ಆದಿತ್ಯ-ಎಲ್1 ಭೂಮಿಯ ಕಕ್ಷೆಯನ್ನು ತೊರೆದು ಎಲ್1 ಬಿಂದುವಿನತ್ತ ಪ್ರಯಾಣ
ಬೆಂಗಳೂರು: ಭಾರತದ ಸೂರ್ಯ ಶೋಧಕ ನೌಕೆ ಆದಿತ್ಯ-ಎಲ್1 ಮಂಗಳವಾರ ಭೂಮಿಯ ಕಕ್ಷೆಯನ್ನು ತೊರೆದು, ಸೂರ್ಯನ ಲಗ್ರಾಂಜ್ ಬಿಂದು ಒಂದು (ಎಲ್1)ವಿನತ್ತ ತನ್ನ 110 ದಿನಗಳ ಯಾನವನ್ನು ಆರಂಭಿಸಿದೆ. ಇದರೊಂದಿಗೆ, ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ (ಇಸ್ರೊ) ಮಹತ್ವದ ಲಗ್ರಾಂಜಿಯನ್ ಪಾಯಿಂಟ್ ವನ್ ವ್ಯಾಪ್ತಿಗೆ ನೌಕೆಯನ್ನು ಸೇರಿಸುವ ಕಸರತ್ತನ್ನು ಯಶಸ್ವಿಯಾಗಿ ಪೂರ್ಣಗೊಳಿಸಿದೆ.
ಮಂಗಳವಾರ ಮುಂಜಾನೆ 2 ಗಂಟೆಗೆ ನಡೆಸಲಾದ ಕಾರ್ಯಾಚರಣೆಯಲ್ಲಿ ನೌಕೆಯನ್ನು ಭೂಮಿಯ ಕಕ್ಷೆಯಿಂದ ಸೂರ್ಯನ ದಿಕ್ಕಿನತ್ತ ಚಿಮ್ಮಿಸಲಾಯಿತು.
“ಬಾಹ್ಯಾಕಾಶ ನೌಕೆಯು ಈಗ ಸೂರ್ಯ-ಭೂಮಿ ಎಲ್1 ಬಿಂದುವಿನತ್ತ ಹೋಗುವ ಪಥದಲ್ಲಿದೆ. ಸುಮಾರು 110 ದಿನಗಳ ಬಳಿಕ, ಅದನ್ನು ಎಲ್1 ಸುತ್ತಲಿನ ಕಕ್ಷೆಯೊಂದಕ್ಕೆ ಸೇರಿಸುವ ಕಾರ್ಯಾಚರಣೆಯನ್ನು ನಡೆಸಲಾಗುವುದು” ಎಂದು ಇಸ್ರೊ ಎಕ್ಸ್ ನಲ್ಲಿ ಹಾಕಿದ ಪೋಸ್ಟ್ ನಲ್ಲಿ ತಿಳಿಸಿದೆ.
ಆದಿತ್ಯ-ಎಲ್1 ಸೂರ್ಯ ಶೋಧಕ ನೌಕೆಯನ್ನು ಸೆಪ್ಟಂಬರ್ 2ರಂದು ಶ್ರೀಹರಿಕೋಟದ ಸತೀಶ್ ಧವನ್ ಬಾಹ್ಯಾಕಾಶ ಕೇಂದ್ರದಿಂದ ಉಡಾಯಿಸಲಾಗಿತ್ತು. ಸೆಪ್ಟಂಬರ್ 10ರಂದು, ಭೂಮಿಯಿಂದ ಸುಮಾರು 50,000 ಕಿ.ಮೀ. ದೂರದಲ್ಲಿ ಅದಕ್ಕೆ ಚಾಲನೆ ನೀಡಲಾಗಿತ್ತು.