ವಾಹನ ದರೋಡೆ ಪ್ರಕರಣ: ಅಗ್ನಿವೀರ್ ಸಹಿತ ಮೂವರು ಆರೋಪಿಗಳ ಬಂಧನ
ಚಂಡೀಗಢ: ವಾಹನ ದರೋಡೆ ಪ್ರಕರಣದಲ್ಲಿ ಓರ್ವ ಅಗ್ನಿವೀರ್ ಸೇರಿದಂತೆ ಮೂವರು ಯುವಕರನ್ನು ಬಂಧಿಸಲಾಗಿದೆ ಎಂದು ಬುಧವಾರ ಮೊಹಾಲಿ ಪೊಲೀಸರು ತಿಳಿಸಿದ್ದಾರೆ.
ಆರೋಪಿಗಳನ್ನು ಅಗ್ನಿವೀರ ಇಶ್ಮೀತ್ ಸಿಂಗ್ ಅಲಿಯಾಸ್ ಈಶು, ಪ್ರಭ್ ಪ್ರೀತ್ ಸಿಂಗ್ ಅಲಿಯಾಸ್ ಪ್ರಭ್ ಹಾಗೂ ಬಾಲ್ ಕರಣ್ ಸಿಂಗ್ ಎಂದು ಗುರುತಿಸಲಾಗಿದ್ದು, ಅವರೆಲ್ಲ ಮೊಹಾಲಿಯ ಬಲೋಂಗಿಯಲ್ಲಿ ಕೊಠಡಿಯೊಂದನ್ನು ಬಾಡಿಗೆಗೆ ಪಡೆದಿದ್ದರು ಎಂದು ಪೊಲೀಸರು ಹೇಳಿದ್ದಾರೆ.
ಮೊಹಾಲಿಯಲ್ಲಿ ಸುದ್ದಿಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಹಿರಿಯ ಪೊಲೀಸ್ ವರಿಷ್ಠಾಧಿಕಾರಿ ಸಂದೀಪ್ ಕುಮಾರ್ ಗರ್ಗ್, ಎರಡು ದಿನಗಳ ಹಿಂದೆ ಆ್ಯಪ್ ಮೂಲಕ ಕಾರೊಂದನ್ನು ಕಾಯ್ದಿರಿಸಿದ್ದ ಮೂವರು ಆರೋಪಿಗಳು, ಆ ಕಾರಿನ ಚಾಲಕನಿಗೆ ಬಂದೂಕಿನಿಂದ ಬೆದರಿಸಿ, ಕಾರನ್ನು ಕಳವು ಮಾಡಿಕೊಂಡು ಪರಾರಿಯಾಗಿದ್ದರು ಎಂದು ತಿಳಿಸಿದ್ದಾರೆ.
ಅವರು ಕಾರನ್ನು ಕಳವು ಮಾಡುವಾಗ, ಕಾರಿನ ಚಾಲಕನ ಮುಖದ ಮೇಲೆ ಪೆಪ್ಪರ್ ಸ್ಪ್ರೇ ಸಿಂಪಡಿಸಿದ್ದರು ಎಂದು ಅವರು ಹೇಳಿದ್ದಾರೆ.
ಸದ್ಯ ಪಶ್ಚಿಮ ಬಂಗಾಳದಲ್ಲಿ ನಿಯೋಜಿತನಾಗಿರುವ ಇಶ್ಮೀತ್, ತನ್ನ ಒಂದು ತಿಂಗಳ ಅವಧಿಯ ರಜೆ ತೀರಿದರೂ ಎರಡು ತಿಂಗಳಿನಿಂದ ಪಂಜಾಬಿನಲ್ಲೇ ಉಳಿದುಕೊಂಡಿದ್ದು, ಆತ ಮತ್ತೆ ಕರ್ತವ್ಯಕ್ಕೆ ಸೇರ್ಪಡೆಯಾಗಿಲ್ಲ. ಆತ ಪಂಜಾಬಿನ ಫಝಿಲ್ಕ ಜಿಲ್ಲೆಯ ನಿವಾಸಿಯಾಗಿದ್ದಾನೆ ಎಂದು ಅವರು ತಿಳಿಸಿದ್ದಾರೆ.
ಕಾರಿನ ದರೋಡೆ ಪ್ರಕರಣದ ಕುರಿತು ತನಿಖೆಯನ್ನು ಕೈಗೆತ್ತಿಕೊಳ್ಳಲಾಗಿತ್ತು. ಮುಂದುವರಿದ ತನಿಖೆಯ ನಂತರ ಬುಧವಾರ ಆರೋಪಿಗಳನ್ನು ಬಂಧಿಸಲಾಯಿತು ಎಂದು ಅವರು ಮಾಹಿತಿ ನೀಡಿದ್ದಾರೆ.
ಆರೋಪಿಗಳು ಇನ್ನಷ್ಟು ವಾಹನ ದರೋಡೆ ಹಾಗೂ ಕಳವು ಪ್ರಕರಣಗಳಲ್ಲೂ ಭಾಗಿಯಾಗಿದ್ದು, ಕೃತ್ಯ ಮುಗಿದ ನಂತರ ಅವರು ಫಝಿಲ್ಕದಿಂದ ಪರಾರಿಯಾಗುತ್ತಿದ್ದರು ಎಂದು ಅವರು ತಿಳಿಸಿದ್ದಾರೆ.
“ಇಶ್ಮೀತ್ ಸಿಂಗ್ 2022ರಲ್ಲಿ ಅಗ್ನಿವೀರನಾಗಿ ನೋಂದಣಿಗೊಂಡಿದ್ದ. ಆತ ಎರಡು ತಿಂಗಳ ಹಿಂದೆ ರಜೆಯ ಮೇಲೆ ತವರಿಗೆ ಮರಳಿದ್ದನಾದರೂ, ಮತ್ತೆ ಕರ್ತವ್ಯಕ್ಕೆ ಹಾಜರಾಗಿಲ್ಲ” ಎಂದು ಅವರು ಹೇಳಿದ್ದಾರೆ.
ಆರೋಪಿಗಳಿಂದ ಒಂದು ಕಳವು ಮಾಡಿದ ಸ್ಕೂಟರ್, ಒಂದು ಮೋಟರ್ ಸೈಕಲ್ ಹಾಗೂ ಸ್ವದೇಶಿ ಪಿಸ್ತೂಲನ್ನು ವಶಪಡಿಸಿಕೊಳ್ಳಲಾಗಿದೆ ಎಂದೂ ಅವರು ತಿಳಿಸಿದ್ದಾರೆ.