ಕೇರಳ: ಸಿಪಿಐ(ಎಂ) ನಾಯಕಿಯಿಂದ ಟೀಕೆಗೊಳಗಾದ ಮರುದಿನ ಮೃತಪಟ್ಟ ಸ್ಥಿತಿಯಲ್ಲಿ ಪತ್ತೆಯಾದ ಅಪರ ಜಿಲ್ಲಾಧಿಕಾರಿ

Update: 2024-10-15 09:23 GMT

 ನವೀನ್ ಬಾಬು (Photo credit: X/@TheSouthfirst)

ತಿರುವನಂತಪುರಂ : ಸಿಪಿಐ(ಎಂ) ನಾಯಕಿ ಮತ್ತು ಕಣ್ಣೂರು ಜಿಲ್ಲಾ ಪಂಚಾಯತ್ ಅಧ್ಯಕ್ಷೆ ಪಿ ಪಿ ದಿವ್ಯಾ ಅವರು ಸಾರ್ವಜನಿಕವಾಗಿ ಆಯೋಜಿಸಿದ್ದ ಬೀಳ್ಕೊಡುಗೆ ಸಮಾರಂಭದಲ್ಲಿ ಕಣ್ಣೂರು ಅಪರ ಜಿಲ್ಲಾಧಿಕಾರಿ, ಹೆಚ್ಚುವರಿ ಜಿಲ್ಲಾ ದಂಡಾಧಿಕಾರಿ (ಎಡಿಎಂ) ನವೀನ್ ಬಾಬು ಅವರನ್ನು ಟೀಕಿಸಿದ ಮರುದಿನ, ಬಾಬು ಮಂಗಳವಾರ ಅವರ ನಿವಾಸದಲ್ಲಿ ಶವವಾಗಿ ಪತ್ತೆಯಾಗಿದ್ದಾರೆ.

ಬಾಬು ಅವರು ತಮ್ಮ ಅಧಿಕೃತ ನಿವಾಸದಲ್ಲಿ ಮೃತಪಟ್ಟ ಸ್ಥಿತಿಯಲ್ಲಿ ಪತ್ತೆಯಾಗಿದ್ದು, ತನಿಖೆ ನಡೆಯುತ್ತಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಬಾಬು ಅವರು ನಾಳೆ ಪತ್ತನಂತಿಟ್ಟದಲ್ಲಿ ಅಪರ ಜಿಲ್ಲಾಧಿಕಾರಿಯಾಗಿ ಅಧಿಕಾರ ಸ್ವೀಕರಿಸಬೇಕಿತ್ತು.

ಸೋಮವಾರ ಕಣ್ಣೂರಿನಲ್ಲಿ ಬಾಬು ಅವರ ಬೀಳ್ಕೊಡುಗೆ ವೇಳೆ ಈ ಘಟನೆ ನಡೆದಿದೆ. ಜಿಲ್ಲಾಧಿಕಾರಿ ಅರ್ಜುನ್ ಪಾಂಡನ್ ಮುಖ್ಯ ಅತಿಥಿಯಾಗಿದ್ದ ಕಾರ್ಯಕ್ರಮಕ್ಕೆ ಜಿಲ್ಲಾ ಪಂಚಾಯಿತಿ ಅಧ್ಯಕ್ಷರನ್ನು ಆಹ್ವಾನಿಸಿರಲಿಲ್ಲ.

ಆದರೆ, ದಿವ್ಯಾ ಅವರು ಆಹ್ವಾನವಿಲ್ಲದೇ ಕಾರ್ಯಕ್ರಮಕ್ಕೆ ಬಂದರು. ವೇದಿಕೆಯಲ್ಲಿ ಆಸೀನರಾದರು ಎನ್ನಲಾಗಿದೆ.

ಬಳಿಕ ಮಾತನಾಡಿದ ಅವರು “ಬೇರೆ ಜಿಲ್ಲೆಗೆ ತೆರಳುತ್ತಿರುವ ಎಡಿಎಂಗೆ ನಾನು ಎಲ್ಲ ಶುಭಾಶಯಗಳನ್ನು ಹೇಳುತ್ತಿದ್ದೇನೆ. ಮಾಜಿ ಎಡಿಎಂ ಅಧಿಕಾರಾವಧಿಯಲ್ಲಿ ಹಲವು ಬಾರಿ ಅವರ ಜತೆ ಮಾತನಾಡಿದ್ದೆ. ಈ ಅಪರ ಜಿಲ್ಲಾಧಿಕಾರಿ ಜೊತೆ ನನಗೆ ಮಾತನಾಡುವ ಸಂದರ್ಭಗಳು ಬರಲಿಲ್ಲ. ಆದರೆ ನಾನು ಅವರಿಗೆ ಒಮ್ಮೆ ಕರೆ ಮಾಡಿದ್ದೆ. ಅದು ಚೆಂಗಲೈನಲ್ಲಿ ಪೆಟ್ರೋಲ್ ಬಂಕ್ ಗೆ ನಿರಾಕ್ಷೇಪಣಾ ಪ್ರಮಾಣಪತ್ರದ ಬಗ್ಗೆ. ಅವರು ಸೈಟ್‌ಗೆ ಭೇಟಿ ನೀಡಬೇಕೆಂದು ನಾನು ಬಯಸಿದ್ದೆ. ಪೆಟ್ರೋಲ್ ಬಂಕ್ ಸೈಟ್ ಗೆ ಭೇಟಿ ನೀಡಿರುವುದಾಗಿ ಬಳಿಕ ಅವರು ತಿಳಿಸಿದರು" ಎಂದರು.

