ಹಾರ್ನ್ ವಿಚಾರಕ್ಕೆ ಜಗಳ | ಪೊಲೀಸ್ ಅಧಿಕಾರಿಯ ಕುಟಂಬದ ಮೇಲೆ ಹಲ್ಲೆ ನಡೆಸಿದ ಸಹೋದರಿಯರ ಬಂಧನ
ಹೊಸದಿಲ್ಲಿ: ಹಾರ್ನ್ ಮಾಡುವ ವಿಚಾರಕ್ಕೆ ಸಂಬಂಧಿಸಿ ಶುರುವಾದ ವಿವಾದವೊಂದು ತೀವ್ರ ಸ್ವರೂಪ ಪಡೆದಿದ್ದು, ಪೊಲೀಸ್ ಅಧಿಕಾರಿಯ ಮೇಲೆ ಹಲ್ಲೆ ನಡೆಸಿದ್ದಾರೆ ಎಂಬ ಆರೋಪದ ಮೇಲೆ ಸಹೋದರಿಯರನ್ನು ದಿಲ್ಲಿ ಪೊಲೀಸರು ಬಂಧಿಸಿದ್ದಾರೆ.
ಪೂರ್ವ ದಿಲ್ಲಿಯ ರೆಸಿಡೆನ್ಶಿಯಲ್ ಸೊಸೈಟಿಯಲ್ಲಿ ಘಟನೆ ನಡೆದಿದ್ದು, ಆರೋಪಿಗಳನ್ನು ವಸುಂಧರಾ ಎನ್ಕ್ಲೇವ್ ಪ್ರದೇಶದ ಅನೇಕಟ್ ಅಪಾರ್ಟ್ಮೆಂಟ್ ಸೊಸೈಟಿಯ ನಿವಾಸಿಗಳಾದ ಭವ್ಯಾ ಜೈನ್, (23) ಮತ್ತು ಚಾರ್ವಿ ಜೈನ್, (21) ಎಂದು ಗುರುತಿಸಲಾಗಿದೆ.
ದೀಪಾವಳಿ ರಾತ್ರಿಯಂದು, ಅದೇ ಸೊಸೈಟಿಯ ನಿವಾಸಿಯಾಗಿರುವ ಉತ್ತರ ಪ್ರದೇಶದ ನಿವೃತ್ತ ಉಪ ಪೊಲೀಸ್ ಅಧೀಕ್ಷಕ ಅಶೋಕ್ ಶರ್ಮಾ ಅವರು ಹಾರ್ನ್ ಮಾಡುವುದನ್ನು ನಿಲ್ಲಿಸುವಂತೆ ಸಹೋದರಿಯರಿಗೆ ಸೂಚಿಸಿದ್ದು, ಇದರಿಂದ ಕೆರಳಿದ ಸಹೋದರಿಯರು ಅಧಿಕಾರಿ ಮತ್ತವರ ಕುಟುಂಬಸ್ಥರ ಮೇಲೆ ಹಲ್ಲೆ ನಡೆಸಿದ್ದಾರೆ ಎಂದು ಆರೋಪಿಸಲಾಗಿದೆ. ಶರ್ಮಾ ಅವರ ಪತ್ನಿ ಶಾಂತಿ ಶರ್ಮಾ ಮತ್ತು ಪುತ್ರಿಯರಾದ ಪ್ರತಿಭಾ ಮತ್ತು ರೀನಾ ಎಂಬವರ ಮೇಲೆ ಚಾಕುವಿನಿಂದ ಹಲ್ಲೆ ನಡೆಸಲಾಗಿದೆ ಎಂದು ಪೊಲೀಸರು ಹೇಳಿದ್ದಾರೆ.
ಘಟನೆಯ ಬಗ್ಗೆ ಮಾಹಿತಿ ಸಿಕ್ಕು ಪೊಲೀಸರು ಸ್ಥಳಕ್ಕಾಗಮಿಸುತ್ತಿದ್ದಂತೆ, ಆರೋಪಿಗಳು ತಮ್ಮ ಅಪಾರ್ಟ್ಮೆಂಟ್ ಒಳಗೆ ಬೀಗ ಹಾಕಿ ಕೂತಿದ್ದರು ಎಂದು ವರದಿಯಾಗಿದೆ. ಈ ನಡುವೆ, ಸೊಸೈಟಿಯ ಕೆಲ ನಿವಾಸಿಗಳು, ಆರೋಪಿಗಳ ಮನೆಯ ನೀರು ಹಾಗೂ ವಿದ್ಯುತ್ ಸಂಪರ್ಕವನ್ನು ಕಡಿತಗೊಳಿಸಿದ್ದಾರೆ. ಕೆಲವು ಹೊತ್ತಿನ ಬಳಿಕ ತಮ್ಮ ಅಪಾರ್ಟ್ಮೆಂಟ್ ನಿಂದ ಹೊರ ಬಂದ ಆರೋಪಿಗಳು ಕಾರು ಹತ್ತಿ ಪರಾರಿಯಾಗಲು ಯತ್ನಿಸಿದ್ದು, ಈ ವೇಳೆ ಅವರ ಕಾರು ಪೊಲೀಸ್ ಕಂಟ್ರೋಲ್ ರೂಮ್ ವ್ಯಾನ್ ಮತ್ತು ಸೊಸೈಟಿಯೊಳಗೆ ನಿಲ್ಲಿಸಲಾಗಿದ್ದ ಅನೇಕ ವಾಹನಗಳಿಗೆ ಡಿಕ್ಕಿ ಹೊಡೆದಿದೆ. ಇಬ್ಬರು ಪೊಲೀಸ್ ಅಧಿಕಾರಿಗಳನ್ನು ಒಳಗೊಂಡಂತೆ ಅನೇಕ ಮಂದಿ ನಿವಾಸಿಗಳು ಘಟನೆಯಲ್ಲಿ ಗಾಯಗೊಂಡಿದ್ದಾರೆ ಎಂದು ತಿಳಿದು ಬಂದಿದೆ.