ಪೋಲೀಸರ ವಿರುದ್ಧ ಕ್ರಿಮಿನಲ್ ಬೆದರಿಕೆಯ ಕೇಸ್ ದಾಖಲಾಗಬೇಕು : ಪ್ರಶಾಂತ್ ಭೂಷಣ್

Update: 2024-12-03 15:38 GMT

ಪ್ರಶಾಂತ್ ಭೂಷಣ್ | PTI 

ಹೊಸದಿಲ್ಲಿ : ಬಿಜೆಪಿ ಆಡಳಿತವಿರುವ ರಾಜ್ಯಗಳ ಪೊಲೀಸರು ಕಾನೂನು ಪಾಲಿಸುತ್ತಿಲ್ಲ. ಪೊಲೀಸರ ಮೇಲೆ ಕ್ರಿಮಿನಲ್ ಬೆದರಿಕೆಯ ಕೇಸ್ ದಾಖಲಾಗಬೇಕು. ಇದು ಅತ್ಯಗತ್ಯ. ನದೀಮ್ ಖಾನ್ ಈಗ ದೇಶದ ಅತ್ಯಂತ ಸಮರ್ಥ ಮತ್ತು ಧೈರ್ಯಶಾಲಿ ಮಾನವ ಹಕ್ಕು ಹೋರಾಟಗಾರರಲ್ಲಿ ಒಬ್ಬರು. ದೇಶದಲ್ಲಿ ಕಾನೂನು ಇಲ್ಲವಾದರೆ ಕೇವಲ ಮುಸ್ಲಿಮರ ಮೇಲೆ ಅಲ್ಲ, ಎಲ್ಲರ ಮೇಲೆಯೂ ಅಪಾಯ ಬಂದು ಎರಗುತ್ತದೆ ಎಂದು ಸುಪ್ರೀಂ ಕೋರ್ಟ್ ಹಿರಿಯ ನ್ಯಾಯವಾದಿ ಪ್ರಶಾಂತ್ ಭೂಷಣ್ ಹೇಳಿದ್ದಾರೆ.

ಮಾನವ ಹಕ್ಕು ಹೋರಾಟಗಾರ ಹಾಗು ಎಪಿಸಿಆರ್ ಸಂಘಟನೆಯ ಪ್ರಧಾನ ಕಾರ್ಯದರ್ಶಿ ನದೀಮ್ ಖಾನ್ ಮೇಲಿನ ಎಫ್ ಐ ಆರ್ ಮತ್ತು ಬಂಧನ ಪ್ರಯತ್ನವನ್ನು ಖಂಡಿಸಿ ಚಿಂತಿತ ನಾಗರಿಕರಿಂದ ದಿಲ್ಲಿಯ ಪ್ರೆಸ್ ಕ್ಲಬ್ ಆಫ್ ಇಂಡಿಯಾದಲ್ಲಿ ಮಂಗಳವಾರ ನಡೆದ ಪತ್ರಿಕಾಗೋಷ್ಠಿಯಲ್ಲಿ ಅವರು ಮಾತಾಡುತ್ತಿದ್ದರು.

ಬಿಜೆಪಿ ಆಡಳಿತದ ರಾಜ್ಯಗಳ ಪೊಲೀಸರ ವಿರುದ್ಧ ಟೀಕಾ ಪ್ರಹಾರ ನಡೆಸಿದ ಪ್ರಶಾಂತ್ ಭೂಷಣ್ "ದ್ವೇಷ ಭಾಷಣ ಮಾಡುವಂತಹ ಯತಿ ನರಸಿಂಗಾನಂದ್ ಅಂತವರ ಮೇಲೆ ಯಾಕೆ ಕ್ರಮ ಇಲ್ಲ ಎಂದವರು ಪ್ರಶ್ನಿಸಿದರು. ಆದರೆ ದ್ವೇಷ ಭಾಷಣದ ಘಟನೆಯನ್ನು ಜಗತ್ತಿನ ಮುಂದೆ ತರುವ ಝುಬೈರ್ ಅಂತವರ ಮೇಲೆ ಕ್ರಮವಾಗುತ್ತದೆ" ಎಂದು ಹೇಳಿದರು.

