'ಧನಾತ್ಮಕ ಮಾತುಕತೆ' ಬಳಿಕ ರೈತರ ಪಾದಯಾತ್ರೆಗೆ ತಾತ್ಕಾಲಿಕ ತಡೆ

Update: 2024-02-19 04:22 GMT

Photo: twitter.com/the_hindu

ಹೊಸದಿಲ್ಲಿ: ರೈತರ ಎಲ್ಲ ಬೆಳೆಗಳಿಗೆ ಬೆಂಬಲ ಬೆಲೆ ಖಾತರಿಪಡಿಸುವ ಕಾನೂನು ಜಾರಿಗೊಳಿಸಬೇಕು ಎಂದು ಆಗ್ರಹಿಸಿ ರೈತರು ನಡೆಸುತ್ತಿರುವ ಪಾದಯಾತ್ರೆಯನ್ನು ತಾತ್ಕಾಲಿಕವಾಗಿ ತಡೆಹಿಡಿಯಲಾಗಿದೆ. ಕೇಂದ್ರ ಸಚಿವರ ತಂಡದ ಜತೆಗೆ ನಾಲ್ಕನೇ ಸುತ್ತಿನ ಧನಾತ್ಮಕ ಮಾತುಕತೆ ಬಳಿಕ ಈ ನಿರ್ಧಾರಕ್ಕೆ ಬರಲಾಗಿದೆ ಎಂದು ರೈತ ಮುಖಂಡರು ಹೇಳಿದ್ದಾರೆ.

ಪಂಜಾಬ್- ಹರ್ಯಾಣ ಗಡಿಯಲ್ಲಿ ದೆಹಲಿ ಚಲೋ ಯಾತ್ರೆಯನ್ನು ಕೊನೆಗೊಳಿಸುವ ಪ್ರಯತ್ನವಾಗಿ ಕೇಂದ್ರ ಸರ್ಕಾರ ಭಾನುವಾರ ರೈತ ಮುಖಂಡರ ಜತೆ ನಾಲ್ಕನೇ ಸುತ್ತಿನ ಮಾತುಕತೆ ನಡೆಸಿದೆ. ಕನಿಷ್ಠ ಬೆಂಬಲ ಬೆಲೆಗೆ ಕಾನೂನಾತ್ಮಕ ಖಾತರಿ ನೀಡುವ ಸಂಬಂಧ ನಿರ್ಧಾರಕ್ಕೆ ಬರಲು ವಿಫಲವಾದ ಹಿನ್ನೆಲೆಯಲ್ಲಿ ಈ ಹಿಂದೆ ನಡೆಸಿದ ಮಾತುಕತೆಗಳು ಅಪೂರ್ಣವಾಗಿದ್ದವು.

ಈ ಮಧ್ಯೆ ಹರ್ಯಾಣದಲ್ಲಿ ಇಂಟರ್ ನೆಟ್ ಸೇವೆಗಳನ್ನು ಸೋಮವಾರದ ವರೆಗೆ ನಿಷೇಧಿಸಲಾಗಿದೆ. ಇದಕ್ಕೂ ಮುನ್ನ ಈ ತಿಂಗಳ 15ರವರೆಗೆ ನಿಷೇಧಿಸಲಾಗಿತ್ತು. ಎಂಎಸ್ ಪಿಗೆ ಕಾನೂನಾತ್ಮಕ ಮಾನ್ಯತೆ ನೀಡುವಂತೆ ಮತ್ತು ಸ್ವಾಮಿನಾಥನ್ ಸಮಿತಿ ವರದಿಯ ಶಿಫಾರಸ್ಸು ಜಾರಿಗೆ ಆಗ್ರಹಿಸಿ ರೈತರು ನಡೆಸುತ್ತಿರುವ ಪ್ರತಿಭಟನೆ ನಡುವೆಯೇ ಹಿರಿಯ ಕೃಷಿ ಅರ್ಥಶಾಸ್ತ್ರಜ್ಞ ಡಾ.ಶಾರದಾ ಸಿಂಗ್ ಜೋಲ್ ಹೇಳಿಕೆ ನೀಡಿ ರೈತರ ಬೇಡಿಕೆಯನ್ನು ಜಾರಿಗೊಳಿಸುವುದು ಕಾರ್ಯಸಾಧುವಲ್ಲ ಎಂದು ಹೇಳಿದ್ದರು.

ರೈತ ಮುಖಂಡರ ಜತೆ ಭಾನುವಾರ ರಾತ್ರಿ ಸಭೆ ನಡೆಸಿದ ಬಳಿಕ ಹೇಳಿಕೆ ನೀಡಿರುವ ಕೇಂದ್ರ ಸಚಿವ ಪಿಯೂಶ್ ಗೋಯಲ್ ಅವರು, ಸರ್ಕಾರ ಮುಂದಿಟ್ಟಿರುವ ಪ್ರಸ್ತಾವದ ಬಗ್ಗೆ ರೈತಮುಖಂಡರು ಸೋಮವಾರ ನಿರ್ಧಾರ ಕೈಗೊಳ್ಳಲಿದ್ದಾರೆ ಎಂದು ಸ್ಪಷ್ಟಪಡಿಸಿದ್ದಾರೆ.

ರೈತರ ಜತೆ ಒಪ್ಪಂದ ಮಾಡಿಕೊಂಡ ಐದು ವರ್ಷಗಳ ವರೆಗೆ ಬೇಳೆಕಾಳುಗಳು, ಮೆಕ್ಕೆಜೋಳ ಮತ್ತು ಹತ್ತಿ ಬೆಳೆಗಳನ್ನು ಸರ್ಕಾರಿ ಏಜೆನ್ಸಿಗಳು ಕನಿಷ್ಠ ಬೆಂಬಲ ಬೆಲೆಯಲ್ಲಿ ಖರೀದಿಸುವ ಪ್ರಸ್ತಾವವನ್ನು ಕೇಂದ್ರ ಸಚಿವರ ತಂಡ ಮುಂದಿಟ್ಟಿದೆ.

Tags:    

Writer - ವಾರ್ತಾಭಾರತಿ

contributor

Editor - jafar sadik

contributor

Byline - ವಾರ್ತಾಭಾರತಿ

contributor

Similar News