ದಿಲ್ಲಿ ದಂಗೆಗಳು: ಅಕ್ರಮ ಹಣ ವರ್ಗಾವಣೆ ಪ್ರಕರಣಕ್ಕೆ ತಡೆ ಕೋರಿದ್ದ ಮಾಜಿ ಆಪ್ ಕೌನ್ಸಿಲರ್ ಅರ್ಜಿ ಕೋರ್ಟ್ ನಲ್ಲಿ ವಜಾ

Update: 2023-12-17 17:00 GMT

Photo : NDTV

ಹೊಸದಿಲ್ಲಿ: 2020ರ ದಿಲ್ಲಿ ಗಲಭೆಗೆ ಸಂಬಂಧಿಸಿದ ಇನ್ನೊಂದು ಪ್ರಕರಣದಲ್ಲಿ ತನ್ನ ವಿರುದ್ಧ ಆರೋಪಗಳನ್ನು ರೂಪಿಸುವವರೆಗೆ ತನ್ನ ವಿರುದ್ಧದ ಅಕ್ರಮ ಹಣ ವರ್ಗಾವಣೆ ಪ್ರಕರಣಕ್ಕೆ ತಡೆಯನ್ನು ಕೋರಿ ಮಾಜಿ ಆಪ್ ಕೌನ್ಸಿಲರ್ ತಾಹಿರ್ ಹುಸೇನ್ ಸಲ್ಲಿಸಿದ್ದ ಅರ್ಜಿಯನ್ನು ದಿಲ್ಲಿಯ ಹೆಚ್ಚುವರಿ ಸೆಷನ್ಸ್ ನ್ಯಾಯಾಲಯವು ವಜಾಗೊಳಿಸಿದೆ.

ಫೆಬ್ರವರಿ,2020ರಲ್ಲಿ ಈಶಾನ್ಯ ದಿಲ್ಲಿಯಲ್ಲಿ ಸಂಭವಿಸಿದ್ದ ಕೋಮುದಂಗೆಗಳಿಗೆ ಸಂಬಂಧಿಸಿದ ಹಲವಾರು ಪ್ರಕರಣಗಳಲ್ಲಿ ಹುಸೇನ್ ಆರೋಪಿಯಾಗಿದ್ದಾರೆ. ಈ ಪ್ರಕರಣಗಳು ಗುಪ್ತಚರ ಸಂಸ್ಥೆ (ಐಬಿ)ಯ ಸಿಬ್ಬಂದಿ ಅಂಕಿತ ಶರ್ಮಾ ಹತ್ಯೆ ಮತ್ತು ಹಿಂಸಾಚಾರದ ಹಿಂದಿನ ವ್ಯಾಪಕ ಸಂಚಿಗೆ ಸಂಬಂಧಿಸಿವೆ.

ದಿಲ್ಲಿ ಪೋಲಿಸರು ಕ್ರಿಮಿನಲ್ ಪ್ರಕರಣಗಳ ತನಿಖೆ ಕೈಗೊಂಡಿದ್ದರೆ,ವ್ಯಾಪಕ ಒಳಸಂಚಿನ ಪ್ರಕರಣದ ಆಧಾರದಲ್ಲಿ ಜಾರಿ ನಿರ್ದೇಶನಾಲಯ (ಈ ಡಿ )ವು ಅಕ್ರಮ ಹಣ ವರ್ಗಾವಣೆ ಪ್ರಕರಣವನ್ನು ದಾಖಲಿಸಿಕೊಂಡಿದೆ. ವಿವಾದಿತ ಪೌರತ್ವ ತಿದ್ದುಪಡಿ ಕಾಯ್ದೆ (ಸಿಎಎ) ವಿರುದ್ಧ ಪ್ರತಿಭಟನೆಗಳು ಮತ್ತು ಕೋಮು ಹಿಂಸಾಚಾರವನ್ನು ಪ್ರಚೋದಿಸಲು ಹುಸೇನ್ ಶೆಲ್ ಕಂಪನಿಗಳನ್ನು ಬಳಸಿ ಕೋಟ್ಯಂತರ ರೂ.ಗಳನ್ನು ಅಕ್ರಮವಾಗಿ ವರ್ಗಾಯಿಸಿದ್ದರು ಎಂದು ಈ ಡಿ ಆರೋಪಿಸಿದೆ.

ಈ ಪ್ರಕರಣವು ಅಪರಾಧದ ಮೂಲಕ ಗಳಿಸಲಾದ ಹಣ ಅಥವಾ ಅಕ್ರಮ ಹಣ ವರ್ಗಾವಣೆಯನ್ನು ಒಳಗೊಂಡಿಲ್ಲ ಎಂಬ ಹುಸೇನ್ ವಾದವನ್ನು ತಿರಸ್ಕರಿಸಿದ ನ್ಯಾ.ಅಮಿತಾಭ್ ರಾವತ್ ಅವರು, ಈ ಡಿ ಪ್ರಕರಣದಲ್ಲಿ ಹುಸೇನ್ ವಿರುದ್ಧ ಆರೋಪಗಳನ್ನು ಜನವರಿಯಲ್ಲಿ ರೂಪಿಸಲಾಗಿತ್ತು. ಮೇಲ್ಮನವಿಗಳನ್ನು ದಿಲ್ಲಿ ಹೈಕೋರ್ಟ್ ಹಾಗೂ ಸುಪ್ರೀಂ ಕೋರ್ಟ್ ವಜಾಗೊಳಿಸಿವೆ ಎಂದು ಒತ್ತಿ ಹೇಳಿದರು.

ದೃಢೀಕೃತ ಅಪರಾಧ (ದಂಗೆಗಳನ್ನು ಪ್ರಚೋದಿಸಲು ವ್ಯಾಪಕ ಸಂಚು)ವಿದ್ದಾಗ ಮಾತ್ರ ಪಿಎಂಎಲ್ಎ ಅಡಿ ಪ್ರಕರಣವನ್ನು ದಾಖಲಿಸಬಹುದು ಮತ್ತು ಎರಡೂ ಪ್ರಕರಣಗಳನ್ನು ಪ್ರತ್ಯೇಕ ಏಜೆನ್ಸಿಗಳು (ದಿಲ್ಲಿ ಪೋಲಿಸ್ ಮತ್ತು ಈ ಡಿ ) ತನಿಖೆ ನಡೆಸುತ್ತಿವೆ ಎಂದು ನ್ಯಾಯಾಲಯವು ಡಿ.14ರಂದು ಹೊರಡಿಸಿದ ತನ್ನ ಆದೇಶದಲ್ಲಿ ಹೇಳಿದೆ.

Tags:    

Writer - ವಾರ್ತಾಭಾರತಿ

contributor

Editor - Naufal

contributor

Byline - ವಾರ್ತಾಭಾರತಿ

contributor

Similar News