯಾರಿಂದಲೂ ತಡೆಯಲು ಸಾಧ್ಯವಿಲ್ಲ ಎಂದು ಸಾರ್ವಜನಿಕವಾಗಿ ಸವಾಲು ಹಾಕಿದ್ದರು.
ಭಾರತೀಯ ದಂಡ ಸಂಹಿತೆಯ ಸೆಕ್ಷನ್ 341 (ಸಂಯಮ ರಹಿತ ವರ್ತನೆ), ಸೆಕ್ಷನ್ 188 (ಸಾರ್ವಜನಿಕ ಸೇವಕರು ಹೊರಡಿಸಿರುವ ಆದೇಶಗಳಿಗೆ ಅವಿಧೇಯತೆ ತೋರುವುದು), ಸೆಕ್ಷನ್ 290 (ಅನುಮತಿ ಇಲ್ಲದ ಪ್ರಕರಣದಲ್ಲಿ ಸಾರ್ವಜನಿಕರಿಗೆ ಕಿರಿಕಿರಿ ಉಂಟು ಮಾಡುವುದು), ಸೆಕ್ಷನ್ 171 ಸಿ (ಚುನಾವಣೆಯ ಮೇಲೆ ಅನಪೇಕ್ಷಿತ ಪ್ರಭಾವ) ಹಾಗೂ ಸೆಕ್ಷನ್ 34 (ಹಲವಾರು ಜನರು ಸೇರಿ ಮಾಡುವ ಅಪರಾಧ ಕೃತ್ಯ) ಅಡಿಯಲ್ಲಿ ಪ್ರಕರಣವನ್ನು ದಾಖಲಿಸಿಕೊಳ್ಳಲಾಗಿದೆ. ಇದರೊಂದಿಗೆ ಹೈದರಾಬಾದ್ ನಗರ ಪೊಲೀಸ್ ಕಾಯ್ದೆಯ ಸೂಕ್ತ ಸೆಕ್ಷನ್ ಗಳಡಿಯೂ ರಾಜಾ ಸಿಂಗ್ ವಿರುದ್ಧ ಪ್ರಕರಣ ದಾಖಲಿಸಿಕೊಳ್ಳಲಾಗಿದೆ. ಈ ಪ್ರಕರಣವನ್ನು ಎಪ್ರಿಲ್ 17ರಂದು ರಾಮ ನವಮಿ ಹಬ್ಬದ ಬಂದೋಬಸ್ತ್ ಕರ್ತವ್ಯಕ್ಕೆ ನಿಯೋಜಿತರಾಗಿದ್ದ ಸಬ್ ಇನ್ಸ್ ಪೆಕ್ಟರ್ ಒಬ್ಬರ ದೂರನ್ನು ಆಧರಿಸಿ ದಾಖಲಿಸಿಕೊಳ್ಳಲಾಗಿದೆ.