ಕಾಂಗ್ರೆಸ್ ಅಧಿಕಾರಕ್ಕೆ ಬಂದರೆ ‘ಅಗ್ನಿಪಥ್’ ರದ್ದು, ಹಳೆಯ ನೇಮಕಾತಿ ಪದ್ಧತಿ ಮರುಜಾರಿ: ಮಲ್ಲಿಕಾರ್ಜುನ ಖರ್ಗೆ
ಹೊಸದಿಲ್ಲಿ: ‘ಅಗ್ನಿಪಥ’ ಸೇನಾ ಭರ್ತಿ ಯೋಜನೆಗೆ ಸಂಬಂಧಿಸಿದಂತೆ ಕೇಂದ್ರ ಸರಕಾರದ ವಿರುದ್ಧ ದಾಳಿಯನ್ನು ತೀವ್ರಗೊಳಿಸಿರುವ ಕಾಂಗ್ರೆಸ್, ಯುವಜನರಿಗೆ ತೀವ್ರ ಅನ್ಯಾಯವನ್ನು ಮಾಡಲಾಗಿದೆ ಎಂದು ಸೋಮವಾರ ಆರೋಪಿಸಿದೆ. ತಾನು ಕೇಂದ್ರದಲ್ಲಿ ಅಧಿಕಾರಕ್ಕೆ ಬಂದರೆ ಹಳೆಯ ನೇಮಕಾತಿ ಪದ್ಧತಿಯನ್ನು ಮರುಜಾರಿಗೊಳಿಸುವುದಾಗಿ ಹೇಳಿದೆ.
ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆಯವರು ರಾಷ್ಟ್ರಪತಿ ದ್ರೌಪದಿ ಮುರ್ಮು ಅವರಿಗೆ ಸೋಮವಾರ ಬರೆದಿರುವ ಪತ್ರದಲ್ಲಿ, ಸಶಸ್ತ್ರ ಪಡೆಗಳಲ್ಲಿ ನಿಯಮಿತ ಉದ್ಯೋಗವನ್ನು ಬಯಸುತ್ತಿರುವ ಯುವಜನರಿಗೆ ‘ಅಗ್ನಿಪಥ್’ ಯೋಜನೆಯಿಂದಾಗಿ ತೀವ್ರ ಅನ್ಯಾಯವಾಗಿರುವುದನ್ನು ಎತ್ತಿ ತೋರಿಸಿದ್ದಾರೆ ಮತ್ತು ಅವರಿಗೆ ನ್ಯಾಯವನ್ನು ಖಚಿತಪಡಿಸುವಂತೆ ಆಗ್ರಹಿಸಿದ್ದಾರೆ.
ಸಶಸ್ತ್ರ ಪಡೆಗಳಲ್ಲಿ ನಿಯಮಿತ ನೇಮಕಾತಿ ಪ್ರಕ್ರಿಯೆಯನ್ನು ರದ್ದಗೊಳಿಸಿರುವುದರಿಂದ ಸುಮಾರು ಎರಡು ಲಕ್ಷ ಯುವಕರು ಮತ್ತು ಯುವತಿಯರ ಭವಿಷ್ಯ ಅನಿರ್ದಿಷ್ಟವಾಗಿದೆ ಎಂದು ಖರ್ಗೆ ಭಾರತೀಯ ಸಶಸ್ತ್ರ ಪಡೆಗಳ ಸರ್ವೋಚ್ಚ ದಂಡನಾಯಕರಾಗಿರುವ ರಾಷ್ಟ್ರಪತಿಗಳಿಗೆ ಬರೆದ ಪತ್ರದಲ್ಲಿ ಹೇಳಿದ್ದಾರೆ.
ಎಐಸಿಸಿ ಕೇಂದ್ರ ಕಚೇರಿಯಲ್ಲಿ ಸುದ್ದಿಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಕಾಂಗ್ರೆಸ್‌ನ ಪ್ರಧಾನ ಕಾರ್ಯದರ್ಶಿ ಸಚಿನ್ ಪೈಲಟ್ ಅವರು, ‘ಅಗ್ನಿಪಥ್ ಯೋಜನೆಗೆ ಯಾವುದೇ ಬೇಡಿಕೆಯಿಲ್ಲ. ದೀರ್ಘಾವಧಿಯಲ್ಲಿ ಭಾರತ ಸರಕಾರಕ್ಕೆ ಸ್ವಲ್ಪ ಹಣವನ್ನು ಉಳಿಸುವುದನ್ನು ಹೊರತುಪಡಿಸಿ ಈ ಯೋಜನೆಯಿಂದ ಯಾರಿಗೂ ಉಪಯೋಗವಿಲ್ಲ. ಹಳೆಯ ನೇಮಕಾತಿ ಪದ್ಧತಿಗೇ ಮರಳಬೇಕು ಎಂದು ನಾವು ಭಾವಿಸಿದ್ದೇವೆ. ಸಶಸ್ತ್ರ ಪಡೆಗಳನ್ನು ಆಧುನೀಕರಿಸಲು ಕೆಲವು ಬದಲಾವಣೆಗಳನ್ನು ತರಬೇಕಿದ್ದರೆ ಪ್ರಸ್ತುತ ವ್ಯವಸ್ಥೆಯಲ್ಲಿ ಅದು ಸಾಧ್ಯವಿದೆ,ಆದರೆ ಹಳೆಯ ನೇಮಕಾತಿ ಪದ್ಧತಿಯನ್ನು ಸಂಪೂರ್ಣವಾಗಿ ಕೈಬಿಡುವುದು ಸರಿಯಲ್ಲ ’ಎಂದರು.