ಕಪ್ಪುಹಣ ಬಿಳುಪು ಆರೋಪ ; ಅದಾನಿ ನಂಟಿನ 2 ಸಂಸ್ಥೆಗಳ ವಿರುದ್ಧ ಕ್ರಮಕ್ಕೆ ಸೆಬಿಗೆ ಕಾಂಗ್ರೆಸ್ ಆಗ್ರಹ
ಹೈದರಾಬಾದ್: ಕಪ್ಪುಹಣ ಬಿಳುಪುಗೊಳಿಸಿದ ಆರೋಪ ಎದುರಿಸುತ್ತಿರುವ ಅದಾನಿ ಜೊತೆ ನಂಟು ಹೊಂದಿರುವ ಎರಡು ಕಂಪೆನಿಗಳ ವಿರುದ್ಧ ಕ್ರಮ ಕೈಗೊಳ್ಳದಿರುವ , ಭಾರತದ ಶೇರು ನಿಯಂತ್ರಣ ಸಂಸ್ಥೆ ‘ ಸೆಬಿ’ಯ ನಡೆಯನ್ನು ಕಾಂಗ್ರೆಸ್ ಶನಿವಾರ ಪ್ರಶ್ನಿಸಿದೆ. ಈ ವಿಷಯವನ್ನು ಸಂಸತ್ತಿನ ವಿಶೇಷ ಅಧಿವೇಶನದಲ್ಲಿ ಚರ್ಚಿಸಲು ಜಂಟಿ ಸಂಸದೀಯ ಸಮಿತಿಯೊಂದನ್ನು ರಚಿಸುವಂತೆಯೂ ಅದು ಕರೆ ನೀಡಿದೆ.
ಅದಾನಿ ಜೊತೆ ನಂಟು ಹೊಂದಿರುವ ಎರಡು ಸಂಸ್ಥೆಗಳ ಪರವಾನಿಗೆಯನ್ನು ಮಾರಿಶಸ್ ವಿತ್ತೀಯ ನಿಯಂತ್ರಣ ಸಂಸ್ಥೆಯೊಂದು ರದ್ದುಪಡಿಸಿದೆ. ಈಗಲಾದರೂ ಸೆಬಿ ಈ ನಿಟ್ಟಿನಲ್ಲಿ ಕ್ರಮ ಕೈಗೊಳ್ಳಲಿದೆಯೇ ಎಂದು ಕಾಂಗ್ರೆಸ್ ಜೈರಾಂ ರಮೇಶ್ ಪ್ರಶ್ನಿಸಿದರು.
ಹಣಕಾಸು ಸೇವೆಗಳ ಕಾಯ್ದೆ, ಶೇರು ಕಾಯ್ದೆ, ವಿತ್ತೀಯ ಬೇಹುಗಾರಿಕೆ ಹಾಗೂ ಕಪ್ಪು ಹಣ ಬಿಳುಪು ವಿರೋಧಿ ಮತ್ತು ಭಯೋತ್ಪಾದನೆಗೆ ಆರ್ಥಿಕ ನೆರವು ತಡೆ ಸಂಹಿತೆ ಸೇರಿದಂತೆ ವಿವಿಧ ಕಾನೂನುಗಳನ್ನು ಉಲ್ಲಂಘಿಸಿದ ಆರೋಪದಲ್ಲಿ ಮಾರಿಶಸ್ನ ಶೇರು ನಿಯಂತ್ರಣ ಸಂಸ್ಥೆಯಾದ ಫೈನಾನ್ಶಿಯಲ್ ಸರ್ವಿಸಸ್ ಕಮೀಶನ್ (ಎಫ್ಎಸ್ಸಿ), ಆದಾನಿ ಜೊತೆ ನಂಟಿರುವ ಎರಡು ಕಂಪೆನಿಗಳ ಪರವಾನಗಿಯನ್ನು ರದ್ದುಪಡಿಸಿತ್ತು.
ಭಾರತದಲ್ಲಿ ಸೆಬಿಯು ಅಸಹಾಯಕತೆಯನ್ನು ಪ್ರದರ್ಶಿಸಿದರೂ, ಮಾರಿಶಸ್ ನ ಶೇರು ನಿಯಂತ್ರಣ ಸಂಸ್ಥೆ ಅದಾನಿ ನಂಟಿರುವ ಕಂಪೆನಿಗಳ ವಿರುದ್ಧ ಕಠಿಣ ಕ್ರಮವನ್ನು ಕೈಗೊಂಡಿವೆ ಎಂದು ರಮೇಶ್ ಹೇಳಿದರು.