ಸರ್ಕಾರಗಳಿಂದ ಅಧಿಕಾರದ ದುರುಪಯೋಗ ಮತ್ತು ಮಾನವ ಹಕ್ಕುಗಳ ಕಾರ್ಯಕರ್ತರ ಮೇಲೆ ಅದರ ಪ್ರಭಾವದ ಬಗ್ಗೆ ಪತ್ರಿಕಾ ಗೋಷ್ಠಿಯಲ್ಲಿ ಕಳವಳ ವ್ಯಕ್ತಪಡಿಸಲಾಯಿತು. ನ್ಯಾಯವನ್ನು ಖಚಿತಪಡಿಸಿಕೊಳ್ಳಲು, ಪ್ರಜಾಪ್ರಭುತ್ವ ಮತ್ತು ಮಾನವ ಹಕ್ಕುಗಳಿಗಾಗಿ ಹೋರಾಡುವವರ ಹಕ್ಕುಗಳನ್ನು ರಕ್ಷಿಸಲು ತಕ್ಷಣ ಕ್ರಮ ಕೈಗೊಳ್ಳಬೇಕೆಂದು ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದವರು ಕರೆ ನೀಡಿದರು.

ಸುಪ್ರೀಂ ಕೋರ್ಟ್ ಹಿರಿಯ ನ್ಯಾಯವಾದಿ ಸಂಜಯ್ ಹೆಗ್ಡೆ ಮಾತನಾಡಿ "ನಾವು ಮುಂದೆಯೂ ಇಂತಹ ಅನ್ಯಾಯಗಳ ವಿರುದ್ಧ ಧ್ವನಿ ಎತ್ತುತ್ತೇವೆ" ಎಂದರು.

ಅಕ್ಬರ್ ಇಲಹಬಾದಿ ಅವರ ಕವಿತೆಯನ್ನು ಉಲ್ಲೇಖಿಸಿದ ಸಂಜಯ್ ಹೆಗ್ಡೆ "ನಾವು ನಿಟ್ಟುಸಿರು ಬಿಟ್ಟರೂ ಮಾನಹಾನಿಯಾಗುತ್ತದೆ. ಅವರು ಕೊಲೆ ಮಾಡಿದರೂ ಚರ್ಚೆ ನಡೆಯುವುದಿಲ್ಲ" ಎಂದರು. ದ್ವೇಷ ಭಾಷಣ ಮಾಡುವವರ ವಿರುದ್ಧ ಕಾನೂನು ಕ್ರಮದ ಕೊರತೆಯನ್ನು ಒತ್ತಿ ಹೇಳಿದ ಅವರು ನದೀಮ್ ಖಾನ್ ವಿರುದ್ಧ ದಾಖಲಾದ ಎಫ್ ಐ ಆರ್ ಅನ್ನು ಪ್ರಶ್ನಿಸಿದರು. ನಾವು ಹೋರಾಟವನ್ನು ಮುಂದುವರಿಸಲಿದ್ದೇವೆ ಮತ್ತು ವಿಜಯಿಯಾಗಲಿದ್ದೇವೆ ಎಂದು ಸಂಜಯ್ ಹೆಗ್ಡೆ ಹೇಳಿದರು.

ಬರಹಗಾರ್ತಿ ಫರ್ಹಾ ನಕ್ವಿ ಮಾತನಾಡಿ "ನಮ್ಮ ದೇಶದಲ್ಲಿ ಗುಂಪು ಹತ್ಯೆ ಮಾಡುವುದು ಸಮಸ್ಯೆಯಲ್ಲ. ಆದರೆ ಯಾರಾದರೂ ಆ ಕುರಿತು ಮಾತನಾಡಿದರೆ ಅದು ಸಮಸ್ಯೆ ಆಗುತ್ತೆ. ನದೀಮ್ ಖಾನ್ ಅವರನ್ನು ಅನ್ಯಾಯವಾಗಿ ಬಂಧಿಸಲು ಪ್ರಯತ್ನಿಸಲಾಗಿದೆ" ಎಂದರು.

ನ್ಯಾಯವಾದಿ ನಿಝಾಮ್ ಪಾಷಾ ಮಾತನಾಡಿ "ನದೀಮ್ ಖಾನ್ ಮೇಲೆ ಎಫ್ ಐ ಆರ್ ದಾಖಲಿಸಿರುವುದರ ಹಿಂದಿನ ತರ್ಕ ಏನು" ಎಂದು ಪ್ರಶ್ನಿಸಿದ್ದಾರೆ. ನದೀಮ್ ಖಾನ್ ವಿರುದ್ಧ ದಾಖಲಾಗಿರುವ ಎಫ್ಐಆರ್ ನಲ್ಲಿ ಶಿಕ್ಷಿಸಬಹುದಾದಂತಹ ಯಾವುದೇ ಅಪರಾಧವಿಲ್ಲ. ಎಫ್ಐಆರ್ ನಲ್ಲಿ ಬರೆದಿರುವಂತಹ ಎಲ್ಲಾ ಆರೋಪಗಳು ನಿಜವಾಗಿದ್ದರೂ ಯಾವುದೇ ಕಾನೂನಿನ ಅಡಿಯಲ್ಲಿ ನದೀಮ್ ಖಾನ್ ಅವರನ್ನು ಶಿಕ್ಷಿಸುವಂತಿಲ್ಲ ಎಂದು ನಿಜಾಮ್ ಪಾಷ ಅಭಿಪ್ರಾಯಪಟ್ಟಿದ್ದಾರೆ. ನಮ್ಮ ದೇಶದಲ್ಲಿ ಈಗ ದ್ವೇಷ ಭಾಷಣಗಳನ್ನು, ದ್ವೇಷ ಕೃತ್ಯಗಳನ್ನು ದಾಖಲಿಸುವುದೇ ಅಪರಾಧವಾಗಿಬಿಟ್ಟಿದೆ ಎಂದು ಅವರು ಹೇಳಿದರು.

