ದಿಲ್ಲಿ ಬಳಿಕ ಅಹಮದಾಬಾದ್ ನ ಹಲವು ಶಾಲೆಗಳಿಗೆ ಬಾಂಬ್ ಬೆದರಿಕೆ
ಅಹಮದಾಬಾದ್: ಸೋಮವಾರ ಅಹಮದಾಬಾದ್ ನ ಹಲವು ಶಾಲೆಗಳು ಬಾಂಬ್ ಸ್ಫೋಟದ ಬೆದರಿಕೆ ಈಮೇಲ್ ಅನ್ನು ಸ್ವೀಕರಿಸಿವೆ ಎಂದು ಪೊಲೀಸರು ತಿಳಿಸಿದ್ದಾರೆ.
ದಿಲ್ಲಿ ಪಬ್ಲಿಕ್ ಸ್ಕೂಲ್ (ಬೋಪಾಲ್), ಆನಂದ್ ನಿಕೇತನ್ (ಬೋಪಾಲ್), ಏಶ್ಯಾ ಇಂಗ್ಲಿಷ್ ಸ್ಕೂಲ್ (ವಸ್ತ್ರಪುರ್), ಕ್ಯಾರೊಲೆಕ್ಸ್ ಸ್ಕೂಲ್ (ಘಟ್ಲೋಡಿಯ), ಅಮೃತ ವಿದ್ಯಾಲಯ (ಘಟ್ಲೋಡಿಯ), ನ್ಯೂ ನೋಬಲ್ ಸ್ಕೂಲ್ ಹಾಗೂ ಒಎನ್ಜಿ ಸಿ ಕೇಂದ್ರೀಯ ವಿದ್ಯಾಲಯ (ಚಾಂದ್ ಖೇಡ) ಬೆದರಿಕೆ ಈಮೇಲ್ ಅನ್ನು ಸ್ವೀಕರಿಸಿರುವ ಶಾಲೆಗಳು.
ಬೆದರಿಕೆಯಿಂದ ತೊಂದರೆಗೊಳಗಾಗಿರುವ ಶಾಲೆಗಳ ಪ್ರಾಧಿಕಾರಗಳು ಪೊಲೀಸರಿಗೆ ಮಾಹಿತಿ ನೀಡಿದೆ. ಬೇಸಿಗೆ ರಜೆಯ ಹಿನ್ನೆಲೆಯಲ್ಲಿ ಶಾಲೆಗಳನ್ನು ಮುಚ್ಚಿರುವುದರಿಂದ, ಮಕ್ಕಳ ಸುರಕ್ಷತೆಯ ಕುರಿತು ಯಾವುದೇ ಪ್ರಮುಖ ಕ್ರಮವನ್ನು ತೆಗೆದುಕೊಳ್ಳಲಾಗಿಲ್ಲ.
ಬೆದರಿಕೆ ಈಮೇಲ್ ಗಳ ಕುರಿತು ಮಾಹಿತಿ ಸ್ವೀಕರಿಸಿದ ನಂತರ ಪೊಲೀಸ್ ತಂಡಗಳು ಬಾಂಬ್ ನಿಷ್ಕ್ರಿಯ ತಂಡಗಳೊಂದಿಗೆ ನಗರದ ಹಲವು ಶಾಲೆಗಳನ್ನು ತಲುಪಿದವು.
ಭಾರತದ ಹೊರಗಿನ ಡೊಮೈನ್ ಮೂಲಕ ಬೆದರಿಕೆ ಈಮೇಲ್ ಗಳನ್ನು ರವಾನಿಸಲಾಗಿದೆ. ಈ ಕುರಿತು ಪೊಲೀಸ್ ತನಿಖೆ ಪ್ರಗತಿಯಲ್ಲಿದೆ.
