ಶಬರಿಮಲೆಯಲ್ಲಿ ನಟ ದಿಲೀಪ್ ಗೆ ವಿಶೇಷ ದರ್ಶನ | ಟಿಡಿಬಿ, ಪೊಲೀಸ್ ಗೆ ಹೈಕೋರ್ಟ್ ತರಾಟೆ
ಕೊಚ್ಚಿ : ಶಬರಿಮಲೆಯಲ್ಲಿ ಅಯ್ಯಪ್ಪ ಸ್ವಾಮಿ ದರ್ಶನಕ್ಕೆ ಸರತಿಯಲ್ಲಿ ನಿಂತ ಭಕ್ತರನ್ನು ಕಡೆಗಣಿಸಿ ನಟ ದಿಲೀಪ್ ಕುಮಾರ್ ಅವರಿಗೆ ವಿಐಪಿ ದರ್ಶನಕ್ಕೆ ಅವಕಾಶ ನೀಡಿರುವುದಕ್ಕೆ ಕೇರಳ ಉಚ್ಛ ನ್ಯಾಯಾಲಯವು ತಿರುವಾಂಕೂರು ದೇವಸ್ವಂ ಮಂಡಳಿ ಹಾಗೂ ರಾಜ್ಯ ಪೊಲೀಸ್ ಇಲಾಖೆಯನ್ನು ಶುಕ್ರವಾರ ತರಾಟೆಗೆ ತೆಗೆದುಕೊಂಡಿದೆ.
ನ್ಯಾಯಮೂರ್ತಿಗಳಾದ ಅನಿಲ್ ಕೆ. ನರೇಂದ್ರನ್ ಹಾಗೂ ಮುರಳಿ ಕೃಷ್ಣ ಎಸ್. ಅವರನ್ನು ಒಳಗೊಂಡ ವಿಭಾಗೀಯ ನ್ಯಾಯ ಪೀಠ, ಇಂತಹ ಘಟನೆಗಳನ್ನು ಲಘುವಾಗಿ ತೆಗೆದುಕೊಳ್ಳಲು ಸಾಧ್ಯವಿಲ್ಲ ಎಂದು ಹೇಳಿದೆ.
ದಿಲೀಪ್ ಹಾಗೂ ಇತರರು ಪೊಲೀಸ್ ಬೆಂಗಾವಲಿನೊಂದಿಗೆ ಸನ್ನಿಧಾನ ಪ್ರವೇಶಿಸಿರುವುದನ್ನು ಗಮನಿಸಿದ ನ್ಯಾಯಾಲಯ, ‘‘ವ್ಯಕ್ತಿಗಳು ಪೊಲೀಸ್ ಭದ್ರತೆಯೊಂದಿಗೆ ದರ್ಶನದ ಅವಕಾಶ ಹೇಗೆ ಪಡೆಯುತ್ತಾರೆ? ಶಬರಿಮಲೆಯಲ್ಲಿ ಏನು ನಡೆಯುತ್ತಿದೆ ?’’ ಎಂದು ಪ್ರಶ್ನಿಸಿದೆ.
ಶಬರಿಮಲೆ ವಿಶೇಷ ಭದ್ರತಾ ವಲಯ ಎಂದು ಪೀಠ ನೆನಪಿಸಿದೆ. ವಿಐಪಿ ಭೇಟಿಯ ಸಂದರ್ಭ ದೀರ್ಘ ಸಾಲಿನಲ್ಲಿ ಕಾಯುತ್ತಿದ್ದ ವೃದ್ಧರು ಹಾಗೂ ಮಕ್ಕಳು ಸರಿಯಾದ ದರ್ಶನ ಸಿಗದೆ ಹಿಂದಿರುಗಿದರು ಎಂದು ಪೀಠ ಹೇಳಿದೆ.
ಘಟನೆ ಬಗ್ಗೆ ಕಳವಳ ವ್ಯಕ್ತಪಡಿಸಿರುವ ನ್ಯಾಯಾಲಯ, ಪವಿತ್ರ ಹರಿವರಾಸನಂ ಮಂತ್ರ ಪೂರ್ಣಗೊಳ್ಳುವ ವರೆಗೆ ಶ್ರೀಕೋವಿಲ್ ಘಟಕದ ಮುಂದೆ ದಿಲೀಪ್ ಹಾಗೂ ಇತರರಿಗೆ ನಿಲ್ಲಲು ಅನುಮತಿ ನೀಡಿದವರು ಯಾರು? ಅವರಿಗೆ ಯಾವ ಹಕ್ಕು ಇದೆ? ಇತರ ಭಕ್ತರ ದರ್ಶನಕ್ಕೆ ಅಡ್ಡಿಪಡಿಸಿ ಅವರಿಗೆ ವಿಶೇಷ ಆತಿಥ್ಯವನ್ನು ಹೇಗೆ ನೀಡಲಾಯಿತು? ಎಂದು ಪ್ರಶ್ನಿಸಿದೆ.
ಮಂಡಲ-ಮಕರವಿಳಕ್ಕು ಉತ್ಸವದ ಸಂದರ್ಭ ಸನ್ನಿಧಾನಕ್ಕೆ ಭೇಟಿ ನೀಡಿದ ವಿಐಪಿಗಳಿಗೆ ಸಂಬಂಧಿಸಿ ದೇವಸ್ವಂ ಕಾರ್ಯನಿರ್ವಹಣಾಧಿಕಾರಿ ಸಲ್ಲಿಸಿದ ವರದಿಯನ್ನು ಪರಿಶೀಲಿಸಿದ ಸಂದರ್ಭ ನ್ಯಾಯಾಲಯ ಈ ಅಭಿಪ್ರಾಯ ವ್ಯಕ್ತಪಡಿಸಿದೆ.