ತವರಿನಲ್ಲೇ ಮುಖಭಂಗ ಅನುಭವಿಸಿದ ಅಜಿತ್ ಪವಾರ್ ಮುಂದಿರುವ ಹಾದಿ ಏನು?
ಮುಂಬೈ: ಬಂಡಾಯ ಬಾವುಟ ಹಾರಿಸಿ ಮೂಲ ಎನ್ಸಿಪಿಯಿಂದ ಹೊರನಡೆದು ಬಿಜೆಪಿ ಜತೆ ಕೈಜೋಡಿಸಿದ ಅಜಿತ್ ಪವಾರ್ಗೆ ಮಹಾರಾಷ್ಟ್ರ ಜನತೆ ತಕ್ಕ ಪಾಠ ಕಲಿಸಿದೆ. ಬಿಜೆಪಿ ನೇತೃತ್ವದ ಮಹಾಯುತಿ ಮೈತ್ರಿಕೂಟದಿಂದ ಸ್ಪರ್ಧಿಸಿದ್ದ ಪವಾರ್ ಬಣದ ನಾಲ್ವರು ಅಭ್ಯರ್ಥಿಗಳ ಪೈಕಿ ಒಬ್ಬರು ಮಾತ್ರ ಗೆಲುವು ಸಾಧಿಸಿದ್ದಾರೆ. ಎಲ್ಲಕ್ಕಿಂತ ಮುಖ್ಯವಾಗಿ ತವರು ಕ್ಷೇತ್ರದಲ್ಲೇ ಅಜಿತ್ ಮುಖಭಂಗ ಅನುಭವಿಸಿದ್ದಾರೆ. ಬಾರಾಮತಿ ಲೋಕಸಭಾ ಕ್ಷೇತ್ರದಿಂದ ಸ್ಪರ್ಧಿಸಿದ್ದ ಅಜಿತ್ ಪತ್ನಿ ಸುನೇತ್ರಾ ಸೋಲು ಅನುಭವಿಸಿದ್ದಾರೆ.
ಇದು ಮಹಾರಾಷ್ಟ್ರ ಉಪಮುಖ್ಯಮಂತ್ರಿ ಅಜಿತ್ ಪವಾರ್ ಅವರಿಗೆ ಸಂದಿಗ್ಧ ಸ್ಥಿತಿಯನ್ನು ನಿರ್ಮಿಸಿದೆ. 10 ತಿಂಗಳ ಹಿಂದೆ ರೂಪುಗೊಂಡ ಅಜಿತ್ ನೇತೃತ್ವದ ಎನ್ಸಿಪಿಗೆ, ಅರುಣಾಚಲ ಪ್ರದೇಶ ವಿಧಾನಸಭೆಯಲ್ಲಿ ಮೂರು ಸ್ಥಾನಗಳನ್ನು ಗೆದ್ದರೂ ಪಕ್ಷದ ಭವಿಷ್ಯವೇ ಅನಿಶ್ಚಿತ ಎನಿಸಿದೆ.
ಹಿರಿಯ ಮುತ್ಸದ್ಧಿ ಹಾಗೂ ಮಾವ ಶರದ್ ಪವಾರ್ 1999ರಲ್ಲಿ ಕಟ್ಟಿದ ಪಕ್ಷವನ್ನು 2023ರ ಜುಲೈನಲ್ಲಿ ಅಜಿತ್ ಪವಾರ್ ವಿಭಜಿಸಿದ್ದರು. ಅಜಿತ್ ಬಣ 39 ಶಾಸಕರನ್ನು ಹೊಂದಿ ಆಡಳಿತಾರೂಢ ಮೈತ್ರಿಕೂಟದ ಭಾಗವಾಗಿದ್ದರೂ, ಎನ್ಸಿಪಿ ಹೆಸರು ಮತ್ತು ಚಿಹ್ನೆಯನ್ನು ಪಡೆದ ಹೊರತಾಗಿಯೂ ಕೇವಲ ರಾಯಗಢ ಕ್ಷೇತ್ರದಲ್ಲಿ ಮಾತ್ರ ಗೆಲುವು ಸಾಧಿಸಲು ಸಾಧ್ಯವಾಯಿತು. ಈ ಕ್ಷೇತ್ರದಿಂದ ಹಾಲಿ ಸಂಸದ ಹಾಗೂ ಮಹಾರಾಷ್ಟ್ರ ಎನ್ಸಿಪಿ ಅಧ್ಯಕ್ಷ ಸುನೀಲ್ ತತ್ಕರೆ ಎರಡನೇ ಬಾರಿಗೆ ಸ್ಪರ್ಧಿಸಿದ್ದರು. ಮಹಾರಾಷ್ಟ್ರದಲ್ಲಿ ಚುನಾವಣೆಯಲ್ಲಿ ಸ್ಪರ್ಧಿಸಿದ್ದ ಪಕ್ಷಗಳ ಪೈಕಿ ಕನಿಷ್ಠ ಸ್ಥಾನ ಗೆದ್ದಿರುವುದು ಅಜಿತ್ ಪವಾರ್ ಅವರ ಎನ್ಸಿಪಿ.