ಗಾಬರಿಗೊಳ್ಳಬೇಕಾದ ಅಗತ್ಯವಿಲ್ಲ ಎಂದು ಅಭಯ ನೀಡಿರುವ ಪೊಲೀಸರು, ಗುಜರಾತ್ ನಲ್ಲಿನ ಲೋಕಸಭಾ ಚುನಾವಣೆಗೂ ಮುನ್ನಾ ದಿನ ಮುನ್ನೆಚ್ಚರಿಕೆಯನ್ನು ರವಾನಿಸಿದ್ದಾರೆ. ಮೇ 7(ಮಂಗಳವಾರ)ರಂದು ಗುಜರಾತ್ ನ 26 ಲೋಕಸಭಾ ಕ್ಷೇತ್ರಗಳಿಗೆ ಮತದಾನ ನಡೆಯಲಿದೆ.
ಈ ಕುರಿತು ಪ್ರತಿಕ್ರಿಯಿಸಿರುವ ಬಾಂಬ್ ನಿಷ್ಕ್ರಿಯ ದಳದ ಅಧಿಕಾರಿ ಬಿ.ಯಾದವ್, “ಎಲ್ಲವೂ ಸುರಕ್ಷಿತ ಮತ್ತು ಸನ್ನದ್ಧ ಸ್ಥಿತಿಯಲ್ಲಿವೆ. ಈ ಕುರಿತು ನಮ್ಮ ಪೊಲೀಸರು, ಜಿಲ್ಲಾಡಳಿತ ಮತ್ತು ತನಿಖಾ ಸಂಸ್ಥೆಗಳು ತನಿಖೆ ನಡೆಸುತ್ತಿವೆ. ಗಾಬರಿಗೊಳ್ಳಬೇಕಾದ ಯಾವುದೇ ಅಗತ್ಯವಿಲ್ಲ” ಎಂದು ಅಭಯ ನೀಡಿದ್ದಾರೆ.
ಕಳೆದ ವಾರ, ದಿಲ್ಲಿ-ಎನ್ಸಿರ್ ಪ್ರದೇಶದಾದ್ಯಂತ ಇರುವ 150ಕ್ಕೂ ಹೆಚ್ಚು ಶಾಲೆಗಳು ಹಾಗೂ ಲಕ್ನೋದ ಒಂದು ಶಾಲೆಯು ಬಾಂಬ್ ಬೆದರಿಕೆ ಈಮೇಲ್ ಸ್ವೀಕರಿಸಿದ್ದರಿಂದ, ದೊಡ್ಡ ಮಟ್ಟದಲ್ಲಿ ವಿದ್ಯಾರ್ಥಿಗಳನ್ನು ತೆರವುಗೊಳಿಸಲಾಗಿತ್ತು. ನಂತರ, ಈ ಶಾಲೆಗಳಿಗೆ ಕಳಿಸಲಾಗಿದ್ದ ಬೆದರಿಕೆ ಈಮೇಲ್ ಗಳು ಹುಸಿ ಬೆದರಿಕೆಗಳು ಎಂದು ಪೊಲೀಸರು ತಿಳಿಸಿದ್ದರು.
ದಿಲ್ಲಿ-ಎನ್ಸಿಿಆರ್ ಪ್ರದೇಶದಾದ್ಯಂತ ಇರುವ 150 ಶಾಲೆಗಳಿಗೆ ರವಾನಿಸಲಾಗಿದ್ದ ಬೆದರಿಕೆ ಈಮೇಲ್ ಗಳ ಐಪಿ ವಿಳಾಸವು ರಶ್ಯದ್ದಾಗಿತ್ತು ಎಂಬ ಸಂಗತಿ ಪ್ರಾಥಮಿಕ ತನಿಖೆಯಲ್ಲಿ ಕಂಡು ಬಂದಿದೆ ಎಂದು ಮೂಲಗಳು ತಿಳಿಸಿದ್ದವು. ಐಪಿ ವಿಳಾಸವನ್ನು ವಿಪಿಎನ್ ಮೂಲಕ ಮರೆಮಾಚಿರಬಹುದು ಎಂದು ದಿಲ್ಲಿ ಪೊಲೀಸರು ಶಂಕಿಸಿದ್ದಾರೆ.