ಇತರ ಆರೋಪಿಗಳ ವಿರುದ್ಧ ತನಿಖೆ ಬಾಕಿಯಿದೆ ಎಂಬ ಕಾರಣಕ್ಕೆ ಆರೋಪಿಯು ಡೀಫಾಲ್ಟ್ ಜಾಮೀನು ಕೋರುವಂತಿಲ್ಲ : ಸುಪ್ರೀಂ

Update: 2024-01-25 15:56 GMT

ಸುಪ್ರೀಂ | Photo: PTI 

ಹೊಸದಿಲ್ಲಿ: ಇತರ ಆರೋಪಿಗಳ ವಿರುದ್ಧ ತನಿಖೆ ಬಾಕಿಯಿದೆ ಅಥವಾ ತನಿಖಾ ಸಂಸ್ಥೆಯು ಸಲ್ಲಿಸಿರುವ ದೋಷಾರೋಪ ಪಟ್ಟಿ ಅಪೂರ್ಣವಾಗಿದೆ ಎಂಬ ಕಾರಣಕ್ಕೆ ಆರೋಪಿಯು ಡೀಫಾಲ್ಟ್ ಜಾಮೀನು (ಶಾಸನಬದ್ಧ ಜಾಮೀನು) ಕೋರುವಂತಿಲ್ಲ ಎಂದು ಹೇಳಿರುವ ಸರ್ವೋಚ್ಚ ನ್ಯಾಯಾಲಯವು, ಬಹುಕೋಟಿ ರೂ.ಗಳ ಬ್ಯಾಂಕ್ ಸಾಲ ಹಗರಣ ಪ್ರಕರಣದಲ್ಲಿ ಡಿಎಚ್ಎಫ್ಎಲ್ ನ ಮಾಜಿ ಪ್ರವರ್ತಕರಾದ ಕಪಿಲ ವಾಧ್ವಾನ್ ಮತ್ತು ಅವರ ಸೋದರ ಧೀರಜ್ ವಾಧ್ವಾನ್ ಅವರಿಗೆ ಮಂಜೂರು ಮಾಡಿದ್ದ ಜಾಮೀನನ್ನು ರದ್ದುಗೊಳಿಸಿದೆ. ನಿಗದಿತ ಕಾಲಮಿತಿಯೊಳಗೆ ಆರೋಪಿಯ ವಿರುದ್ಧ ದೋಷಾರೋಪ ಪಟ್ಟಿ ಸಲ್ಲಿಸಲು ಪೋಲಿಸರು ವಿಫಲಗೊಂಡಾಗ ನ್ಯಾಯಾಲಯವು ಆತನಿಗೆ ಡೀಫಾಲ್ಟ್ ಜಾಮೀನು ನೀಡುತ್ತದೆ.

ಆರೋಪಿಯ ವಿರುದ್ಧ ದೋಷಾರೋಪ ಪಟ್ಟಿಯನ್ನು ಸಲ್ಲಿಸದಿದ್ದಾಗ ಮತ್ತು ಆತನ ವಿರುದ್ಧದ ತನಿಖೆ ಬಾಕಿಯಿದ್ದಾಗ ಮಾತ್ರ ಸಿಆರ್ಪಿಸಿಯ ಕಲಂ 167ರ ಉಪ ಕಲಂ (2)ರ ನಿಬಂಧನೆಯ ಲಾಭವು ಆತನಿಗೆ ಲಭ್ಯವಾಗುತ್ತದೆ ಎಂದು ಹೇಳಿದ ಸರ್ವೋಚ್ಚ ನ್ಯಾಯಾಲಯವು,ಆದರೆ ದೋಷಾರೋಪ ಪಟ್ಟಿ ಸಲ್ಲಿಕೆಯಾದಾಗ ಆರೋಪಿಗೆ ಈ ಹಕ್ಕು ಇರುವುದಿಲ್ಲ ಎಂದು ತಿಳಿಸಿದೆ.

ದೋಷಾರೋಪ ಪಟ್ಟಿಯೊಂದಿಗೆ ಸಲ್ಲಿಸಿದ ಸಾಕ್ಷ್ಯಗಳಿಂದ ಅಪರಾಧ ನಡೆದಿರುವುದು ನ್ಯಾಯಾಲಯಕ್ಕೆ ಮನವರಿಕೆಯಾದರೆ ಮತ್ತು ಆರೋಪಿಯು ಅಪರಾಧವೆಸಗಿದ್ದನ್ನು ಅದು ಗಮನಕ್ಕೆ ತೆಗೆದುಕೊಂಡರೆ ಮುಂದಿನ ವಿಚಾರಣೆಯು ಬಾಕಿ ಇದೆಯೇ ಇಲ್ಲವೇ ಎನ್ನುವುದು ಅಪ್ರಸ್ತುತವಾಗುತ್ತದೆ ಎಂದು ನ್ಯಾಯಮೂರ್ತಿಗಳಾದ ಬೇಲಾ ಎಂ.ತ್ರಿವೇದಿ ಮತ್ತು ಪಂಕಜ ಮಿತ್ತಲ್ ಅವರ ಪೀಠವು ಹೇಳಿತು.

ವಾಧ್ವಾನ್ ಸೋದರರ ವಿರುದ್ಧ ದೋಷಾರೋಪ ಪಟ್ಟಿಯನ್ನು ನಿಗದಿತ ಕಾಲಮಿತಿಯಲ್ಲಿ ಸಲ್ಲಿಸಲಾಗಿತ್ತು ಮತ್ತು ಅವರು ಎಸಗಿದ್ದಾರೆನ್ನಲಾದ ಅಪರಾಧಗಳನ್ನು ವಿಶೇಷ ನ್ಯಾಯಾಲಯವು ಗಮನಕ್ಕೆ ತೆಗೆದುಕೊಂಡಿತ್ತು. ಆರೋಪಿಗಳು ತಮ್ಮ ವಿರುದ್ಧ ತನಿಖೆ ಬಾಕಿಯಿದೆ ಎಂಬ ಕಾರಣವನ್ನು ನೀಡಿ ಸಿಆರ್ಪಿಸಿಯ ಕಲಂ 167(2) ರಡಿ ಡೀಫಾಲ್ಟ್ ಜಾಮೀನು ಕೋರಬಾರದಿತ್ತು. ವಾಧ್ವಾನ್ ಸೋದರರಿಗೆ ಡೀಫಾಲ್ಟ್ ಜಾಮೀನು ಮಂಜೂರು ಮಾಡುವಲ್ಲಿ ವಿಶೇಷ ನ್ಯಾಯಾಲಯ ಮತ್ತು ದಿಲ್ಲಿ ಉಚ್ಚ ನ್ಯಾಯಾಲಯ ಗಂಭೀರ ಕಾನೂನು ತಪ್ಪನ್ನೆಸಗಿವೆ ಎಂದು ಹೇಳಿದ ಸರ್ವೋಚ್ಚ ನ್ಯಾಯಾಲಯವು, ವಾಧ್ವಾನ್ ಸೋದರರನ್ನು ತಕ್ಷಣವೇ ಕಸ್ಟಡಿಗೆ ಪಡೆಯುವಂತೆ ಆದೇಶಿಸಿತು.

Tags:    

Writer - ವಾರ್ತಾಭಾರತಿ

contributor

Editor - Ismail

contributor

Byline - ವಾರ್ತಾಭಾರತಿ

contributor

Similar News