ಸುದ್ದಿ ಸಂಸ್ಥೆ IANS ನಲ್ಲಿ ತನ್ನ ಪಾಲು ಬಂಡವಾಳ ಏರಿಸಿದ ಅದಾನಿ ಸಂಸ್ಥೆ
ಹೊಸದಿಲ್ಲಿ: ಸುದ್ದಿ ಸಂಸ್ಥೆ ಐಎಎನ್‌ಎಸ್ ಇಂಡಿಯಾ ಪ್ರೈವೇಟ್ ಲಿಮಿಟೆಡ್‌ನಲ್ಲಿ ತನ್ನ ಪಾಲು ಬಂಡವಾಳವನ್ನು ಗೌತಮ್ ಅದಾನಿ ಅವರ ಸಂಸ್ಥೆ ಏರಿಸಿದ್ದು ಇದರೊಂದಿಗೆ ಈ ಸಂಸ್ಥೆಯ ಸಂಪೂರ್ಣ ಮಾಲಕತ್ವ ಪಡೆದುಕೊಳ್ಳುವ ನಿಟ್ಟಿನಲ್ಲಿ ಹೆಜ್ಜೆಯಿಟ್ಟಿದೆ.
ಕಳೆದ ತಿಂಗಳು ಐಎಎನ್‌ಎಸ್‌ನಲ್ಲಿ ಶೇ50.50 ಪಾಲನ್ನು ತನ್ನದಾಗಿಸಿದ್ದ ಅದಾನಿ ಸಮೂಹ ಈಗ ಅದನ್ನು ಮತದಾನ ಹಕ್ಕಿನೊಂದಿಗೆ ಶೇ 76ಕ್ಕೆ ಮತ್ತು ಮತದಾನ ಹಕ್ಕಿಲ್ಲದೆ ಶೇ99.28ಗೆ ಏರಿಸಿದೆ ಎಂದು ರೆಗ್ಯುಲೇಟರಿ ಫೈಲಿಂಗ್ ಮೂಲಕ ತಿಳಿದು ಬಂದಿದೆ.
“ನಮ್ಮ ಎಎಂಜಿ ಮೀಡಿಯಾ ನೆಟ್‌ವರ್ಕ್ಸ್ ಲಿಮಿಟೆಡ್ ಸಂಸ್ಥೆಯು ಐಎಎನ್‌ಎಸ್‌ನ ಹೊಸ ಷೇರುಗಳಿಗೆ ಸಬ್‌ಸ್ಕ್ರೈಬ್ ಮಾಡುವ ಮೂಲಕ ಸಂಸ್ಥೆಯಲ್ಲಿ ತನ್ನ ಪಾಲನ್ನು ಏರಿಸಿದೆ,” ಎಂದು ಫೈಲಿಂಗ್‌ನಲ್ಲಿ ತಿಳಿಸಿದೆ.
ಅದಾನಿ ಸಂಸ್ಥೆಗೆ ಷೇರು ಮಂಜೂರು ಮಾಡುವುದನ್ನು ಐಎಎನ್‌ಎಸ್ ಆಡಳಿತ ಮಂಡಳಿ ಜನವರಿ 16ರ ಸಭೆಯಲ್ಲಿ ಒಪ್ಪಿಗೆ ನೀಡಿತ್ತು. ಕಳೆದ ವರ್ಷದ ಡಿಸೆಂಬರ್ 15ರಂದು ಅದಾನಿ ಸಂಸ್ಥೆಯು ಐಎಎನ್‌ಎಸ್‌ನಲ್ಲಿ ಶೇ50.50 ಪಾಲುದಾರಿಕೆಯನ್ನು ಪಡೆದುಕೊಂಡಿತ್ತು, ಆದರೆ ಎಷ್ಟು ಮೊತ್ತಕ್ಕೆ ಇದನ್ನು ಪಡೆದುಕೊಳ್ಳಲಾಗಿದೆ ಎಂದು ತಿಳಿದು ಬಂದಿಲ್ಲ.
ಐಎಎನ್‌ಎಸ್‌ನ ಅಥೊರೈಸ್ಡ್ ಶೇರ್ ಕ್ಯಾಪಿಟಲ್ ರೂ. 11 ಕೋಟಿ ಆಗಿದ್ದರೆ ಆರ್ಥಿಕ ವರ್ಷ 2023ರಲ್ಲಿ ಆದಾಯ ರೂ .11.86 ಕೋಟಿ ಆಗಿತ್ತು. ಐಎಎನ್‌ಎಸ್ ಈಗ ಅದಾನಿ ಮೀಡಿಯಾ ನೆಟ್‌ವರ್ಕ್ಸ್ ಲಿಮಿಟೆಡ್‌ನ ಅಂಗಸಂಸ್ಥೆ ಎಂದು ರೆಗ್ಯುಲೇಟರಿ ಫೈಲಿಂಗ್‌ನಲ್ಲಿ ತಿಳಿಸಲಾಗಿದೆ.
ಕಳೆದ ವರ್ಷದ ಮಾರ್ಚ್ ತಿಂಗಳಿನಲ್ಲಿ ಡಿಜಿಟಲ್ ಮಾಧ್ಯಮ ಬಿಕ್ಯು ಪ್ರೈಮ್ ನಡೆಸುವ ಕ್ವಿಂಟಿಲ್ಲಿಯೊನ್ ಬಿಸಿನೆಸ್ ಇಂಡಿಯಾವನ್ನು ತನ್ನದಾಗಿಸಿದ್ದ ಅದಾನಿ ಸಂಸ್ಥೆ ನಂತರ ಎನ್‌ಡಿಟಿವಿಯ ಒಡೆತನವನ್ನೂ ಪಡೆದುಕೊಂಡಿತ್ತು.