ಬಾಂಬ್ ಬೆದರಿಕೆ | ಏರ್ ಇಂಡಿಯಾ ಎಕ್ಸ್‌ಪ್ರೆಸ್ ವಿಮಾನ ಅಯೋಧ್ಯೆಯಲ್ಲಿ ತುರ್ತು ಭೂಸ್ಪರ್ಶ
ಹೊಸದಿಲ್ಲಿ : ಮಂಗಳವಾರ ಜೈಪುರದಿಂದ ಅಯೋಧ್ಯೆಗೆ ಸಾಗುತ್ತಿದ್ದ ಏರ್ ಇಂಡಿಯಾ ಎಕ್ಸ್‌ಪ್ರೆಸ್ ವಿಮಾನಕ್ಕೆ ದೂರವಾಣಿ ಮೂಲಕ ಬಾಂಬ್ ಬೆದರಿಕೆ ಬಂದಿದ್ದು,ವಿಮಾನವು ಅಪರಾಹ್ನ 1:59ಕ್ಕೆ ಅಯೋಧ್ಯೆ ವಿಮಾನ ನಿಲ್ದಾಣದಲ್ಲಿ ತುರ್ತು ಭೂಸ್ಪರ್ಶ ಮಾಡಿದೆ ಎಂದು ವಿಮಾನ ನಿಲ್ದಾಣದ ನಿರ್ದೇಶಕ ವಿನೋದ ಕುಮಾರ ಸುದ್ದಿಸಂಸ್ಥೆಗೆ ತಿಳಿಸಿದರು. ವಿಮಾನವು ಅಪರಾಹ್ನ 12:25ಕ್ಕೆ ಜೈಪುರದಿಂದ ನಿರ್ಗಮಿಸಿತ್ತು.
ವಿಮಾನದಲ್ಲಿಯ ಪ್ರಯಾಣಿಕರನ್ನು ಸುರಕ್ಷಿತವಾಗಿ ಕೆಳಗಿಳಿಸಲಾಗಿದೆ. ವಿಮಾನ ನಿಲ್ದಾಣದಲ್ಲಿಯ ಪ್ರತ್ಯೇಕ ಸ್ಥಳದಲ್ಲಿ ವಿಮಾನವನ್ನು ನಿಲ್ಲಿಸಿ ಬಾಂಬ್ ನಿಷ್ಕ್ರಿಯ ದಳ ಮತ್ತು ಶ್ವಾನದಳ ಆಮೂಲಾಗ್ರ ಪರಿಶೀಲನೆ ನಡೆಸಿವೆ. ಯಾವುದೇ ಸ್ಫೋಟಕ ಪತ್ತೆಯಾಗಿಲ್ಲ ಎಂದು ಬಲ್ಲ ಮೂಲಗಳು ತಿಳಿಸಿವೆ.
ಸೋಮವಾರ ಮುಂಬೈನಿಂದ ನ್ಯೂಯಾರ್ಕ್‌ಗೆ ಹಾರುತ್ತಿದ್ದ ಏರ್ ಇಂಡಿಯಾ ವಿಮಾನವನ್ನು ಬಾಂಬ್ ಬೆದರಿಕೆಯಿಂದಾಗಿ ದಿಲ್ಲಿಗೆ ತಿರುಗಿಸಲಾಗಿತ್ತು. ಮುಂಬೈ ವಿಮಾನ ನಿಲ್ದಾಣವು ಎಕ್ಸ್ ನಲ್ಲಿ ಬೆದರಿಕೆ ಸಂದೇಶವನ್ನು ಸ್ವೀಕರಿಸಿತ್ತು.