ಮೃತ ವ್ಯಕ್ತಿಗೆ ಮೂಲಭೂತ ಹಕ್ಕಿನಷ್ಟೇ ಗೌರವಯುತ ಅಂತ್ಯಕ್ರಿಯೆಯೂ ಮುಖ್ಯ : ಬಾಂಬೆ ಹೈಕೋರ್ಟ್
ಮುಂಬೈ: ಮೃತ ವ್ಯಕ್ತಿಗೆ ಸಭ್ಯ ಹಾಗೂ ಗೌರವಯುತ ಅಂತ್ಯಕ್ರಿಯೆಯ ಹಕ್ಕು ಮೂಲಭೂತ ಹಕ್ಕಿನಷ್ಟೇ ಮುಖ್ಯ ಎಂದು ಸೋಮವಾರ ಬಾಂಬೆ ಹೈಕೋರ್ಟ್ ಅಭಿಪ್ರಾಯ ಪಟ್ಟಿತು. ಮುಂಬೈ ಪೂರ್ವ ಉಪನಗರದಲ್ಲಿ ಹೆಚ್ಚುವರಿ ರುದ್ರಭೂಮಿ ಒದಗಿಸಬೇಕು ಎಂದು ಕೋರಿ ಸಲ್ಲಿಸಲಾಗಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿಯ ವಿಚಾರಣೆಯನ್ನು ನ್ಯಾಯಾಲಯವು ನಡೆಸುತ್ತಿತ್ತು.
“ಅಂತ್ಯಕ್ರಿಯೆಗಾಗಿ ಜನರು ಮಂಗಳ ಗ್ರಹಕ್ಕೆ ಹೋಗಬೇಕೆ?” ಎಂದು ಖಾರವಾಗಿ ಪ್ರಶ್ನಿಸಿದ ಹೈಕೋರ್ಟ್, ನವೆಂಬರ್ ತಿಂಗಳಿನಿಂದ ರುದ್ರಭೂಮಿಗಾಗಿ ಒಂದು ಜಾಗವನ್ನು ಪತ್ತೆ ಹಚ್ಚಲು ಬೃಹನ್ ಮುಂಬೈ ಮಹಾನಗರ ಪಾಲಿಕೆಗೆ ಸಾಧ್ಯವಾಗದರತ್ತ ಬೊಟ್ಟು ಮಾಡಿತು.
ಕಳೆದ ಎರಡು ವರ್ಷಗಳಿಂದ ಪೂರ್ವ ಉಪನಗರಗಳಿಗೆ ಹೆಚ್ಚುವರಿ ರುದ್ರಭೂಮಿಯನ್ನು ಒದಗಿಸದ ಬೃಹನ್ ಮುಂಬೈ ಮಹಾನಗರ ಪಾಲಿಕೆಯ ಉಡಾಫೆ ಧೋರಣೆಯನ್ನು ಮುಖ್ಯ ನ್ಯಾಯಮೂರ್ತಿ ಡಿ.ಕೆ.ಉಪಾಧ್ಯಾಯ ಹಾಗೂ ನ್ಯಾ. ಅಮಿತ್ ಬೋರ್ಕರ್ ಅವರನ್ನೊಳಗೊಂಡ ವಿಭಾಗೀಯ ನ್ಯಾಯಪೀಠವು ತರಾಟೆಗೆ ತೆಗೆದುಕೊಂಡಿತು.
ಮಹಾನಗರ ಪಾಲಿಕೆಗೆ ಮೃತ ವ್ಯಕ್ತಿಗಳನ್ನು ಗೌರವಯುತವಾಗಿ ವಿಸರ್ಜಿಸಲು ಸಾಕಷ್ಟು ಜಾಗ ಒದಗಿಸಬೇಕಾದ ಶಾಸನಾತ್ಮಕ ಕರ್ತವ್ಯ ಹಾಗೂ ಅನಿವಾರ್ಯತೆ ಇದೆ. ಈ ವಿಚಾರದಲ್ಲಿ ಸ್ಥಳೀಯ ಸಂಸ್ಥೆಗಳು ತಮ್ಮ ಹೊಣೆಗಾರಿಕೆಯಿಂದ ನುಣುಚಿಕೊಳ್ಳಲು ಸಾಧ್ಯವಿಲ್ಲ ಎಂದು ನ್ಯಾಯಪೀಠವು ಎಚ್ಚರಿಸಿತು.