ಜಗನ್‌ ರೆಡ್ಡಿ ಸರ್ಕಾರವನ್ನು ಹೊಗಳಿದಕ್ಕೆ ಟ್ರೋಲ್‌ಗೊಳಗಾಗಿದ್ದ ಮಹಿಳೆ ಆತ್ಮಹತ್ಯೆ

Update: 2024-03-12 12:46 GMT

Photo: NDTV 

ಹೈದರಾಬಾದ್:‌ ಆಂಧ್ರ ಪ್ರದೇಶದಲ್ಲಿ ಕಳೆದ ವಾರ 32 ವರ್ಷದ ಮಹಿಳೆಯೊಬ್ಬರು ರೈಲಿನಡಿಗೆ ಹಾರಿ ಆತ್ಮಹತ್ಯೆಗೈದ ಘಟನೆ ಈಗ ಹೊಸ ತಿರುವು ಪಡೆದಿದ್ದು ತೆಲುಗು ದೇಶಂ ಪಕ್ಷ ಮತ್ತು ಜನ ಸೇನಾ ಪಕ್ಷದ ಸಾಮಾಜಿಕ ಜಾಲತಾಣ ಘಟಕಗಳಿಂದ ಟ್ರೋಲಿಗೊಳಗಾಗಿ ಆಕೆ ಆತ್ಮಹತ್ಯೆ ಮಾಡಿಕೊಂಡಿದ್ದಾರೆಂದು ವೈಎಸ್ಸಾರ್‌ ಕಾಂಗ್ರೆಸ್‌ ಪಕ್ಷ ಆರೋಪಿಸಿದೆ.

ಮಾರ್ಚ್‌ 4ರಂದು ನಡೆದ ವೈಎಸ್ಸಾರ್‌ ಕಾಂಗ್ರೆಸ್‌ ಪಕ್ಷದ ಕಾರ್ಯಕ್ರಮದಲ್ಲಿ ಗೋಥಿ ಗೀತಾಂಜಲಿ ದೇವಿ ಎಂಬ ಹೆಸರಿನ ಮಹಿಳೆ ತನಗೆ ಆಂದ್ರ ಪ್ರದೇಶದ ಜಗನಣ್ಣ ವಸತಿ ಯೋಜನೆಯಡಿ ಸೈಟ್‌ ದೊರೆತ ಬಗ್ಗೆ ಮಾತನಾಡಿದ್ದರು.

ವೈರಲ್‌ ಆಗಿರುವ ವೀಡಿಯೋದಲ್ಲಿ ಗೀತಾಂಜಲಿ ದೇವಿ, ತಾನು ಜಗನ್‌ ಮೋಹನ್‌ ರೆಡ್ಡಿ ಸರ್ಕಾರದ ಹಲವು ಯೋಜನೆಗಳ ಫಲಾನುಭವಿ ಎಂದು ಹೇಳಿಕೊಂಡಿದ್ದರು. “ನನ್ನ ಕನಸು ಇಂದು ನಿಜವಾಗಿದೆ, ಏಕೆಂದರೆ ಮನೆ ಸೈಟ್‌ ಈಗ ನನ್ನ ಹೆಸರಿನಲ್ಲಿದೆ. ವೇದಿಕೆಯಲ್ಲಿ ನನಗೆ ಅದು ದೊರೆಯಬಹುದೆಂದು ನಾನು ನಿರೀಕ್ಷಿಸದೇ ಇದ್ದುದರಿಂದ ನನಗೆ ತುಂಬಾ ಖುಷಿಯಾಗಿದೆ,” ಎಂದು ಆಕೆ ಹೇಳಿದ್ದರು.

ನಂತರ ಈ ವೀಡಿಯೋ ಬಳಸಿಕೊಂಡಿದ್ದ ವೈಎಸ್ಸಾರ್‌ ಕಾಂಗ್ರೆಸ್‌ ಪಕ್ಷ ಆಕೆಯನ್ನು ಪಕ್ಷದ ತಾರಾ ಪ್ರಚಾರಕಿ ಎಂದು ಬಣ್ಣಿಸಿತ್ತು.

ಇದರ ಬೆನ್ನಲ್ಲೇ ಆಕೆಯನ್ನು ಸಾಮಾಜಿಕ ಜಾಲತಾಣಗಳಲ್ಲಿ ಟ್ರೋಲ್‌ ಮಾಡಲಾಗಿತ್ತು. ಕೆಲವರು ಆಕೆಯ ವಿರುದ್ಧ ನಿಂದನಾತ್ಮಕ ಪದಗಳನ್ನೂ ಬಳಸಿದ್ದರು. ಇದರಿಂದ ನೊಂದು ಆಕೆ ಮಾರ್ಚ್‌ 7ರಂದು ತೆನಾಲಿ ರೈಲು ನಿಲ್ದಾಣಕ್ಕೆ ತೆರಳಿ ಜನ್ಮಭೂಮಿ ಎಕ್ಸ್‌ಪ್ರೆಸ್‌ ಮುಂದೆ ಜಿಗಿದು ಆತ್ಮಹತ್ಯೆಗೆ ಯತ್ನಿಸಿದ್ದರು. ತಕ್ಷಣ ಗುಂಟೂರು ಸರ್ಕಾರಿ ಆಸ್ಪತ್ರೆಗೆ ಸೇರಿಸಲಾಯಿತಾದರೂ ಆಕೆ ಅಲ್ಲಿ ಮೃತಪಟ್ಟಿದ್ದರು.

ಆಕೆ ಸರ್ಕಾರವನ್ನು ಶ್ಲಾಘಿಸಲು ಹಣ ಪಡೆದಿದ್ದಾರೆಂದು ಸೂಚಿಸಲು ನಿಂದನಾತ್ಮಕ ಮಾತುಗಳನ್ನು ಟಿಡಿಪಿ ಮತ್ತು ಜೆಎಸ್‌ಪಿ ಬಳಸಿದ್ದವು ಎಂದು ಆರೋಪಿಸಲಾಗಿದೆ.

ಪೊಲೀಸರು ಅಸಹಜ ಸಾವು ಪ್ರಕರಣ ದಾಖಲಿಸಿ ತನಿಖೆ ನಡೆಸುತ್ತಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - Ismail

contributor

Byline - ವಾರ್ತಾಭಾರತಿ

contributor

Similar News