ಲಂಚದ ಆರೋಪದ ಬೆನ್ನಲ್ಲೇ ʼಅದಾನಿ ಗ್ರೂಪ್‌ʼ ಷೇರುಗಳಲ್ಲಿ 20% ಕುಸಿತ

Update: 2024-11-21 06:46 GMT

Photo: PTI

ಹೊಸದಿಲ್ಲಿ: US ಪ್ರಾಸಿಕ್ಯೂಟರ್ಗಳು ಗೌತಮ್ ಅದಾನಿ ಮತ್ತು ಇತರರ ವಿರುದ್ಧ 250 ಮಿಲಿಯನ್ ಡಾಲರ್ ಲಂಚ ಮತ್ತು ವಂಚನೆ ಆರೋಪ ಮಾಡಿದ ನಂತರ ಅದಾನಿ ಗ್ರೂಪ್ ತನ್ನ 600 ಮಿಲಿಯನ್ ಡಾಲರ್ ಬಾಂಡ್ ಒಪ್ಪಂದವನ್ನು ಕೈಬಿಟ್ಟಿದೆ. ಇದಲ್ಲದೆ ಅದಾನಿ ಗ್ರೂಪ್‌ ನ ಷೇರುಗಳಲ್ಲಿ 20% ದಷ್ಟು ಕುಸಿದಿದೆ ಮತ್ತು ಅದಾನಿ ಗ್ರೀನ್ ಬಾಂಬೆ ಸ್ಟಾಕ್ ಎಕ್ಸ್ಚೇಂಜ್ (BSE) ನಲ್ಲಿ 18% ದಷ್ಟು ಕುಸಿತ ಕಂಡು ಬಂದಿದೆ.

ಯುಎಸ್ ಡಿಪಾರ್ಟ್ಮೆಂಟ್ ಆಫ್ ಜಸ್ಟೀಸ್ (DOJ) ಮತ್ತು ಸೆಕ್ಯುರಿಟೀಸ್ ಮತ್ತು ಎಕ್ಸ್ಚೇಂಜ್ ಕಮಿಷನ್ (SEC) ಅದಾನಿ ಮತ್ತು ಇತರರ ವಿರುದ್ಧ ಲಂಚ ಮತ್ತು ವಂಚನೆ ಆರೋಪ ಮಾಡಿದ ಬಳಿಕ ಈ ಬೆಳವಣಿಗೆ ನಡೆದಿದೆ.

ಭಾರತದ ಅತಿದೊಡ್ಡ ಸೌರ ವಿದ್ಯುತ್ ಉತ್ಪಾದನಾ ಘಟಕ ಸ್ಥಾಪನೆಗಾಗಿ ಮುಂದಿನ 20 ವರ್ಷಗಳಲ್ಲಿ 2 ಶತಕೋಟಿ ಅಮೆರಿಕನ್ ಡಾಲರ್ ಲಾಭವನ್ನು ನಿರೀಕ್ಷಿಸುವ ಒಪ್ಪಂದಗಳನ್ನು ಪಡೆಯಲು ಭಾರತೀಯ ಸರ್ಕಾರಿ ಅಧಿಕಾರಿಗಳಿಗೆ ಲಂಚವನ್ನು ನೀಡಿದ ಮತ್ತು ವಿದೇಶಿ ಹೂಡಿಕೆದಾರರಿಗೆ ತಪ್ಪು ಮಾಹಿತಿ ನೀಡಿದ ಆರೋಪ ಇವರ ಮೇಲಿದೆ. ಇದಲ್ಲದೆ ಇತರ ಆರೋಪಿಗಳು ತನಿಖೆಗೆ ಅಡ್ಡಿಪಡಿಸುವ ಮೂಲಕ ಲಂಚದ ಆರೋಪವನ್ನು ಮರೆಮಾಚಲು ಯತ್ನಿಸಿದ್ದಾರೆ ಎಂದು ಆರೋಪಿಸಲಾಗಿತ್ತು.

