ಚಂದ್ರನ ಮೇಲೆ ಇಳಿದಿರುವ ಭಾರತದಲ್ಲಿ ಈಗಲೂ ಮಲಹೊರುವ ಪದ್ಧತಿ ಜೀವಂತ: ಕಾರ್ತಿ ಚಿದಂಬಂರಂ
ಹೊಸದಿಲ್ಲಿ: ಚಂದ್ರನ ಮೇಲೆ ಅಂತರಿಕ್ಷ ನೌಕೆಯನ್ನು ಇಳಿಸಿರುವ ದೇಶವು ಈಗಲೂ ಮಲಹೊರುವ ಪದ್ಧತಿಯನ್ನು ಹೊಂದಿರಲು ಹೇಗೆ ಸಾಧ್ಯ ಎಂದು ಕಾಂಗ್ರೆಸ್ ಸಂಸದ ಕಾರ್ತಿ ಚಿದಂಬರಂ ಅವರು ಗುರುವಾರ ಲೋಕಸಭೆಯಲ್ಲಿ ಅಚ್ಚರಿಯನ್ನು ವ್ಯಕ್ತಪಡಿಸಿದರು. ಚಂದ್ರಯಾನ-3 ಅಭಿಯಾನದ ಯಶಸ್ಸಿನ ಕುರಿತು ಚರ್ಚೆಯಲ್ಲಿ ಪಾಲ್ಗೊಂಡಿದ್ದ ಅವರು, ದೇಶದಲ್ಲಿ ವೈಜ್ಞಾನಿಕ ಮನೋಭಾವವನ್ನು ಕಾಯ್ದುಕೊಳ್ಳುವುದು ಮುಖ್ಯವಾಗಿದೆ ಎಂದೂ ಹೇಳಿದರು.
ಜನರು ಸಾಮಾನ್ಯವಾಗಿ ನಂಬಿಕೆ ಮತ್ತು ಆಧ್ಯಾತ್ಮಿಕತೆಯ ನಡುವೆ ಗೊಂದಲಕ್ಕೆ ಒಳಗಾಗುತ್ತಾರೆ. ಆಧ್ಯಾತ್ಮಿಕತೆ ಮತ್ತು ವಿಜ್ಞಾನವನ್ನು ಪ್ರಶ್ನಿಸಬಹುದು,ಆದರೆ ನಂಬಿಕೆಯನ್ನು ಪ್ರಶ್ನಿಸಲಾಗುವುದಿಲ್ಲ ಎಂದು ಹೇಳಿದ ಅವರು,‘ಇಸ್ರೋ ಪ್ರದರ್ಶಿಸಿರುವ ವೈಜ್ಞಾನಿಕ ಮನೋಭಾವವವನ್ನು ನಾವು ಕಾಯ್ದುಕೊಳ್ಳುವುದು ಅತ್ಯಂತ ಮುಖ್ಯವಾಗಿದೆ ’ ಎಂದರು.
‘ಭಾರತವು ಚಂದ್ರನ ಮೇಲೆ ಇಳಿದಿರುವಾಗ ದೇಶವು ಈಗಲೂ ಮಲಹೊರುವ ಪದ್ಧತಿ ಮತ್ತು ರಸ್ತೆಗುಂಡಿಗಳಂತಹ ಸಮಸ್ಯೆಗಳನ್ನು ಹೊಂದಿರಲು ಹೇಗೆ ಸಾಧ್ಯ ಎನ್ನುವುದು ನಿಜಕ್ಕೂ ದಿಗ್ಭ್ರಮೆಗೊಳಿಸುತ್ತಿದೆ. ನಾವು ಎಲ್ಲರಿಗಾಗಿ ಉಪಗ್ರಹಗಳ ಉಡಾವಣೆಗಳನ್ನು ನಡೆಸುತ್ತೇವೆ,ಆದರೆ ಮಳೆಗಾಲದಲ್ಲಿ ರಸ್ತೆಗಳನ್ನು ನಿರ್ವಹಿಸುವುದು ನಮ್ಮಿಂದ ಸಾಧ್ಯವಾಗುತ್ತಿಲ್ಲ.
ಇಂತಹ ವಿರೋಧಾಭಾಸವನ್ನು ನಾವು ಹೊಂದಿರಲು ಹೇಗೆ ಸಾಧ್ಯ? ನಾವು ಸಾಧಿಸುತ್ತಿರುವ ವೈಜ್ಞಾನಿಕ ಪ್ರಗತಿಯ ಲಾಭವನ್ನು ಪಡೆದುಕೊಳ್ಳಲು ನಮಗೆ ಸಾಧ್ಯವಾಗದಿದ್ದರೆ ನಮ್ಮ ಸಮಾಜದಲ್ಲಿ ಏನಾದರೂ ಗಂಭೀರ ತಪ್ಪು ಇದೆ ಎಂದೇ ಅರ್ಥ ’ಎಂದ ಅವರು,‘ನಮ್ಮ ಪರಂಪರೆ ಮತ್ತು ಇತಿಹಾಸಗಳು ವಿಜ್ಞಾನ ಮತ್ತು ಖಗೋಳಶಾಸ್ತ್ರದೊಂದಿಗೆ ನಿಕಟ ಸಂಬಂಧವನ್ನು ಹೊಂದಿವೆ ಎನ್ನುವುದನ್ನು ನಾನು ಸಂಪೂರ್ಣವಾಗಿ ಅರ್ಥ ಮಾಡಿಕೊಂಡಿದ್ದೇನೆ.
ನಾವು ಹೊಂದಿದ್ದ ವಿಜ್ಞಾನವನ್ನು ನಾವೆಲ್ಲಿ ಕಳೆದುಕೊಂಡಿದ್ದೇವೆ ಎನ್ನುವುದನ್ನು ತಿಳಿದುಕೊಳ್ಳಲು ನಾವು ಸಂಶೋಧನೆ ಮತ್ತು ಪರೀಕ್ಷೆಯನ್ನು ನಡೆಸಬೇಕಿದೆ ಮತ್ತು ನಮ್ಮ ಮೂಲಗಳಿಗೆ ಮರಳುವ ಅಗತ್ಯವಿದೆ ’ಎಂದರು.