ನಾಥೂರಾಮ್‌ ಗೋಡ್ಸೆ ಪರ ಫೇಸ್ಬುಕ್‌ ಪೋಸ್ಟ್‌ ಮಾಡಿದ ಎನ್‌ಐಟಿ ಪ್ರೊಫೆಸರ್‌ ವಿರುದ್ಧ ಎಬಿವಿಪಿ ಪ್ರತಿಭಟನೆ

Update: 2024-02-06 07:21 GMT

Photo credit: newindianexpress.com

ಹೊಸದಿಲ್ಲಿ: ಗಾಂಧೀಜಿ ಅವರ ಹಂತಕ ನಾಥೂರಾಮ್‌ ಗೋಡ್ಸೆಯನ್ನು ಬೆಂಬಲಿಸಿ ಫೇಸ್ಬುಕ್‌ ಪೋಸ್ಟ್‌ ಮಾಡಿದ ಕೊಝಿಕ್ಕೋಡ್‌ನ ನ್ಯಾಷನಲ್‌ ಇನ್‌ಸ್ಟಿಟ್ಯೂಟ್‌ ಆಫ್‌ ಟೆಕ್ನಾಲಜಿಯ ಪ್ರೊಫೆಸರ್‌ ಶೈಜಾ ಅಂದವನ್‌ ವಿರುದ್ಧ ಕ್ರಮಕ್ಕೆ ಆಗ್ರಹಿಸಿ ಸೋಮವಾರ ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್‌ (ಎಬಿವಿಪಿ) ಕಾರ್ಯಕರ್ತರು ಸಂಸ್ಥೆಯ ಎದುರು ಪ್ರತಿಭಟನೆ ನಡೆಸಿದ್ದಾರೆ.

ಎಬಿವಿಪಿ ಕೊಝಿಕ್ಕೋಡ್‌ ಜಿಲ್ಲಾ ಸಮಿತಿಯ ನೇತೃತ್ವದಲಿ ನಡೆದ ಪ್ರತಿಭಟನೆಯನಲ್ಲಿ ಗೋಡ್ಸೆಯ ಫೋಟೋಗಳನ್ನು ಪ್ರತಿಭಟನಕಾರರು ಸುಟ್ಟು ಹಾಕಿದರಲ್ಲದೆ ಆತನ ಪರ ಪೋಸ್ಟ್‌ ಹಾಕಿದ ಪ್ರೊಫೆಸರ್‌ ವಿರುದ್ಧ ಶಿಸ್ತು ಕ್ರಮಕ್ಕೆ ಆಗ್ರಹಿಸಿದ್ದಾರೆ.

“ಆರೆಸ್ಸೆಸ್‌ಗೂ ಗಾಂಧಿ ಹತ್ಯೆಗೂ ಸಂಬಂಧವಿಲ್ಲ, ಗಾಂಧಿ ಹತ್ಯೆ ಕುರಿತು ಹಲವು ತಪ್ಪು ಅಭಿಪ್ರಾಯಗಳಿವೆ,” ಎಂದು ಎಬಿವಿಪಿ ರಾಷ್ಟ್ರೀಯ ಕಾರ್ಯಕಾರಿ ಸದಸ್ಯ ಯೆದು ಕೃಷ್ಣನ್‌ ಹೇಳಿದರಲ್ಲದೆ ಪ್ರೊಫೆಸರ್‌ ವಿರುದ್ಧ ಯುಜಿಸಿಗೆ ದೂರು ನೀಡಲಾಗುವುದು ಎಂದರು.

ಜನವರಿ 30ರಂದು ಶೈಜಾ ಅಂದವನ್‌ ಅವರು ಅಡ್ವಕೇಟ್‌ ಕೃಷ್ಣ ರಾಜ್‌ ಅವರ ಫೇಸ್ಬುಕ್‌ ಪೋಸ್ಟ್‌ ಒಂದಕ್ಕೆ ಕಾಮೆಂಟ್‌ ಮಾಡಿ “ಭಾರತವನ್ನು ರಕ್ಷಿಸಿದ್ದಕ್ಕೆ ಗೋಡ್ಸೆ ಬಗ್ಗೆ ಹೆಮ್ಮೆಯಿದೆ,” ಎಂದು ಬರೆದಿದ್ದರು.

ಅಡ್ವಕೇಟ್‌ ಕೃಷ್ಣ ರಾಜ್‌ ಅವರ ಫೇಸ್ಬುಕ್‌ ಪೋಸ್ಟ್‌ನಲ್ಲಿ ಹೀಗೆ ಬರೆದಿತ್ತು. “ಹಿಂದು ಮಹಾಸಭಾ ಕಾರ್ಯಕರ್ತ ನಾಥೂರಾಮ್‌ ವಿನಾಯಕ್‌ ಗೋಡ್ಸೆ. ಭಾರತದಲ್ಲಿ ಹಲವರ ಹೀರೋ.” ಈ ಪೋಸ್ಟ್‌ಗೆ ಪ್ರೊ ಶೈಜಾ ಪ್ರತಿಕ್ರಿಯಿಸಿದ್ದರು.

ಎಸ್‌ಎಫ್‌ಐ ಸದಸ್ಯರೊಬ್ಬರ ದೂರಿನ ಆಧಾರದಲ್ಲಿ ಈಗಾಗಲೇ ಶೈಜಾ ವಿರುದ್ಧ ಪ್ರಕರಣ ದಾಖಲಿಸಲಾಗಿದೆ.

ಆಕೆಯ ಗೋಡ್ಸೆ ಪರ ಹೇಳಿಕೆ ಕುರಿತಂತೆ ವಿವರಣೆ ಕೇಳಲು ರಿಜಿಸ್ಟ್ರಾರ್‌ ಅವರಿಗೆ ಸೂಚನೆ ನೀಡಲಾಗಿದೆ ಎಂದು ಎನ್‌ಐಟಿ ನಿರ್ದೇಶಕ ಪ್ರಸಾದ್‌ ಕೃಷ್ಣ ಹೇಳಿದ್ದಾರೆ.

ಈ ಪ್ರಕರಣ ಕುರಿತಂತೆ ಕೊಝಿಕ್ಕೋಡ್‌ ಸಂಸದ ಎಂ. ಕೆ. ರಾಘವನ್‌ ಅವರು ಎನ್‌ಐಟಿ ನಿರ್ದೇಶಕರಿಗೆ ಪತ್ರ ಬರೆದಿದ್ದಾರೆ. ಈ ಕುರಿತು ವಿಸ್ತೃತ ತನಿಖೆ ನಡೆಸಲಾಗುವುದು ಎಂದು ನಿರ್ದೇಶಕರು ಭರವಸೆ ನೀಡಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - Irshad Venur

contributor

Byline - ವಾರ್ತಾಭಾರತಿ

contributor

Similar News