"ಪೆಟ್ರೋಲ್ ಬಂಕ್ ಅರ್ಜಿದಾರ ಸಮಸ್ಯೆಯ ಬಗ್ಗೆ ಯಾವುದೇ ನಿರ್ಧಾರ ತೆಗೆದುಕೊಂಡಿಲ್ಲ ಎಂದು ಹಲವಾರು ಬಾರಿ ನನ್ನ ಬಳಿಗೆ ಬಂದಿದ್ದರು. ಎಡಿಎಂ ಅವರನ್ನು ಕೇಳಿದಾಗ, ಅಂಕುಡೊಂಕು ರಸ್ತೆಯಿಂದ ಕೆಲವು ಸಮಸ್ಯೆಗಳಿದ್ದು, ಎನ್‌ಒಸಿ ನೀಡಲು ಕಷ್ಟವಾಯಿತು. ನೀವು ಆಗಾಗ್ಗೆ ನನ್ನನ್ನು ಭೇಟಿ ಮಾಡುವ ಅಗತ್ಯವಿಲ್ಲ ಎಂದು ನಾನು ಉದ್ಯಮಿಗಳಿಗೆ ಹೇಳಿದೆ. ಈ ವಿಚಾರದಲ್ಲಿ ಅವರಿಗೆ ಸಹಾಯ ಮಾಡುತ್ತೇನೆ ಎಂದು ಭರವಸೆ ನೀಡಿದ್ದೆ" ಎಂದು ದಿವ್ಯಾ ಹೇಳಿದರು.

"ಈಗ ಎಡಿಎಂ ತೆರಳುತ್ತಿದ್ದಂತೆ ಎನ್‌ಒಸಿ ನೀಡಲಾಗಿದೆ ಎಂದು ತಿಳಿದು ಬಂದಿದೆ. ಎನ್‌ಒಸಿ ಕೊಟ್ಟಿದ್ದು ಹೇಗೆ ಅಂತ ಗೊತ್ತು. ಆ ಎನ್‌ಒಸಿ ನೀಡಿದ್ದಕ್ಕೆ ಕೃತಜ್ಞತೆ ಸಲ್ಲಿಸಲು ಈ ಕಾರ್ಯಕ್ರಮಕ್ಕೆ ಬಂದಿದ್ದೇನೆ. ಜೀವನದಲ್ಲಿ ನಾವು ಪ್ರಾಮಾಣಿಕರಾಗಿರಬೇಕು. ಹೊಸ ಪೋಸ್ಟಿಂಗ್ ಜಾಗದಲ್ಲಿ ಕಣ್ಣೂರಿನಲ್ಲಿ ಮಾಡಿದ ರೀತಿಯಲ್ಲಿ ಕೆಲಸ ಮಾಡಬಾರದು. ನೀವು ಜನರಿಗೆ ಉತ್ತಮ ರೀತಿಯಲ್ಲಿ ಸಹಾಯ ಮಾಡಬೇಕು. ಇದು ಸರ್ಕಾರಿ ಸೇವೆ" ಎಂದು ದಿವ್ಯಾ ಭಾಷಣ ಮುಗಿಸಿದ್ದರು.

ಭಾಷಣ ಮುಗಿಸಿದ ತಕ್ಷಣ ವೇದಿಕೆಯಿಂದ ನಿರ್ಗಮಿಸಿದ ದಿವ್ಯಾ ತಾವು ಬೇಗ ಹೊರಡುತ್ತಿರುವ ಕಾರಣವನ್ನು ಎರಡು ದಿನಗಳಲ್ಲಿ ತಿಳಿಸುವುದಾಗಿ ಹೇಳಿದ್ದರು.

ದಿವ್ಯಾ ವಿರುದ್ಧ ಆತ್ಮಹತ್ಯೆಗೆ ಪ್ರಚೋದನೆ ನೀಡಿದ ಪ್ರಕರಣ ದಾಖಲಿಸಬೇಕು ಎಂದು ಕಾಂಗ್ರೆಸ್ ಆಗ್ರಹಿಸಿದೆ.

Full View

Tags:    

Writer - ವಾರ್ತಾಭಾರತಿ

contributor

Editor - Ashfaq

contributor

Byline - ವಾರ್ತಾಭಾರತಿ

contributor

Similar News