ದೆಹಲಿಯಲ್ಲಿರುವ ಅಫ್ಘಾನ್ ರಾಯಭಾರ ಕಚೇರಿ ಕಾರ್ಯಾಚರಣೆ ಸ್ಥಗಿತ
ಹೊಸದಿಲ್ಲಿ: ʼಭಾರತ ಸರ್ಕಾರದಿಂದ ಬೆಂಬಲದ ಕೊರತೆʼ ಒಂದು ಕಾರಣ ಎಂದು ಉಲ್ಲೇಖಿಸಿ ದೆಹಲಿಯಲ್ಲಿರುವ ಅಫ್ಘಾನ್ ರಾಯಭಾರ ಕಚೇರಿ ರವಿವಾರದಿಂದ ತನ್ನ ಕಾರ್ಯಾಚರಣೆಯನ್ನು ನಿಲ್ಲಿಸಿದೆ.
"ದೆಹಲಿಯಲ್ಲಿರುವ ಅಫ್ಘಾನಿಸ್ತಾನದ ರಾಯಭಾರ ಕಚೇರಿಯು ತನ್ನ ಕಾರ್ಯಾಚರಣೆಯನ್ನು ನಿಲ್ಲಿಸುವ ನಿರ್ಧಾರವನ್ನು ಪ್ರಕಟಿಸಿದ್ದು ಆಳವಾದ ದುಃಖ, ವಿಷಾದ ಮತ್ತು ನಿರಾಶೆಯಾಗಿದೆ" ಎಂದು ರಾಜತಾಂತ್ರಿಕ ಕಚೇರಿ ಶನಿವಾರ ಬಿಡುಗಡೆ ಮಾಡಿದ ಹೇಳಿಕೆಯಲ್ಲಿ ತಿಳಿಸಿದೆ.
ಭಾರತ ಸರ್ಕಾರದಿಂದ ಸಾಕಷ್ಟು ಬೆಂಬಲ ಸಿಗುತ್ತಿಲ್ಲ, ಹಾಗೂ ಅಫ್ಘಾನ್ ರಾಯಭಾರ ಕಚೇರಿಯು ಕಾಬೂಲ್‌ನ (ಅಫ್ಘನ್ ಸರ್ಕಾರದ) ನಿರೀಕ್ಷೆಗಳನ್ನು ಪೂರೈಸುವಲ್ಲಿ ವಿಫಲವಾಗಿದೆ. ಹಾಗಾಗಿ, ಸಿಬ್ಬಂದಿ ಮತ್ತು ಸಂಪನ್ಮೂಲಗಳನ್ನು ಕಡಿಮೆಗೊಳಿಸಲು ಹೊಸದಿಲ್ಲಿಯಲ್ಲಿ ತನ್ನ ಕಾರ್ಯಾಚರಣೆಯನ್ನು ಸ್ಥಗಿತಗೊಳಿಸಲು ನಿರ್ಧರಿಸಲಾಗಿದೆ ಎಂದು ತಿಳಿಸಿದೆ.
ಭಾರತದಿಂದ ರಾಜತಾಂತ್ರಿಕ ಬೆಂಬಲದ ಕೊರತೆ ಜೊತೆಗೆ ಕಾಬೂಲ್‌ನಲ್ಲಿ ಕಾನೂನುಬದ್ಧವಾಗಿ ಕಾರ್ಯನಿರ್ವಹಿಸುವ ಸರ್ಕಾರದ ಅನುಪಸ್ಥಿತಿಯಿಂದ ಅಫ್ಘಾನಿಸ್ತಾನದ ಹಿತಾಸಕ್ತಿಗಳನ್ನು ಪೂರೈಸಲು ಸಾಧ್ಯವಾಗುತ್ತಿಲ್ಲ ಎಂದು ರಾಯಭಾರ ಕಚೇರಿ ಹೇಳಿದೆ.
2021 ರ ಆಗಸ್ಟ್‌ನಲ್ಲಿ ತಾಲಿಬಾನ್ ಪಡೆಗಳು ದೇಶವನ್ನು ಸ್ವಾಧೀನಪಡಿಸಿಕೊಳ್ಳುವ ಮುನ್ನ ಅಶ್ರಫ್ ಘನಿ ಸರ್ಕಾರದಿಂದ ನೇಮಕಗೊಂಡಿದ್ದ ರಾಯಭಾರಿ ಫರೀದ್ ಮಮುಂಡ್‌ಜಾಯ್ ಅವರೇ ನವದೆಹಲಿಯಲ್ಲಿರುವ ಅಫ್ಘಾನ್ ರಾಯಭಾರ ಕಚೇರಿಯ ನೇತೃತ್ವ ವಹಿಸಿದ್ದರು. ಘನಿ ಸರ್ಕಾರವನ್ನು ಪದಚ್ಯುತಗೊಳಿಸಿದ ನಂತರವೂ ಮಮುಂಡ್‌ಜಾಯ್ ತಮ್ಮ ಹುದ್ದೆಯಲ್ಲಿ ಮುಂದುವರೆದಿದ್ದರು.
ರಾಜತಾಂತ್ರಿಕರಿಗೆ ಸಮಯಕ್ಕೆ ಸರಿಯಾಗಿ ವೀಸಾ ನವೀಕರಣ ಸೇರಿದಂತೆ ಇತರ ಬೆಂಬಲದ ಕೊರತೆಯನ್ನು ಎದುರಿಸುತ್ತಿದೆ ಎಂದು ರಾಯಭಾರ ಕಚೇರಿ ಆರೋಪಿಸಿದೆ.