‘ಅಗ್ನಿಪಥ್’ ಯೋಜನೆಯಿಂದ ರಾಷ್ಟ್ರದ ಭದ್ರತೆಗೆ ಹಾನಿ: ಕಾಂಗ್ರೆಸ್

Update: 2024-03-03 15:29 GMT

ರಾಹುಲ್ ಗಾಂಧಿ | Photo: @RahulGandhi 

ಹೊಸದಿಲ್ಲಿ : ‘ಅಗ್ನಿಪಥ್’ ಯೋಜನೆ ಕುರಿತು ಕೇಂದ್ರ ಸರಕಾರವನ್ನು ರವಿವಾರ ತರಾಟೆಗೆ ತೆಗೆದುಕೊಂಡಿರುವ ಕಾಂಗ್ರೆಸ್, ಅದು ದೇಶದ ಭದ್ರತೆಯೊಂದಿಗೆ ರಾಜಿ ಮಾಡಿಕೊಂಡಿದೆ ಹಾಗೂ ಸೇನಾ ಪಡೆಗಳ ನೇಮಕಾತಿ ಪ್ರಕ್ರಿಯೆಗೆ ತೀವ್ರ ಅಡ್ಡಿ ಉಂಟು ಮಾಡಿದೆ ಎಂದು ಹೇಳಿದೆ.

ಮಧ್ಯಪ್ರದೇಶದಲ್ಲಿ ನಡೆದ ‘ಭಾರತ್ ಜೋಡೊ ನ್ಯಾಯ ಯಾತ್ರೆ’ಯ ಸಂದರ್ಭ ಮಾಜಿ ಯೋಧರು, ಸಂಭಾವ್ಯ ಅಗ್ನಿವೀರರು ಹಾಗೂ ಅಗ್ನಿವೀರ್ ಯೋಜನೆ ಆರಂಭಿಸಿರುವುದರಿಂದ ಶಸಸ್ತ್ರ ಪಡೆಗಳಿಗೆ ನೇಮಕಗೊಳ್ಳುವಲ್ಲಿ ತೊಂದರೆಗೆ ಒಳಗಾದ ಯುವಕರೊಂದಿಗೆ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಅವರು ಮಾತುಕತೆ ನಡೆಸಿದ ಬಳಿಕ ಕಾಂಗ್ರೆಸ್ ಈ ವಾಗ್ದಾಳಿ ನಡೆಸಿದೆ.

‘ಭಾರತ್ ಜೋಡೊ ನ್ಯಾಯ ಯಾತ್ರೆ’ಯ 50ನೇ ದಿನವಾದ ಇಂದು ಬೆಳಗ್ಗೆ ರಾಹುಲ್ ಗಾಂಧಿ ಅವರು ಈ ಮೂರು ಗುಂಪುಗಳೊಂದಿಗೆ 40 ನಿಮಿಷಗಳ ಕಾಲ ಮಾತುಕತೆ ನಡೆಸಿದ್ದಾರೆ ಎಂದು ಕಾಂಗ್ರೆಸ್ ನ ಪ್ರಧಾನ ಕಾರ್ಯದರ್ಶಿ (ಸಂವಹನ ಉಸ್ತುವಾರಿ) ಜೈರಾಮ್ ರಮೇಶ್ ‘ಎಕ್ಸ್’ನ ಪೋಸ್ಟ್ನಲ್ಲಿ ಹೇಳಿದ್ದಾರೆ.

‘‘ಶಸಸ್ತ್ರ ಪಡೆಗಳ ನಿಯಮಿತ ನೇಮಕಾತಿಯ ಎಲ್ಲಾ ಔಪಚಾರಿಕತೆಗಳನ್ನು ಪೂರ್ಣಗೊಳಿಸಿದ ಸುಮಾರು 1.5 ಲಕ್ಷ ಯುವಕರು ಇದುವರೆಗೆ ಸೇನೆಗೆ ನೇಮಕಗೊಂಡಿಲ್ಲ. ಇದಕ್ಕೆ ಅಗ್ನಿಪಥ್ ಯೋಜನೆಯನ್ನು ನಿರಂಕುಶವಾಗಿ ಪರಿಚಯಿಸಿರುವುದೇ ಕಾರಣ’’ ಎಂದು ಅವರು ಹೇಳಿದರು.

ಪ್ರಸಕ್ತ ವಿನ್ಯಾಸಗೊಳಿಸಲಾದ ಅಗ್ನಿಪಥ್ ಯೋಜನೆ ಎಲ್ಲಾ ರೀತಿಯಿಂದಲೂ ಹಾನಿಕರವಾಗಿದೆ. ಅಲ್ಲದೆ, ಅದು ನಮ್ಮ ಯೋಧರಿಗೆ ಹಾಗೂ ಯುವಕರಿಗೆ ಅನ್ಯಾಯ ಎಸಗುತ್ತದೆ ಎಂದು ಅವರು ತಿಳಿಸಿದರು.

ಮೋದಿ ಸರಕಾರದ ನೀತಿಗಳ ವಿರುದ್ಧ ಮಾಜಿ ಸೈನಿಕರು ಹಾಗೂ ಅಗ್ನಿವೀರ್ ಆಗಿ ನೇಮಕರಾದವರು ಹಲವು ತಿಂಗಳಿಂದ ಪ್ರತಿಭಟನೆ ನಡೆಸುತ್ತಿದ್ದಾರೆ. ದಿಲ್ಲಿಯ ಜಂತರ್ ಮಂತರ್ನಲ್ಲಿ ಹಲವು ದರಣಿಗಳನ್ನು ನಡೆಸಿದ್ದಾರೆ. ಬಿಹಾರದ ಚಂಪಾರಣ್ ನಿಂದ ಹೊಸದಿಲ್ಲಿಗೆ ಪಾದಯಾತ್ರೆ ನಡೆಸಿದ್ದಾರೆ ಎಂದು ಜೈರಾಮ್ ರಮೇಶ್ ಹೇಳಿದರು.

Tags:    

Writer - ವಾರ್ತಾಭಾರತಿ

contributor

Editor - Ismail

contributor

Byline - ವಾರ್ತಾಭಾರತಿ

contributor

Similar News