ಟೇಕಾಫ್ ಆಗುವುದಕ್ಕೂ ಮುನ್ನ ಟ್ರಕ್ ಗೆ ಢಿಕ್ಕಿ ಹೊಡೆದ ಏರ್ ಇಂಡಿಯಾ ವಿಮಾನ
ಪುಣೆ: ದಿಲ್ಲಿಗೆ ತೆರಳಬೇಕಿದ್ದ ಏರ್ ಇಂಡಿಯಾ ವಿಮಾನವು ರನ್ ವೇಯತ್ತ ಚಲಿಸುವಾಗ ಟ್ರಕ್ ಒಂದಕ್ಕೆ ಢಿಕ್ಕಿ ಹೊಡೆದಿರುವ ಘಟನೆ ಗುರುವಾರ ಪುಣೆ ವಿಮಾನ ನಿಲ್ದಾಣದಲ್ಲಿ ನಡೆದಿದೆ ಎಂದು ANI ಸುದ್ದಿ ಸಂಸ್ಥೆ ವರದಿ ಮಾಡಿದೆ.
ಈ ಘಟನೆಯ ಸಂದರ್ಭದಲ್ಲಿ ವಿಮಾನದಲ್ಲಿ ಸುಮಾರು 180 ಪ್ರಯಾಣಿಕರಿದ್ದರು ಎಂದು ಹೇಳಲಾಗಿದೆ. ಆದರೆ, ಈ ಘಟನೆಯಲ್ಲಿ ಯಾರೂ ಗಾಯಗೊಂಡಿಲ್ಲ.
ಈ ಕುರಿತು ಪ್ರತಿಕ್ರಿಯಿಸಿರುವ ವಿಮಾನ ನಿಲ್ದಾಣದ ಅಧಿಕಾರಿಯೊಬ್ಬರು, ಈ ಘಟನೆಯಲ್ಲಿ ವಿಮಾನದ ಮೂತಿಗೆ ಹಾಗೂ ಭೂಸ್ಪರ್ಶ ಮಾಡುವ ಗೇರ್ ಬಳಿ ಇರುವ ಟೈರ್ ಗೆ ಹಾನಿಯಾಗಿದೆ. ಡಿಕ್ಕಿಯ ಹೊರತಾಗಿಯೂ ವಿಮಾನದಲ್ಲಿದ್ದ ಪ್ರಯಾಣಿಕರು ಹಾಗೂ ಸಿಬ್ಬಂದಿಗಳೆಲ್ಲ ಸುರಕ್ಷಿತವಾಗಿದ್ದಾರೆ ಎಂದು ವರದಿಯಾಗಿದೆ” ಎಂದು ತಿಳಿಸಿದ್ದಾರೆ.
ಘಟನೆಯ ಬೆನ್ನಿಗೇ, ತುರ್ತು ಶಿಷ್ಟಾಚಾರಗಳನ್ನು ತ್ವರಿತವಾಗಿ ಕೈಗೊಳ್ಳಲಾಯಿತು ಹಾಗೂ ಈ ಘಟನೆಯಲ್ಲಿ ಭಾಗಿಯಾಗಿದ್ದ ಎಲ್ಲರ ಸುರಕ್ಷತೆಯನ್ನು ಖಾತರಿ ಪಡಿಸಲಾಯಿತು.
ಘಟನೆಯನ್ನು ದೃಢಪಡಿಸಿರುವ ಪುಣೆ ವಿಮಾನ ನಿಲ್ದಾಣದ ಅಧಿಕಾರಿಗಳು, ತಕ್ಷಣವೇ ವಿಮಾನದಲ್ಲಿನ ಎಲ್ಲ ಪ್ರಯಾಣಿಕರನ್ನು ಕೆಳಗಿಳಿಸಲಾಯಿತು ಹಾಗೂ ದಿಲ್ಲಿಗೆ ತೆರಳಲು ಅವರಿಗೆ ಪರ್ಯಾಯ ವಿಮಾನದ ವ್ಯವಸ್ಥೆ ಮಾಡಲಾಯಿತು” ಎಂದು ತಿಳಿಸಿದ್ದಾರೆ.
ಢಿಕ್ಕಿಯ ಕಾರಣವನ್ನು ಪತ್ತೆ ಹಚ್ಚಲು ನಾಗರಿಕ ವಿಮಾನ ಯಾನ ನಿರ್ದೇಶನಾಲಯವು ತನಿಖೆ ಕೈಗೊಂಡಿದೆ.