ಪಿ ಯು ಸಿ ಎಲ್ ಅಧ್ಯಕ್ಷೆ ಕವಿತಾ ಶ್ರೀವಾಸ್ತವ ಮಾತನಾಡಿ ನದೀಮ್ ಖಾನ್ ಮೇಲಿನ ಪ್ರಕರಣವನ್ನು ಖಂಡಿಸಿದರು. ಮುಸ್ಲಿಮರು ಈಗ ದೇಶದ ಅತ್ಯಂತ ದಮನಿತ ಸಮುದಾಯ ಎಂದು ಅವರು ಹೇಳಿದರು. ಎ ಪಿ ಸಿ ಆರ್ ಸಂಘಟನೆಯ ಧ್ವನಿ ಹತ್ತಿಕ್ಕಲು ನಡೆಯುತ್ತಿರುವ ಪ್ರಯತ್ನಗಳು ಕಾನೂನು ಬಾಹಿರ ಮತ್ತು ಮಾನವ ಹಕ್ಕುಗಳ ಉಲ್ಲಂಘನೆ ಎಂದು ಅವರು ಹೇಳಿದರು. ನದೀಮ್ ಖಾನ್ ಮಾತ್ರವಲ್ಲದೇ ಅವರ ಕುಟುಂಬದವರನ್ನೂ ಪೊಲೀಸರು ಶೋಷಿಸಿದ್ದಾರೆ ಮತ್ತು ಇದಕ್ಕಾಗಿ ಪರಿಹಾರ ನೀಡಬೇಕೆಂದು ಎಂದು ಕವಿತಾ ಅವರು ಒತ್ತಾಯಿಸಿದರು.

ಆರ್ ಜೆ ಡಿ ಸಂಸದ ಮನೋಜ್ ಝಾ ಮಾತನಾಡಿ "ನ್ಯಾಯಾಂಗ ದೇಶದ ಕೊನೆ ನಿರೀಕ್ಷೆ ಅಲ್ಲ. ಬದಲಿಗೆ ಕಳೆದು ಹೋದ ನಿರೀಕ್ಷೆ" ಎಂದು ಹೇಳಿದರು. ಪ್ರಧಾನಿ ಮೋದಿ ಮತ್ತು ಅವರ ಇಡೀ ಸಂಪುಟ ದ್ವೇಷ ಭಾಷಣ ನೀಡಿದ್ದು, ಎಲ್ಲರೂ ಜೈಲಿನಲ್ಲಿರಬೇಕೆಂದು ಮನೋಜ್ ಝಾ ಹೇಳಿದರು. ನದೀಮ್ ಖಾನ್ ಅವರು ಯಾವತ್ತೂ ಧರ್ಮ ನೋಡಿ ಸಹಾಯ ಮಾಡಿದವರಲ್ಲ. ಪ್ರಸ್ತುತ ಪರಿಸ್ಥಿತಿಗಳಿಂದಾಗಿ ನಾನು ಧೈರ್ಯ ಮತ್ತು ನಿರೀಕ್ಷೆ ಕಳೆದುಕೊಳ್ಳುತ್ತಿದ್ದೇನೆ ಎಂದು ಅವರು ಆತಂಕ ವ್ಯಕ್ತಪಡಿಸಿದರು. ಯೋಜನಾ ಆಯೋಗದ ಮಾಜಿ ಸದಸ್ಯೆ ಸಯ್ಯದ ಹಾಮಿದ್ ಮಾತನಾಡಿ ನದೀಮ್ ವಿರುದ್ಧದ ಪ್ರಕರಣವನ್ನು ಖಂಡಿಸಿದರು.

Tags:    

Writer - ವಾರ್ತಾಭಾರತಿ

contributor

Editor - Ismail

contributor

Byline - ವಾರ್ತಾಭಾರತಿ

contributor

Similar News