ʼಅದಾನಿ ಗ್ರೀನ್ʼ ಈ ಕುರಿತು ಹೇಳಿಕೆಯನ್ನು ಹೊರಡಿಸಿದ್ದು, ಯುನೈಟೆಡ್ ಸ್ಟೇಟ್ಸ್ ಡಿಪಾರ್ಟ್ಮೆಂಟ್ ಆಫ್ ಜಸ್ಟಿಸ್ ಮತ್ತು ಯುನೈಟೆಡ್ ಸ್ಟೇಟ್ಸ್ ಸೆಕ್ಯುರಿಟೀಸ್ ಅಂಡ್ ಎಕ್ಸ್ಚೇಂಜ್ ಕಮಿಷನ್ ನಮ್ಮ ಮಂಡಳಿಯ ಸದಸ್ಯರಾದ ಗೌತಮ್ ಅದಾನಿ ಮತ್ತು ಸಾಗರ್ ಅದಾನಿ, ವಿನೀತ್ ಜೈನ್ ವಿರುದ್ಧ ಕ್ರಿಮಿನಲ್ ದೋಷಾರೋಪಣೆ ಮಾಡಿದೆ. ಈ ಬೆಳವಣಿಗೆಗಳ ಹಿನ್ನೆಲೆ ನಮ್ಮ ಅಂಗಸಂಸ್ಥೆಗಳು ಪ್ರಸ್ತುತ 600 ಮಿಲಿಯನ್ ಡಾಲರ್ ಬಾಂಡ್ ಒಪ್ಪಂದ ಮುಂದುವರಿಸದಿರಲು ನಿರ್ಧರಿಸಿವೆ ಎಂದು ಹೇಳಿದೆ.

ಅದಾನಿ ಗ್ರೂಪ್ ನ ಪ್ರಮುಖ ಕಂಪನಿಯಾದ ಅದಾನಿ ಎಂಟರ್ಪ್ರೈಸಸ್ ತನ್ನ ಷೇರು ಮೌಲ್ಯದಲ್ಲಿ 20% ತೀವ್ರ ಕುಸಿತವನ್ನು ಕಂಡಿದೆ, ಅದಾನಿ ಎನರ್ಜಿ ಸೊಲ್ಯೂಷನ್ಸ್ ಇದೇ ರೀತಿಯ ಕುಸಿತವನ್ನು ಎದುರಿಸಿದೆ. ಅದಾನಿ ಗ್ರೀನ್ ಎನರ್ಜಿ 19.17%, ಅದಾನಿ ಟೋಟಲ್ ಗ್ಯಾಸ್ 18.14%, ಅದಾನಿ ಪವರ್ 17.79%, ಮತ್ತು ಅದಾನಿ ಪೋರ್ಟ್ಸ್ ನಲ್ಲಿ 15% ದಷ್ಟು ಕುಸಿತ ಕಂಡಿದೆ. ಹೆಚ್ಚುವರಿಯಾಗಿ, ಅಂಬುಜಾ ಸಿಮೆಂಟ್ಸ್ 14.99% ರಷ್ಟು ಗಮನಾರ್ಹ ಕುಸಿತವನ್ನು ದಾಖಲಿಸಿದೆ.

ಇಂದು ಬೆಳಿಗ್ಗೆ ಅದಾನಿ ಗ್ರೂಪ್ ಷೇರುಗಳಲ್ಲಿ 20% ಕುಸಿತದ ನಂತರ, ಎಲ್ಲಾ 11 ಅದಾನಿ ಸ್ಟಾಕ್‌ ಗಳ ಒಟ್ಟು ಮಾರುಕಟ್ಟೆ ಮೌಲ್ಯವು ಭಾರೀ ಪ್ರಮಾಣದಲ್ಲಿ ಕುಸಿತ ಎದುರಿಸಿದೆ. 2023ರ ಆರಂಭದಲ್ಲಿ ಹಿಂಡೆನ್‌ ಬರ್ಗ್ ವರದಿಯ ನಂತರ ಅದಾನಿ ಗುಂಪಿನ ಅತ್ಯಂತ ಕಳಪೆ ವ್ಯಾಪಾರ ಪ್ರದರ್ಶನ ಇದಾಗಿದೆ.‌

Tags:    

Writer - ವಾರ್ತಾಭಾರತಿ

contributor

Editor - Irshad Venur

contributor

Byline - ವಾರ್ತಾಭಾರತಿ

contributor

Similar News