ಲೋಕಸಭಾ ನೀತಿಸಮಿತಿಯ ಸಭೆ ನ.9ಕ್ಕೆ ಮುಂದೂಡಿಕೆ

Update: 2023-11-06 14:36 GMT

ಮಹುವಾ ಮೊಯಿತ್ರಾ (Photo- PTI)

ಹೊಸದಿಲ್ಲಿ : ಟಿಎಂಸಿ ಸಂಸದೆ ಮಹುವಾ ಮೊಯಿತ್ರಾ ವಿರುದ್ಧದ ಪ್ರಶ್ನೆಗಳಿಗಾಗಿ ಲಂಚದ ಆರೋಪಗಳ ಕುರಿತು ಕರಡು ವರದಿಯನ್ನು ಪರಿಗಣಿಸಲು ಮತ್ತು ಅಂಗೀಕರಿಸಲು ಲೋಕಸಭಾ ನೀತಿ ಸಮಿತಿಯ ಸಭೆಯನ್ನು ನ.7ರಿಂದ ನ.9ಕ್ಕೆ ಮುಂದೂಡಲಾಗಿದೆ. ಈ ಬಗ್ಗೆ ಲೋಕಸಭಾ ಸಚಿವಾಲಯವು ಹೊರಡಿಸಿರುವ ನೋಟಿಸ್‌ನಲ್ಲಿ ಮುಂದೂಡಿಕೆಗೆ ಕಾರಣವನ್ನು ಅಧಿಕೃತವಾಗಿ ಉಲ್ಲೇಖಿಸಲಾಗಿಲ್ಲ.

ಕರಡು ವರದಿಯನ್ನು ಅಂಗೀಕರಿಸಲು ಸಭೆಯನ್ನು ಕರೆದಿರುವುದು ಬಿಜೆಪಿ ಸಂಸದ ವಿನೋದಕುಮಾರ ಸೋನ್ಕರ್ ನೇತೃತ್ವದ ಸಮಿತಿಯು ತನ್ನ ವಿಚಾರಣೆಯನ್ನು ಪೂರ್ಣಗೊಳಿಸಿದೆ ಮತ್ತು ತನ್ನ ಶಿಫಾರಸನ್ನು ಮಾಡಲಿದೆ ಎನ್ನುವುದನ್ನು ಸೂಚಿಸುತ್ತದೆ. ನ.2ರಂದು ನಡೆದಿದ್ದ ಸಮಿತಿಯ ಹಿಂದಿನ ಸಭೆಯಲ್ಲಿ ಮೊಯಿತ್ರಾ ಅವರ ಪ್ರಯಾಣಗಳು, ಹೋಟೆಲ್ ವಾಸ್ತವ್ಯ ಮತ್ತು ದೂರವಾಣಿ ಕರೆಗಳಿಗೆ ಸಂಬಂಧಿಸಿದಂತೆ ಸೋನ್ಕರ್ ವೈಯಕ್ತಿಕ ಮತ್ತು ಅಸಭ್ಯ ಪ್ರಶ್ನೆಗಳನ್ನು ಕೇಳಿದ್ದಾರೆ ಎಂದು ಆರೋಪಿಸಿ ಎಲ್ಲ ಐವರು ಪ್ರತಿಪಕ್ಷ ಸದಸ್ಯರು ಸಭಾತ್ಯಾಗ ಮಾಡಿದ್ದರು.

15 ಸದಸ್ಯರ ಸಮಿತಿಯಲ್ಲಿ ಬಿಜೆಪಿ ಸಂಸದರು ಬಹುಮತವನ್ನು ಹೊಂದಿದ್ದು, ಅದು ಮೊಯಿತ್ರಾ ವಿರುದ್ಧದ ಆರೋಪಗಳ ಬಗ್ಗೆ ಕಠಿಣ ನಿಲುವು ತಳೆಯುವ ಸಾಧ್ಯತೆಯಿದೆ. ಹಿಂದಿನ ಸಭೆಯಲ್ಲಿ ಪ್ರತಿಪಕ್ಷ ಸದಸ್ಯರೊಂದಿಗೆ ಸಭಾತ್ಯಾಗಕ್ಕೆ ಮುನ್ನ, ಸೋನ್ಕರ್ ತನಗೆ ಕೊಳಕು ಮತ್ತು ವೈಯಕ್ತಿಕ ಪ್ರಶ್ನೆಗಳನ್ನು ಕೇಳಿದ್ದಾರೆ ಎಂದು ಮೊಯಿತ್ರಾ ಆರೋಪಿಸಿದ್ದ ಹಿನ್ನೆಲೆಯಲ್ಲಿ ಈ ಸಾಧ್ಯತೆ ಇನ್ನಷ್ಟು ದಟ್ಟವಾಗಿದೆ.

ಪ್ರತಿಪಕ್ಷಗಳ ಸದಸ್ಯರು ಭಿನ್ನಾಭಿಪ್ರಾಯದ ಟಿಪ್ಪಣಿಗಳನ್ನು ಸಲ್ಲಿಸುವ ಸಾಧ್ಯತೆಯ ನಡುವೆ ಸಮಿತಿಯು ಲೋಕಸಭಾ ಸ್ಪೀಕರ್ ಓಂ ಬಿರ್ಲಾ ಅವರಿಗೆ ಸಲ್ಲಿಸಲಿರುವ ತನ್ನ ವರದಿಯಲ್ಲಿ ಮೊಯಿತ್ರಾ ವಿರುದ್ಧ ಶಿಫಾರಸುಗಳನ್ನು ಮಾಡುವ ಸೂಚನೆಗಳಿವೆ.

Tags:    

Writer - ವಾರ್ತಾಭಾರತಿ

contributor

Editor - Althaf

contributor

Byline - ವಾರ್ತಾಭಾರತಿ

contributor

Similar News