ವಯನಾಡ್ ಭೂಕುಸಿತ ಪ್ರದೇಶದಲ್ಲಿ ಭಾರಿ ಪ್ರಮಾಣದ ತ್ಯಾಜ್ಯ ವಿಲೇವಾರಿ
ವಯನಾಡ್ : ಜುಲೈ 30ರಂದು ಸಂಭವಿಸಿದ ಭೀಕರ ಭೂಕುಸಿತದ ನಂತರ, ವಯನಾಡ್ ನಲ್ಲಿ ಭಾರಿ ಪ್ರಮಾಣದ ತ್ಯಾಜ್ಯ ವಿಲೇವಾರಿ ಕಾರ್ಯಾಚರಣೆ ಪ್ರಗತಿಯಲ್ಲಿದೆ. ಆ ಮೂಲಕ ಪ್ರಗತಿಯಲ್ಲಿರುವ ರಕ್ಷಣಾ ಕಾರ್ಯಾಚರಣೆಗಳಲ್ಲಿ ಸೀಮಾತೀತವಾಗಿ ಏಕೀಕರಣಗೊಂಡಿರುವ ಈ ಪ್ರಕ್ರಿಯೆಯು ದೇಶಕ್ಕೆ ಒಂದು ಮಾದರಿಯನ್ನು ನಿರ್ಮಿಸಿದೆ.
ಇಲ್ಲಿಯವರೆಗೆ ದಿ ಶುಚಿತ್ವ ಮಿಷನ್, ಕ್ಲೀನ್ ಕೇರಳ ಕಂಪನಿ ಹಾಗೂ ಹರಿತ ಕರ್ಮ ಸೇನಾದ ಸಾವಿರಾರು ಕಾರ್ಯಕರ್ತರು ಸೇರಿದಂತೆ ರಾಜ್ಯದ ಇನ್ನಿತರ ಸ್ಥಳೀಯ ಸಂಸ್ಥೆಗಳು 81.64 ಟನ್ ಘನ ತ್ಯಾಜ್ಯ ಹಾಗೂ 106.35 ಕಿಲೋ ಲೀಟರ್ ಶೌಚಗೃಹ ತ್ಯಾಜ್ಯವನ್ನು ವಿಲೇವಾರಿ ಮಾಡಿವೆ.
ಇಲ್ಲಿಯವರೆಗೆ ಹರಿತ ಕರ್ಮ ಸೇನಾದ ಕಾರ್ಯಕರ್ತರು, ಅಧಿಕಾರಿಗಳು ಹಾಗೂ ಸ್ವಯಂಸೇವಕರು ಸೇರಿದಂತೆ ಸುಮಾರು 2,850 ಮಂದಿ ಈ ಸ್ವಚ್ಛತಾ ಅಭಿಯಾನದಲ್ಲಿ ಪಾಲ್ಗೊಂಡಿದ್ದಾರೆ ಎಂದು ಕೇರಳ ರಾಜ್ಯ ಸ್ಥಳೀಯ ಸಂಸ್ಥೆಗಳ ಸಚಿವ ಎಂ.ಬಿ.ರಾಜೇಶ್ ತಿಳಿಸಿದ್ದಾರೆ.
ತ್ಯಾಜ್ಯ ವಿಲೇವಾರಿಯ ನಡುವೆ ಪರಿಣಾಮಕಾರಿಯಾಗಿ ಮಧ್ಯಪ್ರವೇಶಿಸಿದ ರಾಜ್ಯ ಸರಕಾರವು, ಭೂಕುಸಿತ ಪ್ರದೇಶಗಳು ಹಾಗೂ ಪರಿಹಾರ ಶಿಬಿರಗಳಿರುವಲ್ಲಿನ ತ್ಯಾಜ್ಯ ಸಮಸ್ಯೆಯನ್ನು ಪರಿಹರಿಸಿದೆ ಎಂದು ಅವರು ಹೇಳಿದ್ದಾರೆ.
“ಭೂಕುಸಿತ ಪ್ರದೇಶಗಳು ಹಾಗೂ ಪರಿಹಾರ ಶಿಬಿರಗಳಲ್ಲಿ ಪರಿಣಾಮಕಾರಿ ತ್ಯಾಜ್ಯ ಸಂಗ್ರಹಣೆ ಹಾಗೂ ವಿಲೇವಾರಿ ಮಾಡುವ ಮೂಲಕ ವಿಪತ್ತು ವಲಯಗಳಲ್ಲಿ ತ್ಯಾಜ್ಯ ನಿರ್ವಹಣೆಯನ್ನು ಹೇಗೆ ಮಾಡಬೇಕು ಎಂಬುದಕ್ಕೆ ನೂತನ ಪೂರ್ವ ನಿದರ್ಶನವನ್ನು ನಿರ್ಮಿಸಿದೆ” ಎಂದು ರಾಜೇಶ್ ಶ್ಲಾಘಿಸಿದ್ದಾರೆ.
ಘನ ತ್ಯಾಜ್ಯಗಳ ಪೈಕಿ 10.6 ಟನ್ ಗಳಷ್ಟು ಕೊಳೆಯಬಲ್ಲ ತ್ಯಾಜ್ಯ, ಪ್ಲಾಸ್ಟಿಕ್ ಉತ್ಪನ್ನಗಳು ಸೇರಿದಂತೆ 49.47 ಟನ್ ಗಳಷ್ಟು ಕೊಳೆಯದ ತ್ಯಾಜ್ಯ, 0.3 ಟನ್ ನಷ್ಟು ಕೊಳಚೆ ತ್ಯಾಜ್ಯ, 2.64 ಟನ್ ನಷ್ಟು ಜೈವಿಕ ವೈದ್ಯಕೀಯ ತ್ಯಾಜ್ಯ ಹಾಗೂ 18.63 ಟನ್ ನಷ್ಟು ಜವಳಿ ತ್ಯಾಜ್ಯಗಳು ಸೇರಿದ್ದವು ಎಂದು ಅವರು ಹೇಳಿದ್ದಾರೆ.
ಸ್ಥಳೀಯ ಸಂಸ್ಥೆಗಳು ಕೊಳೆಯಬಲ್ಲ ಹಾಗೂ ಕೊಳೆಯದ ತ್ಯಾಜ್ಯಗಳು, ಶೌಚ ಗೃಹ ತ್ಯಾಜ್ಯಗಳ ವೈಜ್ಞಾನಿಕ ವಿಲೇವಾರಿ, ಕೊಳಚೆ ಹಾಗೂ ಜೈವಿಕ ವೈದ್ಯಕೀಯ ತ್ಯಾಜ್ಯಗಳನ್ನು ಹಸಿರು ಶಿಷ್ಟಾಚಾರಕ್ಕೆ ಅನುಗುಣವಾಗಿ ನಿರ್ವಹಿಸಿವೆ ಎಂದು ಅವರು ತಿಳಿಸಿದ್ದಾರೆ.
ಇದಲ್ಲದೆ ವಿಪತ್ತು ಪೀಡಿತ ಪ್ರದೇಶಗಳಲ್ಲಿ ಶುಚಿತ್ವ ಅಭಿಯಾನವನ್ನು ಹಮ್ಮಿಕೊಳ್ಳಲಿದ್ದು, ಈ ಅಭಿಯಾನದಲ್ಲಿ 150 ಸ್ವಯಂಸೇವಕರು ಭಾಗವಹಿಸಲಿದ್ದಾರೆ ಎಂದೂ ಅವರು ಮಾಹಿತಿ ನೀಡಿದ್ದಾರೆ.