ಒಂದೇ ದಿನ ಒಂದು ಲಕ್ಷ ಕೋಟಿ ರೂಪಾಯಿ ಕಳೆದುಕೊಂಡ ಅದಾನಿ ಷೇರುಗಳು
ಮುಂಬೈ: ಷೇರು ಮಾರುಕಟ್ಟೆಯಲ್ಲಿ ಬುಧವಾರ ಸೆನ್ಸೆಕ್ಸ್ ಎರಡನೇ ಅತಿದೊಡ್ಡ ಪತನಕ್ಕೆ ಸಾಕ್ಷಿಯಾಗಿದ್ದು, ಅದಾನಿ ಉದ್ಯಮ ಸಮೂಹ ಅತಿಹೆಚ್ಚು ನಷ್ಟ ಅನುಭವಿಸಿದ ಕಂಪನಿಯಾಗಿದೆ. ಅದಾನಿ ಷೇರುಗಳು ಒಂದೇ ದಿನ 1.1 ಲಕ್ಷ ಕೋಟಿ ರೂಪಾಯಿ ಕಳೆದುಕೊಂಡಿವೆ. 2023ರ ಫೆಬ್ರುವರಿ 2ರಂದು ಅಮೆರಿಕ ಮೂಲದ ಹಿಂಡೆನ್ಬರ್ಗ್ ಈ ಸಮೂಹದ ಬಗ್ಗೆ ವರದಿಯನ್ನು ಪ್ರಕಟಿಸಿದ ದಿನ ಅದಾನಿ ಸಮೂಹ ಕಳೆದುಕೊಂಡ ಮೌಲ್ಯವನ್ನು ಹೊರತುಪಡಿಸಿದರೆ ಇದು ಮಹಾ ಪತನವಾಗಿದೆ.
ಬುಧವಾರದ ವಹಿವಾಟು ಮುಕ್ತಾಯವಾದಾಗ ಅದಾನಿ ಸಮೂಹದ 11 ಕಂಪನಿಗಳ ಮಾರುಕಟ್ಟೆ ಬಂಡವಾಳೀಕರಣ 15.8 ಲಕ್ಷ ಕೋಟಿ ರೂಪಾಯಿಗಳಿಂದ 14.7 ಲಕ್ಷ ಕೋಟಿಗೆ ಇಳಿದಿದೆ ಎನ್ನುವುದನ್ನು ಅಧಿಕೃತ ಅಂಕಿ ಅಂಶಗಳು ತೋರಿಸುತ್ತದೆ. ಅದಾನಿ ಸಮೂಹದ ಬಹುತೇಕ ಕಂಪನಿಗಳ ಷೇರುಗಳು ಮೌಲ್ಯ ಕಳೆದುಕೊಂಡಿದ್ದು, ಅದಾನಿ ಟೋಟಲ್ ಗ್ಯಾಸ್ ಗರಿಷ್ಠ ಅಂದರೆ ಶೇಕಡ 9.5ರಷ್ಟು ಪತನ ಕಂಡಿದೆ.
ಅದಾನಿ ಷೇರುಗಳ ಕುಸಿತಕ್ಕೆ ಯಾವುದೇ ನಿರ್ದಿಷ್ಟ ಕಾರಣಗಳನ್ನು ಮಾರುಕಟ್ಟೆ ವಿಶ್ಲೇಷಕರು ನೀಡಿಲ್ಲವಾದರೂ, ಕಳೆದ ವಾರ ಆರಂಭವಾದ ಮಧ್ಯಮ ಹಾಗೂ ಸಣ್ಣ ಮಿತಿಯ ಷೇರುಗಳ ಅಧಿಕ ಮೌಲ್ಯಮಾಪನದ ಭೀತಿ ಕಾರಣ ಎಂದು ಹೇಳಲಾಗುತ್ತಿದೆ.
ಅದಾನಿ ಉದ್ಯಮ ಸಮೂಹದ ಕಂಪನಿಗಳಲ್ಲಿ ಅದಾನಿ ಗ್ರೀನ್ ಎನರ್ಜಿಯ ಷೇರುಗಳ ಮೌಲ್ಯ ಹಿಂದಿನ ದಿನಕ್ಕೆ ಹೋಲಿಸಿದರೆ ಶೇಕಡ 9.1ರಷ್ಟು ಕಡಿಮೆಯಾಗಿದೆ. ಅಂದರೆ ಒಂದೇ ದಿನ 27300 ಕೋಟಿ ರೂಪಾಯಿ ನಷ್ಟವಾಗಿದೆ. ಅದಾನಿ ಎಂಟರ್ ಪ್ರೈಸಸ್ 24600 ಕೋಟಿ ರೂಪಾಯಿ ಕಳೆದುಕೊಂಡಿದೆ.
ಆದರೆ ಸಾಂಘಿ ಇಂಡಸ್ಟ್ರೀಸ್ ಮಂಗಳವಾರದ ವಹಿವಾಟು ಕೊನೆಗೆ ದಾಖಲಿಸಿದ್ದ ಮೌಲ್ಯಕ್ಕೆ ಹೋಲಿಸಿದರೆ ಕೇವಲ 257 ಕೋಟಿ ರೂಪಾಯಿ ಕಳೆದುಕೊಂಡಿದ್ದು, ಇದು ಕನಿಷ್ಠವಾಗಿದೆ.