ಬಾರಾಮತಿಯ ಹೊರತಾಗಿ 2019ರಲ್ಲಿ ಅವಿಭಜಿತ ಎನ್ಸಿಪಿ ಗೆದ್ದ ಶಿರೂರ್ ಕ್ಷೇತ್ರದಲ್ಲೂ ಎನ್ಸಿಪಿ ಸೋಲು ಅನುಭವಿಸಿದೆ. ಉಸ್ಮನಾಬಾದ್ ಕೂಡಾ ಎನ್ಸಿಪಿಗೆ ಗೆಲುವು ತಂದುಕೊಟ್ಟಿಲ್ಲ. ಶಿರೂರ್ ಕ್ಷೇತ್ರದಲ್ಲಿ ಶರದ್ ಬಣದಲ್ಲೇ ಉಳಿದ ಹಾಲಿ ಸಂಸದ ಅಮೋಲ್ ಕೋಲ್ಹೆ ಅವರನ್ನು ಸೋಲಿಸಲು ಅಜಿತ್ ಪಣ ತೊಟ್ಟಿದ್ದರು. ಅಂತೆಯೇ ಪರ್ನೇರ್ ಕ್ಷೇತ್ರದ ಶಾಸಕರಾಗಿದ್ದ ನೀಲೇಶ್ ಲಂಕೆ, ಚುನಾವಣೆಗೆ ಮೊದಲು ಅಜಿತ್ ಬಣದಿಂದ ಪವಾರ್ ಪಕ್ಷವನ್ನು ಸೇರಿ ಅಹ್ಮದ್ನಗರ ಲೋಕಸಭಾ ಕ್ಷೇತ್ರದಿಂದ ಕಣಕ್ಕೆ ಇಳಿದಿದ್ದರು. ಹಾಲಿ ಸಂಸದ ಬಿಜೆಪಿಯ ಸುಜಯ್ ವಿಖೆ ಪಾಟೀಲ್ ವಿರುದ್ಧ ಲಂಕೆ ಜಯ ಗಳಿಸಿದರು. ಶರದ್ ಬಣಕ್ಕೆ ಮರಳಿದವರಿಗೆ ಆದ ಲಾಭಕ್ಕೆ ಲಂಕೆ ಉದಾಹರಣೆ ಎನಿಸಿದರು.
ಮುಂಬರುವ ವಿಧಾನಸಭಾ ಚುನಾವಣೆಯ ಹಿನ್ನೆಲೆಯಲ್ಲಿ ಪಕ್ಷದ ಭವಿಷ್ಯದ ಬಗ್ಗೆ ಚಿಂತಿಸಬೇಕಾದ ಪರಿಸ್ಥಿತಿ ನಿರ್ಮಾಣವಾಗಿದೆ ಎಂದು ಎನ್ಸಿಪಿ ಮುಖಂಡರೇ ಹೇಳುತ್ತಿದ್ದಾರೆ. ಅವಕಾಶ ಹಾಗೂ ಭವಿಷ್ಯದ ಹಿನ್ನೆಲೆಯಲ್ಲಿ ಮುಖಂಡರು ಶರದ್ ಪವಾರ್ ಬದಲು ಅಜಿತ್ ಪವಾರ್ ಅವರ ಬಣ ಸೇರಿದ್ದರು. ಆದರೆ ಈ ಪಕ್ಷದ ಸಾಧನೆ ಉತ್ತಮವಾಗಿಲ್ಲ ಎನ್ನುವುದನ್ನು ಈ ಚುನಾವಣೆ ತೋರಿಸಿಕೊಟ್ಟಿದ್ದು, ಬಹಳಷ್ಟು ಮಂದಿ ದೋಣಿ ಬದಲಿಸುವ ಚಿಂತನೆಯಲ್ಲಿದ್ದಾರೆ" ಎಂದು ಹಿರಿಯ ಮುಖಂಡರೊಬ್ಬರು ಹೇಳಿದ್ದಾರೆ.